ಗಾಜಿಯಾಬಾದ್: ಆನ್‌ಲೈನ್ ಗೇಮ್ ಆಡಬೇಡಿ ಎಂದು ಪೋಷಕರು ಗದರಿದಕ್ಕೆ ಮೂವರು ಬಾಲಕಿಯರು, ತಾವು ವಾಸವಿದ್ದ ಪ್ಲಾಟ್‌ನ ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಜರುಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಧ್ಯರಾತ್ರಿ ಸುಮಾರು 2.15ರ ಸುಮಾರಿಗೆ ಗಾಜಿಯಾಬಾದ್‌ನ ಭಾರತ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ಜರುಗಿದೆ. ಚೇತನ್ ಕುಮಾರ್ ಎನ್ನುವವರ ಮೂವರು ಮಕ್ಕಳಾದ ನಿಶಿಕಾ (16), ಪ್ರಾಚಿ (14) ಮತ್ತು ಪಾಖಿ (12) ಒಂಬತ್ತನೇ ಮಹಡಿಯಿಂದ ಕೆಳಗೆ ಹಾರಿದ್ದು, ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಲೋನಿಯಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿಸಿದ್ದಾರೆ.
ಮೂವರು ಬಾಲಕಿಯರು ಕೂಡ ಕೋವಿಡ್ ಸಂದರ್ಭದಲ್ಲಿ ಕೊರಿಯನ್ ಮೂಲದ ಆನ್‌ಲೈನ್ ಗೇಮ್ ಆಡಲು ಶುರುಮಾಡಿದ್ದರು. ಅದಕ್ಕೆ ವ್ಯಸನಿಗಳಾಗಿದ್ದರು ಎಂದು ಹೇಳಿದ್ದಾರೆ.
ಬಾಲಕಿಯರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

