ಟೊರೆಂಟೊ: ಕೆನಡಾದಲ್ಲಿರುವ ಭಾರತೀಯ ಮಹಿಳಾ ಪ್ರಜೆಗಳಿಗೆ ಸಂಕಷ್ಟ ಎದುರಾದ ಸಂದರ್ಭದಲ್ಲಿ ನೆರವು ಒದಗಿಸಲು ಇಲ್ಲಿನ ಭಾರತೀಯ ಕಾನ್ಸುಲೇಟ್ ಕಚೇರಿಯು 'ದಿ ಒನ್ ಸ್ಟಾಪ್ ಸೆಂಟರ್ ಫಾರ್ ವುಮೆನ್' (ಒಎಸ್‌ಸಿಡಬ್ಲ್ಯೂ) ಎಂಬ ಸಹಾಯ ಕೇಂದ್ರ ಆರಂಭಿಸಿದೆ. ಜತೆಗೆ 24/7 ಸಹಾಯವಾಣಿ ಸೌಕರ್ಯವನ್ನೂ ಒದಗಿಸಿದೆ.
'ಕೌಟುಂಬಿಕ ದೌರ್ಜನ್ಯ, ನಿಂದನೆ, ಕೌಟುಂಬಿಕ ಕಲಹ, ಶೋಷಣೆ ಹಾಗೂ ಕಾನೂನು ಸಂಘರ್ಷಗಳನ್ನು ಎದುರಿಸುತ್ತಿರುವ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಮಹಿಳೆಯರಿಗೆ ಅಗತ್ಯ ನೆರವು, ಸಲಹೆ ಒದಗಿಸುವುದು ಒಎಸ್‌ಸಿಡಬ್ಲ್ಯೂ ಸಹಾಯ ಕೇಂದ್ರದ ಉದ್ದೇಶ. ಇಂಥ ಮಹಿಳೆಯರಿಗೆ ತಕ್ಷಣದ ಸಮಾಲೋಚನೆ, ಮಾನಸಿಕ ಹಾಗೂ ಸಾಮಾಜಿ ಬೆಂಬಲಕ್ಕೆ ವ್ಯವಸ್ಥೆ, ಕಾನೂನಾತ್ಮಕ ನೆರವು ಮತ್ತು ಸಲಹೆಯನ್ನು ಕೇಂದ್ರ ಒದಗಿಸಲಿದೆ' ಎಂದು ಕಾನ್ಸುಲೇಟ್ ಕಚೇರಿ ತಿಳಿಸಿದೆ.
ಭಾರತೀಯ ಕಾನ್ಸುಲೇಟ್‌ನಲ್ಲಿ ಈ ಸಹಾಯ ಕೇಂದ್ರ ಇರಲಿದ್ದು, ಕೇಂದ್ರದ ಆಡಳಿತ ಮುಖ್ಯಸ್ಥರನ್ನು +1 (437) 552 3309 and osc.toronto@mea.gov.in ಮೂಲಕ ತಲುಪಬಹುದು. ಕೇಂದ್ರದ ಎಲ್ಲಾ ಕಾರ್ಯಗಳು ಸ್ಥಳೀಯ ಕಾನೂನಿನ ವ್ಯಾಪ್ತಿಯಲ್ಲಿ ಇರಲಿದ್ದು, ಎಲ್ಲಾ ಹಣಕಾಸು ನೆರವಿನ ವ್ಯವಹಾರಗಳು ಭಾರತದ ಸರ್ಕಾರದ ನಿಯಮಗಳ ಆಧಾರದಲ್ಲಿ ಇರಲಿವೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

