HEALTH TIPS

ಡಿಜಿಟಲ್ ವಂಚನೆಗೆ ₹25 ಸಾವಿರ ಪರಿಹಾರ: ಭಾರತೀಯ ರಿಸರ್ವ್‌ ಬ್ಯಾಂಕ್‌

ಮುಂಬೈ: ಡಿಜಿಟಲ್‌ ವಂಚನೆಗೆ ಒಳಗಾದ ಗ್ರಾಹಕರಿಗೆ ಒಂದು ಬಾರಿ ಪರಿಹಾರವಾಗಿ ₹25 ಸಾವಿರ ಪಾವತಿಸುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ. 'ಒಟಿಪಿ' ಹಂಚಿಕೊಂಡು ವಂಚನೆಗೆ ಒಳಗಾದ ಗ್ರಾಹಕರಿಗೂ ಪರಿಹಾರ ಲಭಿಸಲಿದೆ. 

 ಆದರೆ, ಒಬ್ಬ ಗ್ರಾಹಕ ಜೀವಿತಾವಧಿಯಲ್ಲಿ ಒಂದು ಬಾರಿ ಮಾತ್ರ (ಒಂದು ವಂಚನೆ ವಹಿವಾಟಿಗೆ) ಪರಿಹಾರ ಪಡೆಯಲು ಅರ್ಹ ಎಂದಿರುವ ಆರ್‌ಬಿಐ, ಶೀಘ್ರದಲ್ಲೇ, ಪರಿಹಾರ ನೀತಿಯ ಕರಡನ್ನು ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಪ್ರಕಟ ಮಾಡಲಾಗುವುದು ಎಂದು ಹೇಳಿದೆ.

ಆರ್‌ಬಿಐ ನಿರ್ವಹಿಸುತ್ತಿರುವ ಸುಮಾರು ₹85 ಸಾವಿರ ಕೋಟಿ ಮೊತ್ತದ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಯಿಂದ (ಡಿಇಎ) ಪರಿಹಾರದ ಮೊತ್ತವನ್ನು ವಂಚನೆಗೆ ಒಳಗಾದ ಗ್ರಾಹಕರ ಖಾತೆಗೆ ಪಾವತಿಸಲಾಗುವುದು ಎಂದು ಆರ್‌ಬಿಐ ಗವರ್ನರ್‌ ಸಂಜಯ್ ಮಲ್ಹೋತ್ರಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. 10 ವರ್ಷಗಳಿಂದ ಗ್ರಾಹಕರು ಹಿಂದಕ್ಕೆ ಪಡೆಯದ ಠೇವಣಿ ಮೊತ್ತವು ಈ ನಿಧಿಯಲ್ಲಿ ಸೇರಿಕೊಂಡಿದೆ.

'ಬ್ಯಾಂಕ್‌ ಗ್ರಾಹಕ ತನ್ನ ತಪ್ಪಿನಿಂದ ಅಥವಾ ಇತರ ಯಾರದ್ದೊ ತಪ್ಪಿನಿಂದ, ಉದ್ದೇಶಪೂರ್ವಕವಲ್ಲದೆ ಡಿಜಿಟಲ್‌ ವಂಚನೆಗೆ ಒಳಗಾಗಿದ್ದರೆ, ನಾವು ಯಾವುದೇ ಹೆಚ್ಚಿನ ಪ್ರಶ್ನೆಗಳನ್ನು ಕೇಳದೆ ₹25 ಸಾವಿರ ಪರಿಹಾರ ಪಾವತಿಸುತ್ತೇವೆ' ಎಂದು ಅವರು ಸ್ಪಷ್ಟಪಡಿಸಿದರು.

'ಡಿಜಿಟಲ್‌ ವಂಚನೆಗೆ ಒಳಗಾಗಿರುವುದು ಖಚಿತಗೊಂಡ ನಂತರ ಗ್ರಾಹಕರಿಗೆ 'ಡಿಇಎ' ನಿಧಿಯಿಂದ ಪರಿಹಾರ ವರ್ಗಾವಣೆ ಆಗಲಿದೆ' ಎಂದು ಆರ್‌ಬಿಐನ ಡೆಪ್ಯುಟಿ ಗವರ್ನರ್‌ ಜೆ. ಸ್ವಾಮಿನಾಥನ್‌ ಸ್ಪಷ್ಟಪಡಿಸಿದರು.

