ಢಾಕಾ: 17 ವರ್ಷ ಸ್ವಯಂ ಗಡಿಪಾರಾಗಿ ಲಂಡನ್‌ನಲ್ಲಿ ನೆಲೆಸಿ ಎರಡು ತಿಂಗಳ ಹಿಂದೆಯಷ್ಟೇ ತಾಯ್ನಾಡಿಗೆ ಮರಳಿದ ತಾರಿಕ್ ರೆಹಮಾನ್ ಬಾಂಗ್ಲಾದೇಶದ ಪ್ರಧಾನಿಯಾಗಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಅಲ್ಲಿನ ಪ್ರಮುಖ ರಾಜಕೀಯ ಪಕ್ಷ, ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (BNP) ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೇರಲಿದೆ.
ಚುನಾವಣೆಯಲ್ಲಿ ಗೆದ್ದರೆ ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬಿಎನ್‌ಪಿ ಈ ಮೊದಲೇ ಘೋಷಣೆ ಮಾಡಿತ್ತು. ಬಾಂಗ್ಲಾದೇಶವನ್ನು ಯಾವುದೇ ಒಂದು ಶಕ್ತಿಯೊಂದಿಗೆ ಹೆಚ್ಚು ನಿಕಟವಾಗಿ ಬಂಧಿಸದೆ ಹೂಡಿಕೆಯನ್ನು ಆಕರ್ಷಿಸಲು ಬಾಂಗ್ಲಾದೇಶದ ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ಮರುಪರಿಶೀಲಿಸುವುದಾಗಿ ರೆಹಮಾನ್ ಪ್ರತಿಜ್ಞೆ ಮಾಡಿದ್ದಾರೆ.

ತಾರಿಕ್ ರೆಹಮಾನ್ | Photo Credit : PTI
ಯಾರು ಈ ತಾರಿಕ್ ರೆಹಮಾನ್?
ತಾರಿಕ್ ರೆಹಮಾನ್ ಬಾಂಗ್ಲಾದ ಮಾಜಿ ಪ್ರಧಾನಿ ಖಲೀದಾ ಝಿಯಾ ಮತ್ತು ಬಿಎನ್‌ಪಿ ಸಂಸ್ಥಾಪಕ ಅಧ್ಯಕ್ಷ ಝಿಯಾವುರ್ ರೆಹಮಾನ್ ದಂಪತಿಯ ಮಗ. 1965ರ ನವೆಂಬರ್ 20ರಂದು ಢಾಕಾದಲ್ಲಿ ಜನನ. ಢಾಕಾ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಅಧ್ಯಯನ ಮಾಡಿದ ಅವರು ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ನಂತರ ಜವಳಿ ಮತ್ತು ಕೃಷಿ ಉತ್ಪನ್ನಗಳಲ್ಲಿ ವ್ಯವಹಾರಗಳನ್ನು ಪ್ರಾರಂಭಿಸಿದರು. ರೆಹಮಾನ್ ಅವರ ತಾಯಿ ಖಲೀದಾ ಝಿಯಾ ಬಾಂಗ್ಲಾದೇಶದ ರಾಜಕೀಯದಲ್ಲಿ ದೀರ್ಘಕಾಲ ಪ್ರಾಬಲ್ಯ ಸಾಧಿಸಿದ್ದರು. ತಾರಿಕ್ ರೆಹಮಾನ್ ಅವರ ತಂದೆ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ವ್ಯಕ್ತಿಯಾಗಿದ್ದು 1977 ರಿಂದ 1981 ರವರೆಗೆ ದೇಶವನ್ನು ಆಳಿದ್ದರು.
