: 2026ರ ಜನವರಿಯಲ್ಲಿ ಪ್ರತಿ 10 ಗ್ರಾಂಗೆ ಬರೋಬ್ಬರಿ 1 ಲಕ್ಷ 80 ಸಾವಿರದ ಗಡಿ ದಾಟಿ ಇತಿಹಾಸ ಸೃಷ್ಟಿಸಿದ್ದ ಚಿನ್ನ, ಈಗ ದಿಢೀರ್ ಅಂತ ಕೆಳಗೆ ಜಾರುತ್ತಿದೆ. ಫೆಬ್ರವರಿ ಮಧ್ಯಭಾಗದಲ್ಲಿ 1.5 ಲಕ್ಷ ರೂಪಾಯಿಗೆ ಇಳಿಕೆಯಾಗಿದೆ. ಈಗ ಜಾಗತಿಕ ಮಟ್ಟದಲ್ಲಿ ಬದ್ಧ ವೈರಿಗಳಾದ ಅಮೆರಿಕ ಹಾಗೂ ರಷ್ಯಾ ರಹಸ್ಯವಾಗಿ ಒಂದಾಗುತ್ತಿರುವುದರಿಂದ ಚಿನ್ನದ ದರ 10 ಗ್ರಾಂಗೆ 1 ಲಕ್ಷ ರೂಪಾಯಿಗಿಂತಲೂ ಕಡಿಮೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಈ ಬಗ್ಗೆ ಬ್ಲೂಮ್‌ಬರ್ಗ್ ಎನ್ನುವ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಒಂದು ಬಾಂಬ್ ಸಿಡಿಸಿದೆ. ಅದರ ಪ್ರಕಾರ, ಇಷ್ಟು ದಿನ ಅಮೆರಿಕನ್ ಡಾಲರ್ ವಿರುದ್ಧ ತೊಡೆ ತಟ್ಟಿಕೊಂಡು ನಿಂತಿದ್ದ ರಷ್ಯಾ, ಈಗ ಮತ್ತೆ ಡಾಲರ್ ಜೊತೆ ವ್ಯಾಪಾರ ಮಾಡಲು ಮುಂದಾಗಿದೆ. ಅಮೆರಿಕದ ಜೊತೆ ಒಂದು ದೊಡ್ಡ ಆರ್ಥಿಕ ಒಪ್ಪಂದ ಮಾಡಿಕೊಳ್ಳಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಡಳಿತ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಮುಗಿದ ನಂತರ ಅಮೆರಿಕದ ಜೊತೆ ಹೊಸ ಸಂಬಂಧ ಶುರು ಮಾಡಲು, ರಷ್ಯಾ ಮತ್ತೆ ಡಾಲರ್ ವ್ಯವಸ್ಥೆಗೆ ಮರಳಲು ಪ್ಲಾನ್ ಮಾಡಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಈ ಒಪ್ಪಂದದಲ್ಲಿ ಪಳೆಯುಳಿಕೆ ಇಂಧನ, ನೈಸರ್ಗಿಕ ಅನಿಲ, ಕಚ್ಚಾ ತೈಲ ಸೇರಿ ಏಳು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆಯಂತೆ. ಈ ಬೆಳವಣಿಗೆ ಚಿನ್ನದ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗಿದ್ದು, ಆಕಾಶಕ್ಕೆ ತಲುಪಿದ್ದ ಬಂಗಾರದ ಬೆಲೆ ಭೂಮಿ ಕಡೆಗೆ ಬರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಬ್ರಿಕ್ಸ್ ದೇಶಗಳ ಗೋಲ್ಡ್ ಡಬಲ್ ಗೇಮ್!
