ಕೋಲ್ಕತ್ತ: ಭಾರತೀಯ ವಾಯುಪಡೆಯ (ಐಎಎಫ್) ಪೂರ್ವ ಏರ್ ಕಮಾಂಡ್ ವಿಭಾಗದ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಏರ್ ಮಾರ್ಷಲ್ ಇಂದ್ರಪಾಲ್ ಸಿಂಗ್ ವಾಲಿಯಾ ಅವರು ಭಾನುವಾರ ಇಲ್ಲಿ ಪದಗ್ರಹಣ ಮಾಡಿದರು.
1988ರಲ್ಲಿ ಐಎಎಫ್‌ನ ಯುದ್ಧ ವಿಮಾನ ಶಾಖೆಗೆ ನಿಯುಕ್ತರಾಗಿದ್ದ ವಾಲಿಯಾ ಅವರು, ಮಿಗ್ ಸರಣಿಯ ವಿಮಾನಗಳು, ಜಾಗ್ವಾರ್ ಮತ್ತು ಸುಖೋಯ್-30 ಎಂಕೆಐ ವಿಮಾನಗಳ ವಾಯು ಕಾರ್ಯಾಚರಣೆ ನಿರ್ವಹಿಸಿದ್ದಾರೆ.
3,200 ಗಂಟೆಗಳ ಅಪಘಾತರಹಿತ ಹಾರಾಟ ಅನುಭವ ಹೊಂದಿದ್ದಾರೆ ಎಂದು ರಕ್ಷಣಾ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಜಪಾನ್, ದಕ್ಷಿಣ ಕೊರಿಯಾದಲ್ಲಿ ಭಾರತೀಯ ರಾಯಭಾರಿ ಜೊತೆಗಿನ ಸೇನಾಧಿಕಾರಿಯಾಗಿಯೂ ವಾಲಿಯಾ ಅವರು ಸೇವೆ ಸಲ್ಲಿಸಿದ್ದಾರೆ.
ಮತ್ತೊಂದೆಡೆ ಪೂರ್ವ ಏರ್ ಕಮಾಂಡ್ ವಿಭಾಗದ ಹಿರಿಯ ಸಿಬ್ಬಂದಿ ಅಧಿಕಾರಿಯಾಗಿ ಏರ್ ಮಾರ್ಷಲ್ ದೇವೇಂದ್ರ ಪಿ. ಹಿರಾನಿ ಅಧಿಕಾರ ಸ್ವೀಕರಿಸಿದರು. 1990ರಲ್ಲಿ ಐಎಎಫ್ ಸೇರಿದ್ದ ಹಿರಾನಿ ಅವರು, ಹೆಲಿಕಾಪ್ಟರ್ ಮತ್ತು ತರಬೇತಿ ವಿಮಾನಗಳ 5,000 ಗಂಟೆಗಳಷ್ಟು ಹಾರಾಟ ಅನುಭವ ಹೊಂದಿದ್ದಾರೆ.

