ಪೆರ್ಲ: ಪೆರ್ಲದ ನಾಲಂದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡೋತ್ಸವ ನಡೆಸಲಾಯಿತು. ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಕುಸುಮಾವತಿ ಬಿ. ಅವರು ಕ್ರೀಡಾ ಧ್ವಜವನ್ನು ಸ್ಪರ್ಧಿಗಳಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಕುಸುಮಾವತಿ ಬಿ. ಅವರು ಮಾನಸಿಕ ಆರೋಗ್ಯದಷ್ಟೇ ದೈಹಿಕ ಆರೋಗ್ಯವೂ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿ, ವಿದ್ಯಾರ್ಥಿಗಳು ಪಠ್ಯಾಭ್ಯಾಸದ ಜೊತೆಗೆ ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಅಭಿಪ್ರಾಯಪಟ್ಟರು. ಕ್ರೀಡೆಗಳು ಶಿಸ್ತು, ಸಹಕಾರ, ನಾಯಕತ್ವ ಗುಣಗಳು ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.
ಕ್ರೀಡೋತ್ಸವದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳು ಸೇರಿದಂತೆ ಅನೇಕ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಶಂಕರ ಖಂಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿದ್ಯಾಭ್ಯಾಸದ ಜೊತೆಗೆ ದೈಹಿಕ ಸದೃಢತೆಯೂ ವಿದ್ಯಾರ್ಥಿ ಜೀವನಕ್ಕೆ ಅಗತ್ಯವೆಂದು ತಿಳಿಸಿದರು.
ವಾರ್ಷಿಕ ಕ್ರೀಡೋತ್ಸವವು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿ ಮತ್ತು ಸಮಗ್ರ ವ್ಯಕ್ತಿತ್ವ ವಿಕಾಸದ ಮಹತ್ವವನ್ನು ಮನವರಿಕೆ ಮಾಡಿಸಿ ಯಶಸ್ವಿಯಾಗಿ ಸಮಾಪ್ತಿಯಾಯಿತು.
ಬೋಧಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ, ಕ್ರೀಡೋತ್ಸವದ ಸಂಯೋಜಕಿ ಶ್ವಿನಿ ಕೆ.ಬಿ. ನಿರೂಪಿಸಿ, ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಶಿಲ್ಪಾ ವಂದಿಸಿದರು.

.jpg)
