ರಾಯಪುರ: ಹಿಂದಿ ಭಾಷೆಯಲ್ಲಿನ ಸಾಹಿತ್ಯ ಸೃಜನೆಗೆ 'ಜ್ಞಾನಪೀಠ ಪ್ರಶಸ್ತಿ' ಪಡೆದಿದ್ದ ಛತ್ತೀಸಗಢದ ಹಿರಿಯ ಸಾಹಿತಿ ವಿನೋದ್ ಕುಮಾರ್ ಶುಕ್ಲಾ ಇಂದು ಸಂಜೆ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಗಳು ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ರಾಯಪುರದ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ನಾಳೆ ಸಂಜೆ ರಾಯಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಶುಕ್ಲಾ ಅವರು ಪತ್ನಿ, ಮಗ, ಮಗಳನ್ನು ಅಗಲಿದ್ದಾರೆ.
ಕಳೆದ ನವೆಂಬರ್ 2 ರಂದು ವಿನೋದ್ ಕುಮಾರ್ ಶುಕ್ಲಾ 59 ನೇ ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಿದ್ದರು. ಹಿಂದಿಯ ಪ್ರಮುಖ ಸಾಹಿತಿಯಾಗಿದ್ದ ಶುಕ್ಲಾ ಅವರು ಜ್ಞಾನಪೀಠ ಪ್ರಶಸ್ತಿ ಪಡೆದ ಛತ್ತೀಸಗಢ ರಾಜ್ಯದ ಮೊದಲ ಸಾಹಿತಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು.
'ನೌಕರ್ ಕಿ ಕಮೀಜ್', 'ಕಿಲೇಗಾ ತೊ ದೇಖೆಗಾ' ಸೇರಿದಂತೆ ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದರು. 'ನೌಕರ್ ಕಿ ಕಮೀಜ್' ಕೃತಿ ಆಧರಿಸಿ ಅದೇ ಹೆಸರಿಲ್ಲಿ ಹಿಂದಿ ಭಾಷೆಯಲ್ಲಿ ಸಿನಿಮಾ ಸಹ (1999) ಬಂದಿತ್ತು.