1971 ರ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬಾಲಕ ತಾರಿಕ್ ರೆಹಮಾನ್ ಬಂಧನಕ್ಕೊಳಗಾಗಿದ್ದರು. ತಾರಿಕ್ ಝಿಯಾ ಎಂದೇ ಕರೆಯಲ್ಪಡುವ ತಾರಿಕ್ ಅವರನ್ನು ಅವರ ಪಕ್ಷವು "ಯುದ್ಧದ ಕಿರಿಯ ಕೈದಿಗಳಲ್ಲಿ ಒಬ್ಬರು" ಎಂದು ಹೇಳುತ್ತದೆ. ಸೇನಾ ಕಮಾಂಡರ್ ಆಗಿದ್ದ ಅವರ ತಂದೆ ಝಿಯಾವುರ್ ರೆಹಮಾನ್, 1975 ರ ದಂಗೆಯ ನಂತರ ಪ್ರಾಮುಖ್ಯತೆಗೆ ಬಂದರು. ಈ ದಂಗೆಯಲ್ಲಿ ಶೇಖ್ ಹಸೀನಾ ಅವರ ತಂದೆ ಸ್ಥಾಪಕ ನಾಯಕ ಶೇಖ್ ಮುಜಿಬುರ್ ರೆಹಮಾನ್ ಕೊಲ್ಲಲ್ಪಟ್ಟರು.
ಈ ಘಟನೆಗಳು ಎರಡು ಕುಟುಂಬಗಳ ನಡುವೆ ಹಗೆತನಕ್ಕೆ ಕಾರಣವಾಗಿತ್ತು, ಅದು ದಶಕಗಳ ಕಾಲ ಬಾಂಗ್ಲಾದೇಶದ ರಾಜಕೀಯವನ್ನು ರೂಪಿಸಿತು. 1981 ರಲ್ಲಿ ನಡೆದ ಮಿಲಿಟರಿ ದಂಗೆಯಲ್ಲಿ ಝಿಯಾವುರ್ ರೆಹಮಾನ್ ಹತ್ಯೆಗೀಡಾದರು. 1991-1996ರಲ್ಲಿ ಖಲೀದಾ ಝಿಯಾ ದೇಶದ ಮೊದಲ ಮಹಿಳಾ ಪ್ರಧಾನಿಯಾದರು. 2001-2006ರ ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿದ್ದಾಗ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಬಾಂಗ್ಲಾದೇಶದ ಮಿಲಿಟರಿ ಸರ್ಕಾರವು ಅವರನ್ನು ಬಂಧಿಸಿತು. 2008ರಲ್ಲಿ ಜೈಲಿನಿಂದ ಬಿಡುಗಡೆಯಾದ ಅವರು, ವೈದ್ಯಕೀಯ ಚಿಕಿತ್ಸೆ ಪಡೆಯುವ ಉದ್ದೇಶದಿಂದಾಗಿ ದೇಶ ತೊರೆದು ಲಂಡನ್‌ನಲ್ಲಿ ನೆಲೆಸಿದ್ದರು.
60 ವರ್ಷದ ರೆಹಮಾನ್, ದಶಕಗಳಿಂದ ದೇಶದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿರುವ ಪ್ರಭಾವಿ ಝಿಯಾ ಕುಟುಂಬದ ಪ್ರಮುಖ ವ್ಯಕ್ತಿ. ಆದಾಗ್ಯೂ,ರಾಜಕೀಯ ಪ್ರತಿಸ್ಪರ್ಧಿಗಳಿಂದ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ತಾರಿಕ್ ಎದುರಿಸಿದ್ದರು. ದೇಶದ ಮೊದಲ ಮಹಿಳಾ ಪ್ರಧಾನಿ, ತಾಯಿ ಖಲೀದಾ ಜಿಯಾ ಅವರ ಮರಣದ ನಂತರ, ಬಾಂಗ್ಲಾದೇಶ ಚುನಾವಣೆ ನಡೆಯುವುದಕ್ಕಿಂತ ಕೆಲವೇ ವಾರಗಳ ಮೊದಲು ಅವರು ಬಿಎನ್‌ಪಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದರು.
