ನವದೆಹಲಿ: ಮುನಂಬಮ್ ಭೂ ವಿವಾದವನ್ನು ಪರಿಹರಿಸಲು ನ್ಯಾಯಮೂರ್ತಿ ಸಿ.ಎನ್. ರಾಮಚಂದ್ರನ್ ನಾಯರ್ ಅವರನ್ನು ನ್ಯಾಯಾಂಗ ಆಯೋಗವಾಗಿ ನೇಮಿಸಿದ ರಾಜ್ಯ ಸರ್ಕಾರದ ಕ್ರಮ ಕಾನೂನುಬಾಹಿರ ಎಂದು ಕೇರಳ ವಕ್ಫ್ ಮಂಡಳಿ ಸುಪ್ರೀಂ ಕೋರ್ಟ್‍ಗೆ ತಿಳಿಸಿದೆ.
ಜಮೀನು ವಕ್ಫ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರ ವಕ್ಫ್ ನ್ಯಾಯಮಂಡಳಿಗೆ ಮಾತ್ರ ಇದೆ ಮತ್ತು ಸರ್ಕಾರದ ಈ ನಡೆ ಸಂವಿಧಾನಬಾಹಿರ ಎಂದು ಮಂಡಳಿಯು ತನ್ನ ಅರ್ಜಿಯಲ್ಲಿ ವಾದಿಸಿದೆ.
ವಕ್ಫ್ ಕಾಯ್ದೆಯ ಸೆಕ್ಷನ್ 83(1) ರ ಅಡಿಯಲ್ಲಿ, ವಕ್ಫ್ ಭೂಮಿಗೆ ಸಂಬಂಧಿಸಿದ ವಿವಾದಗಳಲ್ಲಿ ವಕ್ಫ್ ನ್ಯಾಯಮಂಡಳಿಗೆ ಅಂತಿಮ ಅಧಿಕಾರವಿದೆ ಮತ್ತು ನ್ಯಾಯಾಲಯಗಳು ಅಥವಾ ಸರ್ಕಾರ ನೇಮಿಸಿದ ನ್ಯಾಯಾಂಗ ಆಯೋಗಕ್ಕೆ ಹಾಗೆ ಮಾಡುವ ಅಧಿಕಾರವಿಲ್ಲ ಎಂದು ಮಂಡಳಿಯು ಗಮನಸೆಳೆದಿದೆ.
ಮುನಂಬಮ್ ವಕ್ಫ್ ಭೂಮಿ ಅಲ್ಲ ಎಂಬ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಬೇಕು ಮತ್ತು ಪ್ರಕರಣವು ಪ್ರಸ್ತುತ ಕೋಝಿಕೋಡ್ ವಕ್ಫ್ ನ್ಯಾಯಮಂಡಳಿಯ ಪರಿಗಣನೆಯಲ್ಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಪಿಎಂ ನಾಯಕ ಎಂ.ಕೆ. ಜಾಕೀರ್ ಅಧ್ಯಕ್ಷತೆಯ ವಕ್ಫ್ ಮಂಡಳಿಯು ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವುದು ಪ್ರಮುಖ ರಾಜಕೀಯ ಚರ್ಚೆಗಳಿಗೂ ಕಾರಣವಾಗಿದೆ.

