ಈ ವ್ಯಕ್ತಿಗಳಿಗೆ ಒಟ್ಟು 1,310 ಮರಣ ದಂಡನೆಗಳನ್ನು ವಿಧಿಸಲಾಗಿದೆ.
ಅಂದರೆ ಈ ವರ್ಷಗಳಲ್ಲಿ ಕೆಲವರು ಬಹು ಮರಣ ದಂಡನೆಗಳಿಗೆ ಗುರಿಯಾಗಿರಬಹುದು ಎಂದು ಬುಧವಾರ ಬಿಡುಗಡೆಗೊಳಿಸಲಾದ ವರದಿ ತಿಳಿಸಿದೆ.
ಕೇವಲ 70 ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯಗಳು ಮರಣ ದಂಡನೆಯನ್ನು ದೃಢಪಡಿಸಿವೆ.
ಕಳೆದ ವರ್ಷದ ಅಂತ್ಯದ ವೇಳೆಗೆ 574 ಜನರು ಮರಣ ದಂಡನೆಯನ್ನು ಎದುರಿಸುತ್ತಿದ್ದು, ಇದು 2016ರಿಂದೀಚೆಗೆ ಅತ್ಯಧಿಕವಾಗಿದೆ. ಆ ವರ್ಷ 400 ಜನರು ಮರಣ ದಂಡನೆಯನ್ನು ಎದುರಿಸುತ್ತಿದ್ದರು ಎಂದು ವರದಿ ಹೇಳಿದೆ.
2025ರ ಒಂದು ವರ್ಷದಲ್ಲೇ ಸೆಷನ್ಸ್ ನ್ಯಾಯಾಲಯಗಳು 94 ಪ್ರಕರಣಗಳಲ್ಲಿ 128 ವ್ಯಕ್ತಿಗಳಿಗೆ ಮರಣ ದಂಡನೆ ವಿಧಿಸಿವೆ. ಅದೇ ವರ್ಷ ಉಚ್ಚ ನ್ಯಾಯಾಲಯಗಳು ವಿಚಾರಣೆ ನಡೆಸಿದ ಶೇ.25ಕ್ಕೂ ಅಧಿಕ ಪ್ರಕರಣಗಳಲ್ಲಿ ಮರಣ ದಂಡನೆಯನ್ನು ರದ್ದುಗೊಳಿಸಿದ್ದರೆ, ಸರ್ವೋಚ್ಚ ನ್ಯಾಯಾಲಯವು ತಾನು ವಿಚಾರಣೆ ನಡೆಸಿದ ಅರ್ಧಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಸತತ ಮೂರನೇ ವರ್ಷವೂ ಸರ್ವೋಚ್ಚ ನ್ಯಾಯಾಲಯವು ಯಾವುದೇ ಮರಣ ದಂಡನೆಯನ್ನು ದೃಢಪಡಿಸಿಲ್ಲ ಎಂದು ವರದಿ ಹೇಳಿದೆ.
2016 ಮತ್ತು 2025ರ ನಡುವೆ ರಾಷ್ಟ್ರಪತಿಗಳು 19 ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ್ದು, ಐದು ಅರ್ಜಿಗಳನ್ನು ಪುರಸ್ಕರಿಸಿದ್ದಾರೆ.
ಡಿ.31ಕ್ಕೆ ಉಚ್ಚ ನ್ಯಾಯಾಲಯಗಳಲ್ಲಿ 478 ಜನರನ್ನೊಳಗೊಂಡ 312 ಪ್ರಕರಣಗಳು ಬಾಕಿಯಿದ್ದವು. ವ್ಯಕ್ತಿಗೆ ಸೆಷನ್ಸ್ ನ್ಯಾಯಾಲಯದಿಂದ ಮರಣ ದಂಡನೆ ಘೋಷಣೆ ಮತ್ತು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯ ವಿಚಾರಣೆಯ ನಡುವೆ ಪ್ರಕರಣ ಬಾಕಿಯ ಸರಾಸರಿ ಅವಧಿ ಸುಮಾರು 36 ತಿಂಗಳುಗಳಾಗಿದೆ ಎಂದು ವರದಿ ತಿಳಿಸಿದೆ.
ಜಮ್ಮು ಕಾಶ್ಮೀರ ಉಚ್ಚ ನ್ಯಾಯಾಲಯದಲ್ಲಿ ಸರಾಸರಿ 138 ತಿಂಗಳುಗಳಿಗೂ ಅಧಿಕ ಸಮಯದಿಂದ ಮೇಲ್ಮನವಿಗಳು ಬಾಕಿಯುಳಿದಿವೆ.
2025ರ ಅಂತ್ಯದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅತ್ಯಂತ ಹೆಚ್ಚಿನ ಮರಣ ದಂಡನೆ ಪ್ರಕರಣಗಳು (91) ಬಾಕಿಯಿದ್ದವು ಎಂದು ವರದಿ ಹೇಳಿದೆ.
2015ರ ಕಾನೂನು ಆಯೋಗದ ವರದಿ ಭಯೋತ್ಪಾದನೆ ಸಂಬಂಧಿತ ಹಾಗೂ ದೇಶದ ವಿರುದ್ಧ ಯುದ್ಧ ಸಾರಿದ ಪ್ರಕರಣಗಳನ್ನು ಹೊರತುಪಡಿಸಿ ಮರಣ ದಂಡನೆಯನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿತ್ತು. ಭಾರತವು ಮರಣ ದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ನಿಟ್ಟಿನಲ್ಲಿ ಸಾಗುತ್ತದೆ ಎಂಬ ಆಶಯವನ್ನೂ ವ್ಯಕ್ತಪಡಿಸಿತ್ತು.
ಆದರೆ ಭಾರತವು ಸಾಮಾನ್ಯ ಅಪರಾಧಗಳಿಗೆ ಮರಣ ದಂಡನೆಯನ್ನು ಉಳಿಸಿಕೊಂಡಿರುವ 55 ದೇಶಗಳಲ್ಲಿ ಒಂದಾಗಿ ಮುಂದುವರಿದಿದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ 2023ರ ದತ್ತಾಂಶಗಳು ತೋರಿಸಿವೆ.

