HEALTH TIPS

ಅಮೆರಿಕ ಯುದ್ಧನೌಕೆಯಲ್ಲಿ ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ: ಮೊದಲ ಚಿತ್ರ ಬಿಡುಗಡೆ ಮಾಡಿದ ಟ್ರಂಪ್

ವಾಷಿಂಗ್ಟನ್/ಕ್ಯಾರಕಾಸ್: ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಸೇನೆ ವಶಪಡಿಸಿಕೊಂಡ ಕೆಲವೇ ಗಂಟೆಗಳ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಡುರೊ ಅವರ ಮೊದಲ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ. ಕೈಕೋಳ ಹಾಕಿ ಕಣ್ಣುಗಳಿಗೆ ಬಟ್ಟೆ ಕಟ್ಟಿರುವ ಸ್ಥಿತಿಯಲ್ಲಿ ಅಮೆರಿಕದ ಯುದ್ಧನೌಕೆಯಲ್ಲಿ ನಿಂತಿರುವ ಮಡುರೊ ಅವರ ಈ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಚಿತ್ರದಲ್ಲಿ ಟ್ರ್ಯಾಕ್‌ಸೂಟ್‌ ನಂತೆ ಕಾಣುವ ಉಡುಪಿನಲ್ಲಿ 63 ವರ್ಷದ ಮಡುರೊ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಹಿಡಿದುಕೊಂಡಿರುವುದು ಕಾಣಿಸುತ್ತದೆ. ಕ್ಯಾರಕಾಸ್‌ ನಲ್ಲಿ ನಡೆದ ರಾತ್ರಿಯ ಮಿಲಿಟರಿ ದಾಳಿಯ ವೇಳೆ ಅಮೆರಿಕ ಪಡೆಗಳು ಅವರನ್ನು ವಶಕ್ಕೆ ಪಡೆದಿವೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಸುರಕ್ಷಿತ ಅಧಿಕಾರ ಪರಿವರ್ತನೆ ಪೂರ್ಣಗೊಳ್ಳುವವರೆಗೆ ಅಮೆರಿಕವೇ ವೆನೆಝುವೆಲಾವನ್ನು ನಡೆಸಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಮಡುರೊ ವಶಪಡಿಸಿಕೊಳ್ಳಲಾದ ಬಳಿಕ ಅಮೆರಿಕದ ತೈಲ ಕಂಪೆನಿಗಳಿಗೆ ವೆನೆಝುವೆಲಾದ ಬೃಹತ್ ಕಚ್ಚಾ ತೈಲ ನಿಕ್ಷೇಪಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಅಮೆರಿಕದ ಸೇನಾ ಉನ್ನತಾಧಿಕಾರಿಗಳ ಪ್ರಕಾರ, ಈ ಕಾರ್ಯಾಚರಣೆ ತಿಂಗಳ ಕಾಲದ ಯೋಜನೆ ಮತ್ತು ಪೂರ್ವಾಭ್ಯಾಸದ ಫಲವಾಗಿದ್ದು, ಪಶ್ಚಿಮ ಗೋಳಾರ್ಧದ ವಿವಿಧ ನೆಲೆಗಳಿಂದ 150ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಬಳಸಲಾಗಿದೆ. ಇದು ಅತ್ಯಂತ ನಿಖರ ಹಾಗೂ ಸಂಕೀರ್ಣ ಹೊರತೆಗೆಯುವ ಕಾರ್ಯಾಚರಣೆಯಾಗಿದ್ದು, ಅಮೆರಿಕ ಪಡೆಗಳಲ್ಲಿ ಯಾರೂ ಮೃತಪಟ್ಟಿಲ್ಲ. ಮಡುರೊ ಮತ್ತು ಅವರ ಪತ್ನಿ ನ್ಯಾಯ ಇಲಾಖೆ ವಶಕ್ಕೆ ಒಪ್ಪಿಸಲ್ಪಟ್ಟಿದ್ದಾರೆ ಎಂದು ಸೇನೆ ಸ್ಪಷ್ಟಪಡಿಸಿದೆ.

ಯುದ್ಧ ಕಾರ್ಯಾಚರಣೆ ಪೂರ್ಣಗೊಂಡು ಅಮೆರಿಕ ಪಡೆಗಳು ವೆನೆಝುವೆಲಾದ ವಾಯುಪ್ರದೇಶದಿಂದ ಹೊರಬಂದ ಬಳಿಕ, ಟ್ರಂಪ್ ಇದನ್ನು "ಅದ್ಭುತ ಕಾರ್ಯಾಚರಣೆ" ಎಂದು ವರ್ಣಿಸಿದ್ದಾರೆ. ದಾಳಿಯ ವೇಳೆ ಕೆಲ ಅಮೆರಿಕ ಸೈನಿಕರಿಗೆ ಗಾಯಗಳಾಗಿವೆ, ಆದರೆ ಯಾರೂ ಮೃತಪಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದರ ನಡುವೆ ಅಮೆರಿಕ ಬೆಂಬಲಿತ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ಸಾಮಾಜಿಕ ಜಾಲತಾಣದಲ್ಲಿ "ಸ್ವಾತಂತ್ರ್ಯದ ಸಮಯ ಬಂದಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. 2024ರ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದ ಎಡ್ಮಂಡೊ ಗೊನ್ಜಾಲೆಜ್ ಉರುಟಿಯಾ ಅವರನ್ನು ತಕ್ಷಣವೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.

ಈಗಾಗಲೇ ಟ್ರಂಪ್, ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಪ್ರಕರಣಗಳಲ್ಲಿ ವಿಚಾರಣೆಗೆ ನ್ಯೂಯಾರ್ಕ್‌ ಗೆ ಕರೆದೊಯ್ಯಲಾಗುತ್ತದೆ ಎಂದು ಘೋಷಿಸಿದ್ದಾರೆ. ಡೆಲ್ಟಾ ಪಡೆ ನಡೆಸಿದ ಈ ದಾಳಿಯನ್ನು ಟ್ರಂಪ್ ಹಾಗೂ ಅವರ ಆಡಳಿತದ ಪ್ರಮುಖರು ಫ್ಲೋರಿಡಾದ ಮಾರ್-ಎ-ಲಾಗೊದಲ್ಲಿರುವ ತಮ್ಮ ಕ್ಲಬ್‌ ನಿಂದ ಲೈವ್ ಆಗಿ ವೀಕ್ಷಿಸಿದ್ದರು ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ವೆನೆಝುವೆಲಾ ಸರ್ಕಾರ, ಅಮೆರಿಕದ ಕ್ರಮವನ್ನು "ಅತ್ಯಂತ ಗಂಭೀರ ಮಿಲಿಟರಿ ಆಕ್ರಮಣ" ಎಂದು ಖಂಡಿಸಿದೆ. ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ರಾಜಧಾನಿ ಕ್ಯಾರಕಾಸ್‌ ನಲ್ಲಿ ರಾತ್ರಿಯಿಡೀ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries