ಕರಾಕಸ್: ಅಮೆರಿಕ ಸೇನೆ ನಡೆಸಿದ ಭಾರಿ ಪ್ರಮಾಣದ ವಾಯು ದಾಳಿಯಲ್ಲಿ ವೆನಿಜುವೆಲಾದ ಸೇನಾ ಸಿಬ್ಬಂದಿ, ನಾಗರಿಕರು ಸೇರಿದಂತೆ 40 ಮಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೆರಿಕ ದಾಳಿಯಿಂದ ಆರಂಭದಲ್ಲಿ ಕರಾಕಸ್‌ನ ಕರಾವಳಿ ಪ್ರದೇಶವಾದ ಕ್ಯಾಟಿಯಾ ಲಾ ಮಾರ್‌ನಲ್ಲಿ ನಾಗರಿಕರೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು.
ಇದಾದ ಕೆಲವೇ ಹೊತ್ತಿನಲ್ಲಿ ಬೇರೆ ಬೇರೆ ಭಾಗಗಳಲ್ಲಿ ಇನ್ನಷ್ಟು ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಶನಿವಾರ ಮುಂಜಾನೆ ಅಮೆರಿಕದ ಯುದ್ಧ ವಿಮಾನವೊಂದು ಮೂರು ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ಅಪ್ಪಳಿಸಿದ ಪರಿಣಾಮ ಹಲವರು ಕೊನೆಯುಸಿರೆಳೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದೂ ಅವರು ವಿವರಿಸಿದ್ದಾರೆ.
ಕರಾಕಸ್ ಮೇಲೆ ಶುಕ್ರವಾರ ಮಧ್ಯರಾತ್ರಿ ಅಮೆರಿಕದ ಸೇನಾ ವಿಮಾನಗಳು ಹಾರಾಟ ನಡೆಸಿದ್ದವು. ಇದರ ಬೆನ್ನಲ್ಲೇ ಕನಿಷ್ಠ 7 ಸ್ಫೋಟಗಳು ಸಂಭವಿಸಿದ್ದವು ಎಂದು ವರದಿಯಾಗಿದೆ.
ಇದರ ಬೆನ್ನಲ್ಲೇ ಅಮೆರಿಕ ಸೇನೆ ವೆನಿಜುವೆಲಾದ ರಾಜಧಾನಿ ಕರಾಕಸ್ ಮೇಲೆ ಭಾರಿ ಪ್ರಮಾಣದಲ್ಲಿ ವಾಯುದಾಳಿ ನಡೆಸಿದ್ದು, ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಸೆರೆ ಹಿಡಿದಿತ್ತು.
ವೆನಿಜುವೆಲಾ ಮೇಲಿನ ದಾಳಿ ಕುರಿತು 'ಫಾಕ್ಸ್ ನ್ಯೂಸ್'ನೊಂದಿಗೆ ಮಾತನಾಡಿದ ಟ್ರಂಪ್, 'ವೆನಿಜುವೆಲಾದ ಅಧ್ಯಕ್ಷ ಮತ್ತು ಅವರ ಪತ್ನಿಯನ್ನು ವಶಕ್ಕೆ ಪಡೆದು, ದೇಶದಿಂದ ಹೊರಗೆ ಹಾಕಿದ್ದೇವೆ. ಸರಿಯಾದ ಅಧಿಕಾರ ವರ್ಗಾವಣೆಯಾಗುವವರೆಗೆ ವೆನಿಜುವೆಲಾವನ್ನು ನಾವೇ ಮುನ್ನಡೆಸಲಿದ್ದೇವೆ' ಎಂದು ಘೋಷಿಸಿದ್ದಾರೆ.