ರೆಹಮಾನ್ ಮೊದಲ ಬಾರಿ ರಾಜಕೀಯಕ್ಕಿಳಿದಿದ್ದು 2001 ರಲ್ಲಿ. ಆಗ 30ರ ಹರೆಯದ ಯುವಕನಾಗಿದ್ದ ತಾರಿಕ್ ಬಿಎನ್‌ಪಿಯಲ್ಲಿ ಸಕ್ರಿಯರಾದರು. 2002 ರಲ್ಲಿ ತಾರಿಕ್ ಅವರಿಗೆ ಪಕ್ಷದ ಉನ್ನತ ಸ್ಥಾನದ ಜವಾಬ್ದಾರಿ ನೀಡಲಾಗಿತ್ತು. ಆ ಸಮಯದಲ್ಲಿ ವಿರೋಧ ಪಕ್ಷವು ಇದು ಸ್ವಜನಪಕ್ಷಪಾತ ಎಂದು ಟೀಕಿಸಿತ್ತು. ವೈಯಕ್ತಿಕ ಲಾಭ ಪಡೆಯಲು ರೆಹಮಾನ್ ತಮ್ಮ ಅಧಿಕಾರವನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಆದರೆ ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಅವರು ನಿರಾಕರಿಸುತ್ತಲೇ ಬಂದಿದ್ದರು.
ಮಿಲಿಟರಿ ಬೆಂಬಲಿತ ಉಸ್ತುವಾರಿ ಸರ್ಕಾರದ ಅವಧಿಯಲ್ಲಿ 2007 ರಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು. ವಿಚಾರಣೆಗಾಗಿ ಕಾಯುತ್ತಿರುವಾಗ ಚಿತ್ರಹಿಂಸೆ ನೀಡಲಾಗಿತ್ತು ಎಂದಿದ್ದರು ತಾರಿಕ್. 18 ತಿಂಗಳು ಜೈಲಿನಲ್ಲಿ ಕಳೆದ ಅವರು ಆನಂತರ ದೇಶ ತೊರೆದು ಲಂಡನ್‌ನಲ್ಲಿ ನೆಲೆಸಿದರು. ಅಲ್ಲಿ ಅವರು 17 ವರ್ಷಗಳ ಕಾಲ ಇದ್ದರು.
ವಿದೇಶದಲ್ಲಿ ವಾಸಿಸುತ್ತಿದ್ದರೂ, ರೆಹಮಾನ್ ಬಿಎನ್‌ಪಿ ಕಾರ್ಯತಂತ್ರ ಮತ್ತು ನೀತಿಗಳನ್ನು ರೂಪಿಸುವುದನ್ನು ಮುಂದುವರೆಸಿದರು. 2018 ರಲ್ಲಿ ಅವರ ತಾಯಿಗೆ ಜೈಲು ಶಿಕ್ಷೆ ವಿಧಿಸಿದಾಗ ಅವರು ಪಕ್ಷದ ಹಂಗಾಮಿ ಅಧ್ಯಕ್ಷರಾದರು.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರದಲ್ಲಿದ್ದಾಗ ತಾರಿಕ್ ಮೇಲೆ ವಿವಿಧ ಆರೋಪಗಳನ್ನು ಹೊರಿಸಿ, ತನಿಖೆಗಳು ನಡೆದವು. 2004 ರಲ್ಲಿ ರಾಜಕೀಯ ರ್ಯಾಲಿಯ ಮೇಲೆ ನಡೆದ ಮಾರಕ ಗ್ರೆನೇಡ್ ದಾಳಿಯಲ್ಲಿ ಅವರ ಪಾತ್ರ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ತಾರಿಕ್ ಮೇಲೆ ಹಸೀನಾ ಆರೋಪ ಹೊರಿಸಿದ್ದರು. ಆಗಸ್ಟ್ 2024 ರಲ್ಲಿ ವಿದ್ಯಾರ್ಥಿಗಳ ನೇತೃತ್ವದ ದಂಗೆಯಲ್ಲಿ ಹಸೀನಾ ಪದಚ್ಯುತರಾದಾಗ ತಾರಿಕ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಯಿತು.
