ಮುಳ್ಳೇರಿಯ: ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸಹಾಯಕ ಅರ್ಚಕನಾಗಿ ಸೇವೆಸಲ್ಲಿಸುತ್ತಿದ್ದ ವಿಟ್ಲ ನಿವಾಸಿ ಬಿ. ಅನಂತಕೃಷ್ಣ ಭಟ್ಟ(49) ಮೃತದೇಹ ಮಲ್ಲ ಕ್ಷೇತ್ರ ಸಮೀಪದ ತೋಡಿನಲ್ಲಿ ಪತ್ತೆಯಾಗಿದೆ. ಕಳೆದ 27ವರ್ಷಗಳಿಂದ ಮಲ್ಲ ದೇಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು, ಭಾನುವಾರ ಮಧ್ಯಾಹ್ನ ನಾಪತ್ತೆಯಾಗಿದ್ದರು. ಸಂಜೆಯ ಪೂಜೆಗೆ ಇವರು ದೇವಸ್ಥಾನಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ವಾಸಸ್ಥಳದಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ನಂತರ ದೇವಾಲಯದ ಸಿಸಿ ಕ್ಯಾಮರಾ ತಪಾಸಣೆ ನಡೆಸಿದಾಗ ತೋಟದ ಭಾಗಕ್ಕೆ ನಡೆದುಹೋಗುತ್ತಿರುವುದು ಕಂಡುಬಂದಿದ್ದು, ಕೃಷಿಅಗತ್ಯಕ್ಕಾಗಿ ತಡೆಗೋಡೆ ನಿರ್ಮಿಸಿ ನೀರು ದಾಸ್ತಾನುಮಾಡಲಾಗಿದ್ದ ತೋಡಿನಲ್ಲಿ ಮೃತದೇಹ ಪತ್ತೆಯಾಗಿದೆ. ಕಾಸರಗೋಡು ಅಗ್ನಿಶಾಮಕ ದಳದವರು ಆಗಮಿಸಿ ಮೃತದೇಹ ಮೇಲಕ್ಕೆತ್ತಿದ್ದರು. ವೆಂಕಟ್ರಮಣ ಭಟ್-ಕಲಾವತಿ ದಂಪತಿ ಪುತ್ರನಾದ ಇವರು ಅವಿವಾಹಿತರಾಗಿದ್ದರು.