ಹೆಚ್ಚಿನ ಗ್ರಾಹಕರಿಗೆ ಪ್ರಯೋಜನ

‌'ಮೂರನೆಯ ಎರಡರಷ್ಟು ಡಿಜಿಟಲ್‌ ವಂಚನೆ ಪ್ರಕರಣಗಳ ಮೊತ್ತವು ₹50 ಸಾವಿರಕ್ಕಿಂತ ಕಡಿಮೆ ಇರುತ್ತದೆ. ಹೀಗಾಗಿ ವಂಚನೆಗೆ ಒಳಗಾದ ಹೆಚ್ಚಿನ ಗ್ರಾಹಕರು ಈ ಸೌಲಭ್ಯದ ಪ್ರಯೋಜನ ಪಡೆಯಲಿದ್ದಾರೆ' ಎಂದು ಆರ್‌ಬಿಐ ಅಧಿಕಾರಿಗಳು ಹೇಳಿದ್ದಾರೆ. ಡಿಜಿಟಲ್‌ ವಂಚನೆಯಿಂದ ಕಳೆದುಕೊಂಡ ಮೊತ್ತವು ₹25 ಸಾವಿರಕ್ಕಿಂತ ಕಡಿಮೆ ಇದ್ದರೆ ವಂಚನೆಗೆ ಒಳಗಾದ ಮೊತ್ತದ ಶೇ 85ರಷ್ಟನ್ನು ಪಾವತಿಸಲಾಗುವುದು. ಹೆಚ್ಚಿನ ಮೊತ್ತದ ಪ್ರಕರಣಗಳಲ್ಲೂ ಪರಿಹಾರವನ್ನು ₹25 ಸಾವಿರಕ್ಕೆ ನಿಗದಿಪಡಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.

ರೆಪೊ ದರ ಯಥಾಸ್ಥಿತಿ

ಮುಂಬೈ: ದೇಶೀಯ ಹಣದುಬ್ಬರ ಮತ್ತು ಆರ್ಥಿಕ ಪ್ರಗತಿಯ ಮುನ್ನೋಟವು ಸಕಾರಾತ್ಮಕವಾಗಿ ಮುಂದುವರಿದಿರುವುದರಿಂದ ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಶೇ 5.25 ಯಥಾಸ್ಥಿತಿಯಲ್ಲೇ ಮುಂದುವರಿಸಲು ಶುಕ್ರವಾರ ನಡೆದ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2026-27ನೇ ಸಾಲಿನ ಬಜೆಟ್ ಪ್ರಕಟಿಸಿದ ನಂತರದ ಆರ್‌ಬಿಐನ ಮೊದಲ ಹಣಕಾಸು ನೀತಿ ಪರಿಶೀಲನೆ ಇದಾಗಿದೆ. 'ದೇಶೀಯ ಮತ್ತು ಜಾಗತಿಕ ಮಟ್ಟದ ಆರ್ಥಿಕ ಪರಿಸ್ಥಿತಿಗಳು ಸ್ಥಿರತೆಯತ್ತ ಮರಳುತ್ತಿರುವುದರ ವಿವರವಾದ ಮೌಲ್ಯಮಾಪನದ ನಂತರ ಎಂಪಿಸಿ ರೆಪೊ ದರದಲ್ಲಿ ತಟಸ್ಥ ನಿಲುವನ್ನು ಕಾಯ್ದುಕೊಂಡಿದೆ ಎಂದು ಗವರ್ನರ್‌ ಸಂಜಯ್‌ ಮಲ್ಹೋತ್ರಾ ಹೇಳಿದರು. ಇತ್ತೀಚೆಗೆ ಐರೋಪ್ಯ ಒಕ್ಕೂಟದೊಂದಿಗೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದ ಮತ್ತು ಅಮೆರಿಕದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳು ಆರ್ಥಿಕ ಬೆಳವಣಿಗೆಯ ಮೇಲೆ ಸಕಾರಾರಾತ್ಮಕ ಪರಿಣಾಮ ಬೀರಲಿದ್ದು ಮುಂದಿನ ಎರಡು ತ್ರೈಮಾಸಿಕಗಳಲ್ಲೂ ಜಿಡಿಪಿ ಬೆಳವಣಿಗೆ ದರ ಮೇಲ್ಮುಖವಾಗಿಯೇ ಇರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. ಎನ್‌ಬಿಎಫ್‌ಸಿ ಶಾಖೆ: ನಿಯಮ ಸಡಿಲಿಕೆ ಲೀಡ್‌ ಬ್ಯಾಂಕ್‌ನ ದತ್ತಾಂಶ ನಿರ್ವಹಣೆಗಾಗಿ ಏಕೀಕೃತ ಪೋರ್ಟಲ್‌ ಸ್ಥಾಪಿಸುವುದು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಶಾಖೆ ತೆರೆಯುವ ಮಾನದಂಡಗಳನ್ನು ಸಡಿಲಿಸುವ ನಿರ್ಧಾರವನ್ನೂ ಆರ್‌ಬಿಐ ಕೈಗೊಂಡಿದೆ. ಕೆಲವು ಸುರಕ್ಷತಾ ಕ್ರಮಗಳೊಂದಿಗೆ ರಿಯಲ್‌ ಎಸ್ಟೇಟ್‌ ಹೂಡಿಕೆ ಟ್ರಸ್ಟ್‌ಗಳಿಗೆ (ಆರ್‌ಇಐಟಿ) ಸಾಲ ನೀಡಲು ಬ್ಯಾಂಕ್‌ಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಗವರ್ನರ್‌ ಮಲ್ಹೋತ್ರಾ ಹೇಳಿದರು.