17 ವರ್ಷ ಲಂಡನ್ ನಲ್ಲಿದ್ದ ತಾರಿಕ್ 2025 ಡಿಸೆಂಬರ್ 25 ರಂದು ಬಾಂಗ್ಲಾದೇಶಕ್ಕೆ ಮರಳಿದರು. ಐದು ದಿನಗಳ ನಂತರ ಅಂದರೆ ಡಿಸೆಂಬರ್ 30 ಕ್ಕೆ ಅವರ ತಾಯಿ ಖಲೀದಾ ಝಿಯಾ ನಿಧನರಾದರು.
►ಡಾರ್ಕ್ ಪ್ರಿನ್ಸ್ (ಕಪ್ಪು ರಾಜಕುಮಾರ)
ತಾರಿಕ್ ರೆಹಮಾನ್ ಅವರನ್ನು ʼಡಾರ್ಕ್ ಪ್ರಿನ್ಸ್ʼ (ಕಪ್ಪು ರಾಜಕುಮಾರ) ಎಂದೇ ಬಣ್ಣಿಸಲಾಗುತ್ತದೆ. 2001 ರಿಂದ 2006 ರವರೆಗೆ ಬಿಎನ್‌ಪಿ ಮತ್ತು ಜಮಾತ್-ಇ-ಇಸ್ಲಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಖಲೀದಾ ಝಿಯಾ ಪ್ರಧಾನಿಯಾಗಿದ್ದಾಗ ತಾರಿಕ್ ಅವರು ವಾಸ್ತವಿಕ ಮುಖ್ಯಸ್ಥರಾಗಿದ್ದರು ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ, ರೆಹಮಾನ್ ಎರಡು ಅಂತಸ್ತಿನ ಕಟ್ಟಡವಾದ ಹವಾ ಭಬನ್‌ನಲ್ಲಿ ಕೆಲಸ ಮಾಡುತ್ತಿದ್ದರು.ಆ ಕಚೇರಿಯನ್ನು Shadow PMO ಎಂದು ಹೇಳಲಾಗುತ್ತಿತ್ತು.
2006 ಮತ್ತು 2008 ರ ನಡುವೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆಯಿತು. ಬಿಎನ್‌ಪಿ ಮತ್ತು ಅವಾಮಿ ಲೀಗ್ 2006ರ ನವೆಂಬರ್ ಮಧ್ಯಭಾಗದಲ್ಲಿ ನಡೆಯಬೇಕಿದ್ದ ಚುನಾವಣೆಯ ಬಗ್ಗೆ ಜಗಳವಾಡುತ್ತಿದ್ದವು. ಈ ಅವ್ಯವಸ್ಥೆಯು ಮಿಲಿಟರಿ 'ಕೇರ್‌ಟೇಕರ್' ಸರ್ಕಾರವನ್ನು ತಂದಿತು. ಇದು ಮೂಲಭೂತ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿದ್ದು ಮಾತ್ರವಲ್ಲದೆ ಝಿಯಾ ಅಥವಾ ಹಸೀನಾ ಇಲ್ಲದೆ ರಾಜಕೀಯ ಪರ್ಯಾಯವನ್ನು ರೂಪಿಸಲು ಪ್ರಯತ್ನಿಸಿತು. 2008 ರ ಚುನಾವಣೆಯಲ್ಲಿ ಅವಾಮಿ ಲೀಗ್ ಗೆದ್ದು ಅಧಿಕಾರಕ್ಕೇರಿತು.
ತಾರಿಕ್ ಅವರನ್ನು ಮೇ 2007 ರಲ್ಲಿ ಹಂಗಾಮಿ ಸರ್ಕಾರ ಬಂಧಿಸಿ ವಿವಿಧ ಆರೋಪಗಳ ಮೇಲೆ 17 ತಿಂಗಳುಗಳ ಕಾಲ ಬಂಧನದಲ್ಲಿಟ್ಟಿತು. ಹಣ ವರ್ಗಾವಣೆ, ಹಾಗೆಯೇ ಹಸೀನಾ ಹತ್ಯೆಗೆ ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಸೇರಿದಂತೆ ಹಲವು ಆರೋಪಗಳ ಮೇಲೆ ಅವರನ್ನು ಗೈರುಹಾಜರಿಯಲ್ಲಿ ಶಿಕ್ಷೆಗೊಳಪಡಿಸಲಾಯಿತು. ಕಸ್ಟಡಿಯಲ್ಲಿ ಚಿತ್ರಹಿಂಸೆಗೊಳಗಿದ್ದೆ ಎಂದು ಆರೋಪಿಸಿದ್ದ ತಾರಿಕ್ ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದು, ಆಮೇಲೆ ಅಲ್ಲೇ ನೆಲೆಸಿದರು..
