ಇಸ್ಲಮಾಬಾದ್: ಫೆಬ್ರವರಿ 15ರಂದು ಕೊಲಂಬೊದಲ್ಲಿ ಭಾರತ ತಂಡದೆದುರು ನಡೆಯಬೇಕಿರುವ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂಬ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕಿದ್ದರೆ ಹಾಗೂ ಈ ಕುರಿತು ತನ್ನ ಸರಕಾರದೊಂದಿಗೆ ಸಮಾಲೋಚನೆ ನಡೆಸಬೇಕಿದ್ದರೆ, ತನ್ನ ಮೂರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಎದುರು ಷರತ್ತು ವಿಧಿಸಿರುವ ಬಗ್ಗೆ ವರದಿಯಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ನಿಗದಿಯಂತೆಯೇ ಸುಗಮವಾಗಿ ನಡೆಯುವುದನ್ನು ಖಾತರಿಪಡಿಸಲು ಸಂಧಾನ ಪರಿಹಾರವನ್ನು ಅನ್ವೇಷಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ ಬುಲ್ ರೊಂದಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸದಸ್ಯರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿಯೋಗವನ್ನು ಭೇಟಿ ಮಾಡಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಆದಾಯದಲ್ಲಿ ಪಾಕಿಸ್ತಾನದ ಪಾಲನ್ನು ಹೆಚ್ಚಳ ಮಾಡಬೇಕು, ಭಾರತದೊಂದಿಗಿನ ದ್ವಿಪಕ್ಷೀಯ ಕ್ರಿಕೆಟ್ ಅನ್ನು ಮರುಸ್ಥಾಪಿಸಬೇಕು ಹಾಗೂ ಹಸ್ತಲಾಘವ ಶಿಷ್ಟಾಚಾರವನ್ನು ಮರು ಜಾರಿಗೊಳಿಸಬೇಕು ಎಂಬ ಮೂರು ಷರತ್ತುಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯೆದುರು ಇರಿಸಿದೆ ಎಂದು Cricbuzz ವರದಿ ಮಾಡಿದೆ.
ಭಾರತದೆದುರು ಪಾಕಿಸ್ತಾನ ತಂಡವು ಟಿ-20 ವಿಶ್ವಕಪ್ ಪಂದ್ಯವನ್ನು ಆಡುವುದಿಲ್ಲ ಎಂದು ಪಾಕಿಸ್ತಾನ ಸರಕಾರ ಪ್ರಕಟಿಸಿದ್ದರಿಂದ ಈ ವಿವಾದ ಭುಗಿಲೆದ್ದಿದೆ.

