ನವದೆಹಲಿ: 'ಭಾರತದ ಸಂವಿಧಾನವನ್ನು ನಿರ್ಮೂಲನೆ ಮಾಡಲು ಬಿಜೆಪಿ ಯತ್ನಿಸುತ್ತಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕಳೆದ ವಾರ ಜರ್ಮನಿಯ ಬರ್ಲಿನ್‌ನಲ್ಲಿ ರಾಹುಲ್ ಈ ಕುರಿತು ಭಾಷಣ ಮಾಡಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಪಕ್ಷವು ವಿಡಿಯೊ ಬಿಡುಗಡೆ ಮಾಡಿದೆ.
'ದೇಶದ ಸಾಂಸ್ಥಿಕ ಸಂಸ್ಥೆಗಳ ಮೇಲೆ ಬಿಜೆಪಿ ಪೂರ್ಣ ಪ್ರಮಾಣದ ದಾಳಿಯನ್ನು ನಡೆಸುತ್ತಿದ್ದು, ಸಂವಿಧಾನದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ' ಎಂದು ರಾಹುಲ್ ಹೇಳಿದ್ದಾರೆ.
'ಏನಾಗುತ್ತಿದೆ ಎಂದರೆ ದೇಶದ ಎರಡು ದೂರದೃಷ್ಟಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಒಂದು ದೃಷ್ಟಿಕೋನವು ಒಬ್ಬ ಪ್ರಬಲ ನಾಯಕನ (ಬಿಜೆಪಿ ಮತ್ತು ಆರ್‌ಎಸ್‌ಎಸ್) ಆಡಳಿತದಲ್ಲಿ ನಂಬಿಕೆಯಿರಿಸಿದೆ. ಮತ್ತೊಂದು ದೃಷ್ಟಿಕೋನವು ದೇಶವನ್ನು ಚರ್ಚೆ, ಸಂವಾದ, ಒಗ್ಗಟ್ಟು ಮತ್ತು ವೈವಿಧ್ಯಮಯ ರಾಜ್ಯಗಳ ಹಾಗೂ ಸಂಸ್ಕೃತಿಯ ಮೂಲಕ ಮುನ್ನಡೆಸಬೇಕೆಂದು ಬಯಸುತ್ತದೆ. ಆದರೆ ಬಿಜೆಪಿ ಸರ್ಕಾರವು ಚರ್ಚೆಯನ್ನು ಬಯಸುವುದಿಲ್ಲ' ಎಂದು ಟೀಕಿಸಿದ್ದಾರೆ.
ಒಂದು ತಾಸು ಅವಧಿಯ ವಿಡಿಯೊದಲ್ಲಿ ಭಾರತದ ಪ್ರಜಾಪ್ರಭುತ್ವ ಮೇಲಿನ ದಾಳಿಯು ಜಾಗತಿಕ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ' ಎಂದು ರಾಹುಲ್ ಉಲ್ಲೇಖಿಸಿದ್ದಾರೆ.
'ಸಂವಿಧಾನವನ್ನು ತೆಗೆದು ಹಾಕುವುದು ಬಿಜೆಪಿಯ ಮೊದಲ ಆದ್ಯತೆಯಾಗಿದೆ. ರಾಜ್ಯಗಳ ನಡುವಣ ಸಮಾನತೆಯ ಕಲ್ಪನೆಯನ್ನು ಇಲ್ಲದಾಗಿಸುವುದು, ಭಾಷೆಗಳು- ಧರ್ಮಗಳ ನಡುವಣ ಸಮಾನತೆಯನ್ನು ತೆಗೆದು ಹಾಕುವುದು ಬಿಜೆಪಿಯ ಉದ್ದೇಶವಾಗಿದೆ' ಎಂದು ಅವರು ಆರೋಪಿಸಿದ್ದಾರೆ.
'ಈ ಎಲ್ಲ ಪರಿಸ್ಥಿತಿಯನ್ನು ವಿರೋಧ ಪಕ್ಷಗಳು ಎದುರಿಸಲಿವೆ. ನಾವು ಬಿಜೆಪಿ ವಿರುದ್ಧ ಹೋರಾಡುತ್ತಿಲ್ಲ. ಭಾರತದ ಸಾಂಸ್ಥಿಕ ರಚನೆಯ ವಶಪಡಿಸಿಕೊಳ್ಳುವ ಅವರ ಯತ್ನದ ವಿರುದ್ಧ ಹೋರಾಡುತ್ತಿದ್ದೇವೆ' ಎಂದು ಹೇಳಿದ್ದಾರೆ.
'ಇ.ಡಿ ಹಾಗೂ ಸಿಬಿಐ ಅನ್ನು ಬಿಜೆಪಿ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ಪ್ರಕರಣಗಳ ಸಂಖ್ಯೆಯನ್ನೇ ನೀವು ಗಮನಿಸಬಹುದು' ಎಂದು ಹೇಳಿದ್ದಾರೆ.
'ಆರ್‌ಎಸ್‌ಎಸ್ ಮೂಲ ಸಿದ್ಧಾಂತವನ್ನು ನಾವು ಒಪ್ಪುವುದಿಲ್ಲ. ಈ ವಿಚಾರದಲ್ಲಿ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳ ನಡುವೆ ಒಮ್ಮತವಿದೆ' ಎಂದು ಹೇಳಿದ್ದಾರೆ.