ಬಾಂಗ್ಲಾದೇಶಕ್ಕೆ ಹಿಂತಿರುಗಿದ ನಂತರ ರೆಹಮಾನ್ ಮೊದಲಿನಂತೆ ಉದ್ವೇಗಕ್ಕೆ ಒಳಗಾಗಿ ಪ್ರಚೋದನಕಾರಿ ಭಾಷಣ ಮಾಡದೆ, ಶಾಂತಿಯುತ ಭಾಷಣಗಳನ್ನು ಮಾಡಿ ಜನರನ್ನು ಸೆಳೆಯುತ್ತಿದ್ದರು. ಅವರ ಸೈಬೀರಿಯನ್ ಬೆಕ್ಕು ಜೆಬು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಜನವರಿ 9 ರಂದು ತಾರಿಕ್ ಅಧಿಕೃತವಾಗಿ ಬಿಎನ್‌ಪಿಯ ನಾಯಕರಾದಾಗಲೂ ಸ್ವಜನಪಕ್ಷಪಾತದ ಆರೋಪಗಳು ಕೇಳಿ ಬಂತು. ಅದನ್ನು ಬಿಎನ್‌ಪಿಯ ಮಾಜಿ ವಾಣಿಜ್ಯ ಸಚಿವ ಅಮೀರ್ ಖಸ್ರು ನಿರ್ಲಕ್ಷಿಸಿದರು. ನೀವು ಒಂದು ವಂಶಾಡಳಿತದಿಂದ ಬಂದಿದ್ದೀರಾ ಅಥವಾ ಇಲ್ಲವೇ ಎಂಬುದು ಅಪ್ರಸ್ತುತ. ಹಸೀನಾ ಆಡಳಿತದಿಂದ ಬಿಎನ್‌ಪಿಯ ಚಟುವಟಿಕೆಗಳು ತುಂಬಾ ನಿಗ್ರಹಿಸಲ್ಪಟ್ಟಿವೆ, ಝಿಯಾ ಕುಟುಂಬದ ಹೊರಗೆ ಹೊಸ ನಾಯಕನನ್ನು ಆಯ್ಕೆ ಮಾಡಲು ಪಕ್ಷಕ್ಕೆ ಸಾಧ್ಯವಾಗಲಿಲ್ಲ ಎಂದು ಬಿಬಿಸಿ ಜತೆ ಮಾತನಾಡಿದ ಖಸ್ರು ಹೇಳಿದ್ದಾರೆ.
ತಾರಿಕ್ ರೆಹಮಾನ್ ರಾಜಕೀಯದ ಕರಾಳ ಅಧ್ಯಾಯಗಳನ್ನು ನೋಡಿದ್ದಾರೆ. ಅವರು ಈ ದೇಶದಲ್ಲಿ ಸಂಘರ್ಷ ಮತ್ತು ಸೇಡಿನ ರಾಜಕೀಯವನ್ನು ಅನುಭವಿಸಿದ್ದಾರೆ. ಭವಿಷ್ಯದಲ್ಲಿ ಪಕ್ಷದ ನಾಯಕರಾಗುವುದರಿಂದ ದೇಶದ ನಾಯಕರಾಗಲು ಅವರು ಆ ರಾಜಕೀಯ ಬುದ್ಧಿವಂತಿಕೆಯನ್ನು ಬಳಸಬಹುದೇ ಎಂದು ನೋಡಬೇಕಾಗಿದೆ ಎಂದು ರಾಜಕೀಯ ವಿಶ್ಲೇಷಕ ಮೊಹಿಯುದ್ದೀನ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

