ಕಣ್ಣೂರು: ಸ್ಥಳೀಯಾಡಳಿತ ಚುನಾವಣೆ ಹಿಂದಿನ ದಿನ ಬಿಜೆಪಿ ಕಾರ್ಯಕರ್ತನ ಜತೆ ಪರಾರಿಯಾಗಿದ್ದ ಕಣ್ಣೂರಿನ ಚೋಕ್ಲಿ ಗ್ರಾ. ಪಂ. ನ 9ನೇ ವಾರ್ಡಿನ ಮುಸ್ಲಿಂಲೀಗ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿ. ಪಿ. ಅರುವಾ(29)ಕೇವಲ ನೂರು ಮತಗಳನ್ನು ಮಾತ್ರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಎಡರಂಗ ಅಭ್ಯರ್ಥಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಇಲ್ಲಿ ಎರಡನೇ ಸ್ಥಾನದಲ್ಲಿದೆ.
ನಾಮಪತ್ರ ಸಲ್ಲಿಕೆಯಿಂದ ತೊಡಗಿ, ಮನೆ ಮನೆ ಪ್ರಚಾರ ಆರಂಭಿಸಿದ್ದ ಅರುವಾ ಚುನಾವಣೆಯ ಹಿಂದಿನ ದಿನ ಪ್ರಿಯತಮ, ಬಿಜೆಪಿ ಕಾರ್ಯಕರ್ತನ ಜತೆ ಪರಾರಿಯಾಗಿದ್ದಳು. ನಂತರ ಜೋಡಿ ಠಾಣೆಗೆ ಹಾಜರಾಗಿದ್ದು, ಪೊಲೀಸರು ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಯುವತಿ ಪ್ರಿಯತಮನ ಜತೆ ತೆರಳುವ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ತಮ್ಮಿಚ್ಛೆಯಂತೆ ನಡೆದುಕೊಳ್ಳಲು ನೀಡಿದ ಆದೇಶದನ್ವಯ ಇಬ್ಬರೂ ಜೊತೆಯಾಗಿ ತೆರಳಿದ್ದರು.