ಮಾರುಕಟ್ಟೆ ತಜ್ಞ ಅನುಜ್ ಗುಪ್ತಾ ಅವರ ಪ್ರಕಾರ, ಬ್ರಿಕ್ಸ್ ಒಕ್ಕೂಟದ ರಷ್ಯಾ, ಚೀನಾ, ಭಾರತ, ಬ್ರೆಜಿಲ್ ಮತ್ತು ಸೌತ್ ಆಫ್ರಿಕಾ ದೇಶಗಳು ಡಬಲ್ ಗೇಮ್ ಆಡಿವೆಯಂತೆ. ಒಂದು ಕಡೆ, ತಮ್ಮ ದೇಶದಲ್ಲಿ ಉತ್ಪಾದನೆಯಾಗುವ ಚಿನ್ನವನ್ನು ಹೆಚ್ಚು ಮಾಡಿ, ಹೊರಗೆ ಮಾರುವುದನ್ನು ಕಡಿಮೆ ಮಾಡಿದವು. ಇನ್ನೊಂದು ಕಡೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದಲೂ ಚಿನ್ನವನ್ನು ಖರೀದಿಸುತ್ತಾ ಹೋದವು. ಇದರಿಂದ ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಕಡಿಮೆಯಾಗಿ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಾಯ್ತು. ಯಾವಾಗ ಡಿಮ್ಯಾಂಡ್ ಜಾಸ್ತಿ ಆಗಿ ಸಪ್ಲೈ ಕಡಿಮೆ ಆಗುತ್ತೋ, ಆಗ ಬೆಲೆ ಗಗನಕ್ಕೇರೋದು ಸಹಜ. ಚಿನ್ನದ ವಿಷಯದಲ್ಲೂ ಆಗಿದ್ದು ಇದೇ. ಕಳೆದ ವರ್ಷ ಜನವರಿ 1 ರಂದು 76 ಸಾವಿರ ರೂಪಾಯಿ ಇದ್ದ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ದಿಢೀರ್ ಅಂತಾ ಏರಿಕೆ ಕಂಡಿದೆ. ಸೆಪ್ಟೆಂಬರ್‌ನಲ್ಲಿ ಒಂದು ಲಕ್ಷ ರೂಪಾಯಿ ದಾಟಿದ ಬಂಗಾರ, ಈ ವರ್ಷ ಜನವರಿಯಲ್ಲಿ ಒಂದೂವರೆ ಲಕ್ಷ ದಾಟಿ, ಕಳೆದ ತಿಂಗಳಾಂತ್ಯಕ್ಕೆ ದಾಖಲೆಯ ಮಟ್ಟ ಎಂಬಂತೆ 1.8 ಲಕ್ಷದ ಸಮೀಪ ಹೋಗಿ ನಿಂತಿತ್ತು.
1 ಲಕ್ಷದ ಕೆಳಗೆ ಬರಲಿದೆಯೇ ಬಂಗಾರ?
ಆದರೆ, ಈಗ ರಷ್ಯಾ ಮತ್ತೆ ಡಾಲರ್ ಬಳಕೆಗೆ ಮುಂದಾಗಿದೆ ಎನ್ನಲಾಗಿದೆ. ಇಡೀ ಗೇಮ್ ಅನ್ನೇ ಉಲ್ಟಾ ಮಾಡಿದೆ. ಡಿ-ಡಾಲರೈಸೇಷನ್ ಅಭಿಯಾನಕ್ಕೆ ದೊಡ್ಡಣ್ಣನಂತಿದ್ದ ರಷ್ಯಾವೇ ಈಗ ಯೂ-ಟರ್ನ್ ಹೊಡೆದರೆ, ಈ ಅಭಿಯಾನಕ್ಕೆ ದೊಡ್ಡ ಹೊಡೆತ ಬೀಳಲಿದೆ. ಪೇಸ್ 360 ಸಂಸ್ಥೆಯ ಗ್ಲೋಬಲ್ ಸ್ಟ್ರಾಟೆಜಿಸ್ಟ್ ಅಮಿತ್ ಗೋಯಲ್ ಅವರ ಪ್ರಕಾರ, ಈ ಸುದ್ದಿ ನಿಜವಾದರೆ, ಇದು ಚಿನ್ನದ ಮಾರುಕಟ್ಟೆಯಲ್ಲಿ ಒಂದು ದೊಡ್ಡ ಸ್ಟ್ರಕ್ಚರಲ್ ಶಿಫ್ಟ್, ಅಂದ್ರೆ ಮೂಲಭೂತ ಬದಲಾವಣೆಗೆ ಕಾರಣವಾಗಲಿದೆ. ಇಷ್ಟು ದಿನ ಚಿನ್ನವನ್ನು ಕೊಂಡುಕೊಳ್ಳುತ್ತಿದ್ದ ಸೆಂಟ್ರಲ್ ಬ್ಯಾಂಕ್‌ಗಳು, ಈಗ ಚಿನ್ನದ ಮೇಲಿನ ನಂಬಿಕೆ ಕಳೆದುಕೊಂಡು, ತಾವು ಖರೀದಿಸಿದ್ದ ಚಿನ್ನವನ್ನು ಮಾರಾಟ ಮಾಡಲು ಶುರುಮಾಡಬಹುದಂತೆ.. ಒಮ್ಮೆ ಯೋಚನೆ ಮಾಡಿ, ಎಲ್ಲ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ತಮ್ಮಲ್ಲಿರುವ ಚಿನ್ನವನ್ನು ಮಾರುಕಟ್ಟೆಯಲ್ಲಿ ಮಾರಲು ಶುರು ಮಾಡಿದರೆ ಏನಾಗಬಹುದು? ಆಗ ಮಾರುಕಟ್ಟೆಯಲ್ಲಿ ಚಿನ್ನದ ಸಪ್ಲೈ ದಿಢೀರ್ ಅಂತ ಹೆಚ್ಚಾಗುತ್ತೆ, ಆದರೆ, ಕೊಳ್ಳುವವರಿಲ್ಲದೆ ಡಿಮ್ಯಾಂಡ್ ಕುಸಿಯುತ್ತೆ. ಆಗ ಚಿನ್ನದ ಬೆಲೆ ಪಾತಾಳಕ್ಕೆ ಇಳಿಯೋದು ಗ್ಯಾರಂಟಿ ಎನ್ನಲಾಗಿದೆ.
2027ರ ಎಂಡ್‌ಗೆ ಚಿನ್ನದ ದರ 1 ಲಕ್ಷದ ಕೆಳಗೆ?
ಅಮಿತ್ ಗೋಯಲ್ ಅವರ ಪ್ರಕಾರ, ಚಿನ್ನದ ಬೆಲೆ ಈಗಾಗಲೇ ತನ್ನ ಗರಿಷ್ಠ ಮಟ್ಟವನ್ನು ತಲುಪಿ ಆಗಿದೆ. ಇನ್ನು ಮುಂದೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತವನ್ನು ನಿರೀಕ್ಷಿಸಬಹುದು. 2027ರ ಅಂತ್ಯದ ವೇಳೆಗೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 3,000 ಡಾಲರ್‌ಗೆ ಇಳಿಯಬಹುದು. ಭಾರತದಲ್ಲಿ, 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂಪಾಯಿಗಿಂತ ಕೆಳಗೆ, ಅಂದ್ರೆ 90,000 ದಿಂದ 1 ಲಕ್ಷದ ಆಸುಪಾಸಿಗೆ ಬಂದು ನಿಲ್ಲಬಹುದು ಅಂತ ಅವರು ಭವಿಷ್ಯ ನುಡಿದಿದ್ದಾರೆ. ಆದರೆ, ಈ ಕುಸಿತ ಒಂದೇ ಸಲಕ್ಕೆ ಆಗುವುದಿಲ್ಲ. ಮಧ್ಯೆ ಮಧ್ಯೆ ಸ್ವಲ್ಪ ಏರಿಕೆ ಕಂಡರೂ, ದೊಡ್ಡ ಮಟ್ಟದ ಕುಸಿತ ತಪ್ಪಿದ್ದಲ್ಲ ಅನ್ನೋದು ಅವರ ಮಾತು. ಜನವರಿ 29ರಂದು 1.8 ಲಕ್ಷದ ಸಮೀಪ ತಲುಪಿದ್ದ 24 ಕ್ಯಾರೆಟ್ ಚಿನ್ನದ ಬೆಲೆ ಈಗ ಇಳಿಕೆಯ ಹಾದಿಯಲ್ಲಿದ್ದು, ಮುಂದೆ ಎಲ್ಲಿಗೆ ಹೋಗಿ ಮುಟ್ಟುತ್ತೋ ಎಂಬುದನ್ನು ಕಾದು ನೋಡಬೇಕಿದೆ.