ಎಂಎಸ್‌ಇ ಸಾಲದ ಮಿತಿ ₹20 ಲಕ್ಷಕ್ಕೆ ಹೆಚ್ಚಳ

ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ (ಎಂಎಸ್‌ಇ) ಪೂರಕ ಭದ್ರತೆ ಇಲ್ಲದೆ (ಅಡಮಾನರಹಿತ) ನೀಡುವ ಸಾಲದ ಮಿತಿಯನ್ನು ಆರ್‌ಬಿಐ ₹10 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಿಸಿದೆ. ಮುಂದಿನ ಹಣಕಾಸು ವರ್ಷದಿಂದ ಮಂಜೂರಾಗುವ ಸಾಲಕ್ಕೆ ಇದು ಅನ್ವಯಿಸಲಿದೆ. ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮಾರ್ಗಸೂಚಿಗಳ ಪರಿಷ್ಕರಣೆಗೂ ಆರ್‌ಬಿಐ ಮುಂದಾಗಿದ್ದು ಕೆಸಿಸಿ ಅವಧಿಯನ್ನು ಆರು ವರ್ಷಕ್ಕೆ ವಿಸ್ತರಣೆ ಮಾಡುವುದು ವ್ಯಾಪ್ತಿಯನ್ನು ಹೆಚ್ಚಿಸುವುದೂ ಪ್ರಸ್ತಾವಿತ ಮಾರ್ಗಸೂಚಿಯಲ್ಲಿ ಸೇರಿದೆ. ಕರಡು ಮಾರ್ಗಸೂಚಿ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

-ಸಂಜಯ್ ಮಲ್ಹೋತ್ರಾ, ಆರ್‌ಬಿಐ ಗವರ್ನರ್‌ 

ಫಲಾನುಭವಿ ಖಾತೆಗೆ ಹಣ ವರ್ಗಾವಣೆ ವಿಳಂಬ ಆಗುವುದು ಮತ್ತು ಹಿರಿಯ ನಾಗರಿಕರು ವಂಚನೆಗೆ ಒಳಗಾಗದಂತೆ ನೋಡಿಕೊಳ್ಳಲು ಹೆಚ್ಚುವರಿ ದೃಢೀಕರಣ ಸೇರಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು 

-ಜೆ.ಸ್ವಾಮಿನಾಥನ್‌, ಡೆಪ್ಯುಟಿ ಗವರ್ನರ್‌ 

ಡಿಜಿಟಲ್ ವಂಚನೆಗೆ ತಿಳಿಯದೆ ಬಲಿಯಾಗುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಪರಿಹಾರವನ್ನು ಘೋಷಿಸಲಾಗಿದೆ. ಇದರಿಂದ ಹೆಚ್ಚಿನ ಹಣಕಾಸು ಹೊರೆ ಬೀಳುವುದಿಲ್ಲ 

-ಶಿರೀಶ್ ಮುರ್ಮು, ಡೆಪ್ಯುಟಿ ಗವರ್ನರ್‌. 

ಠೇವಣಿದಾರರು ತಮ್ಮ ಠೇವಣಿಗಳನ್ನು ಮರಳಿ ಪಡೆಯುವಂತೆ ಜಾಗೃತಿ ಅಭಿಯಾನ ನಡೆಸಿದ್ದರಿಂದ ಠೇವಣಿಗಳ ಹಿಂತೆಗೆತವು ವಾರ್ಷಿಕ ₹5 ಸಾವಿರಕ್ಕೆ ಏರಿಕೆಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries