ಬದಿಯಡ್ಕ: ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸೇವಾ ಇಂಟರ್ನೇಶನಲ್ ಸಂಸ್ಥೆಯ ವತಿಯಿಂದ ಸ್ಪೋನ್ಸರ್ ಎ ಚೈಲ್ಡ್ ಯೋಜನೆಯಲ್ಲಿ ಎಂಟು ಮಂದಿ ಪ್ರತಿಭಾವಂತರೂ, ಆರ್ಥಿಕ ಸಹಾಯಕ್ಕೆ ಅರ್ಹರೂ ಆದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಧನ ವಿತರಿಸಲಾಯಿತು.
ಬಡಿಯಡ್ಕ ಶ್ರೀ ಭಾರತಿ ವಿದ್ಯಾಪೀಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ರೂ.15,000 ಮೊತ್ತದ ಸಹಾಯ ಧನವನ್ನು ನೀಡಲಾಯಿತು. ಅಮೇರಿಕಾದ ಜಿಯೋರ್ಜಿಯಾ ದ ಸ್ಟೋಕ್ ಬರ್ಗ್ನ ಭಟ್ ಎಂಡ್ ಭಟ್ ಮೆಡಿಕಲ್ ಸೆಂಟರ್ನ ಮೆಡಿಕಲ್ ನಿರ್ದೇಶಕ ಡಾ. ಸುಬ್ರಹ್ಮಣ್ಯ ಭಟ್ ಹಾಗೂ ಡಾ. ಅನ್ನಪೂರ್ಣ ಭಟ್ ದಂಪತಿಗಳು ಈ ಎಂಟೂ ವಿದ್ಯಾರ್ಥಿಗಳ ಸಹಾಯ ಧನದ ಮೊತ್ತವನ್ನು ಸ್ವತಃ ತಾವೇ ಭರಿಸಿದ್ದರು. ಕಾಸರಗೋಡಿನ ಬಳ್ಳಂಬೆಟ್ಟು ಮೂಲದ ಅಮೇರಿಕಾ ನಿವಾಸಿಗಳಾದ ಇವರು ಸಹಾಯಧನ ನೀಡಿ ಮಾತನಾಡಿ, ಶಿಕ್ಷಣವೇ ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿ. ಈ ಸಹಾಯಧನವು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿ ಹಾಗೂ ಅವರು ಸಮಾಜಕ್ಕೆ ಉತ್ತಮ ನಾಗರಿಕರಾಗಿ ರೂಪುಗೊಳ್ಳಲಿ ಎಂದು ಹಾರೈಸಿ ತಾವು ನಡೆದು ಬಂದ ದಾರಿಯನ್ನು ಮನಮುಟ್ಟುವಂತೆ ವಿವರಿಸಿದರು. ಇದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡಲು ಮೊದಲು ಕನಸು ಕಾಣಿರಿ, ಯೋಜನೆ ಹಾಕಿರಿ, ಕಠಿಣ ಶ್ರಮ ವಹಿಸಿ ಮುಂದೆ ಸಾಗಿ ಎಂಬ ಕಿವಿ ಮಾತು ಹೇಳಿದರು. ಇದಕ್ಕೆ ಪೂರಕವಾಗಿ ಡಾ. ಅನ್ನಪೂರ್ಣಾ ಭಟ್ ಮಾತನಾಡಿ, ವೇತನ ಪಡೆದ ವಿದ್ಯಾರ್ಥಿಗಳ ಮುಂದಿನ ಗುರಿಯನ್ನು ಕೇಳುತ್ತಾ ಅದನ್ನು ಸಾಸುವಲ್ಲಿ ಯಶಸ್ವಿಯಾಗಿ ಎಂದು ಹರಸಿದರು.
ಸೇವಾ ಇಂಟರ್ನ್ಯಾಷನಲ್ ಸಂಯೋಜಕಿ ಕಾರ್ತಿಕಾ, ಅತಿಥಿಗಳಾಗಿ ಆಗಮಿಸಿದ ಮಂಗಳೂರಿನ ಖ್ಯಾತ ವೈದ್ಯ ಡಾ. ಜಿ.ಕೆ ಭಟ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹವ್ಯಕ ಚಾರೀಟೇಬಲ್ ಟ್ರಸ್ಟ್ನ ಅಧ್ಯಕ್ಷ ಡಾ. ವೈ.ವಿ ಕೃಷ್ಣಮೂರ್ತಿ ಮಾತನಾಡಿದರು. ಮುಖ್ಯೋಪಾಧ್ಯಾಯರು, ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಮಧುಸೂದನ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅನಂತಕೃಷ್ಣ ಚಡಗ ಶುಭ ಹಾರೈಸಿದರು. ನಾರಾಯಣ ಭಟ್ ಪಂಜಿತ್ತಡ್ಕ, ಕೃಷ್ಣ ಪ್ರಕಾಶ್ ಬಳ್ಳಂಬೆಟ್ಟು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಉಪಸ್ಥಿತರಿದ್ದರು. ಅಧ್ಯಾಪಿಕೆ ಸರೋಜಾ ಕಾನತ್ತಿಲ ಸ್ವಾಗತಿಸಿ, ಎಂಟನೆಯ ತರಗತಿಯ ಅಂಜಲಿ ವಂದಿಸಿದರು. ಒಂಭತ್ತನೆಯ ತರಗತಿಯ ಪ್ರಕೃತಿ ಎ ಕಾರ್ಯಕ್ರಮ ನಿರೂಪಿಸಿದಳು. ಹತ್ತನೆಯ ತರಗತಿಯ ಅವನಿ ಎಂ ತಾನೇ ರಚಿಸಿದ ಹಿಂದಿ ಕವನದ ಮುಖಾಂತರ ಸಲ್ಲಿಸಿದ ಕೃತಜ್ಞತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

.jpg)
