ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾಯಿತ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭ ಡಿಸೆಂಬರ್ 21 ರಂದು ನಡೆಯಲಿದೆ. ಗ್ರಾಮ ಪಂಚಾಯಿತಿ, ಬ್ಲಾಕ್ ಪಂಚಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ, ಮಹಾನಗರಪಾಲಿಕೆಗೆ ಏಕ ಕಾಲಕ್ಕೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಚುನಾಯಿತ ಸದಸ್ಯರಲ್ಲಿ ಹಿರಿಯ ಸದಸ್ಯರು ಯಾ ಕೌನ್ಸಿಲರ್ ಮೊದಲು ಪ್ರಮಾಣ ವಚನ ಸ್ವೀಕರಿಸಲಿದ್ದು, ನಂತರ ಸರ್ಕಾರ ನಿಯೋಜಿಸಿದ ಅಧಿಕಾರಿಗಳ ಮುಂದೆ ಇತರ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಹಾನಗರಪಾಲಿಕೆ ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಜಿಲ್ಲಾಧಿಕಾರಿ, ಗ್ರಾಮ ಮತ್ತು ಬ್ಲಾಕ್ ಪಂಚಾಯತ್‍ಗಳಲ್ಲಿನ ಆಯಾ ಸಂಸ್ಥೆಗಳ ಮತ್ತು ಚುನಾವಣಾಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ನಗರಸಭೆಗಳಲ್ಲಿ ನಿಯೋಜಿಸಿರುವ ಚುನಾವಣಾಧಿಕಾರಿಗಳು ಮೊದಲ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಮೊದಲು ಪ್ರಮಾಣವಚನ ಸ್ವೀಕರಿಸಿದ ಹಿರಿಯ ಸದಸ್ಯರು ಇತರ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಎಲ್ಲಾ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಲಿಖಿತ ಸೂಚನೆ ನೀಡಲಾಗುತ್ತದೆ.
ಗ್ರಾಮ ಪಂಚಾಯಿತಿ, ಬ್ಲಾಕ್ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ನಗರಸಭೆಗಳ ಪ್ರಮಾಣವಚನ ಸ್ವೀಕಾರ ಡಿಸೆಂಬರ್ 21 ರಂದು ಬೆಳಿಗ್ಗೆ 10ಕ್ಕೆ ಹಾಗೂ ಮಹಾನಗರಪಾಲಿಕೆ
ಪ್ರಮಾಣ ವಚನ ಸ್ವೀಕಾರ ಸಮಾರಂಭ ಬೆಳಿಗ್ಗೆ 11.30 ಕ್ಕೆ ನಡೆಯಲಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ, ಎಲ್ಲಾ ಚುನಾಯಿತ ಸದಸ್ಯರ ಮೊದಲ ಸಭೆಯು ಮೊದಲು ಪ್ರಮಾಣ ವಚನ ಸ್ವೀಕರಿಸಿದ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ, ಕಾರ್ಯದರ್ಶಿ, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದ ಆಯೋಗದ ಪ್ರಕಟಣೆಯನ್ನು ಓದಿ ಹೇಳಲಿದ್ದಾರೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಪ್ರತ್ಯೇಕ ಕಾರ್ಯಸೂಚಿ ಜಾರಿಗೊಳಿಸಿದೆ.


