ಟೆಹ್ರಾನ್: ಪರಮಾಣು ಮಾತುಕತೆಯಲ್ಲಿ ಒಪ್ಪಂದಕ್ಕೆ ಬರಬೇಕಾದರೆ ಅಮೆರಿಕ ತನ್ನ ಅತಿಯಾದ ಬೇಡಿಕೆಗಳನ್ನು ಕೈಬಿಡಬೇಕು ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಶುಕ್ರವಾರ ಹೇಳಿದ್ದಾರೆ.
ಪರಮಾಣು ಒಪ್ಪಂದದ ಬಗ್ಗೆ ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವೆ ಜಿನೆವಾದಲ್ಲಿ ಮಾತುಕತೆ ನಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅಬ್ಬಾಸ್ ಅರಾಘ್ಚಿ ` ಈ ಹಾದಿಯಲ್ಲಿನ ಯಶಸ್ಸಿಗೆ ಇನ್ನೊಂದು ಕಡೆಯಿಂದ ಗಂಭೀರತೆ ಮತ್ತು ವಾಸ್ತವಿಕತೆಯ ಅಗತ್ಯವಿದೆ ಹಾಗೂ ಯಾವುದೇ ತಪ್ಪು ಲೆಕ್ಕಾಚಾರ ಮತ್ತು ಅತಿಯಾದ ಬೇಡಿಕೆಗಳನ್ನು ಕೈಬಿಡಬೇಕು' ಎಂದು ಹೇಳಿದರು.
ಯಾವ ಬೇಡಿಕೆ ಎಂಬುದನ್ನು ಇರಾನ್ ಸ್ಪಷ್ಟಪಡಿಸಿಲ್ಲ, ಆದರೆ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆ ಮತ್ತು ಯುರೇನಿಯಂ ಸಂವರ್ಧನೆ ಸಾಮರ್ಥ್ಯದ ಬಗ್ಗೆ ಅಮೆರಿಕ ನಿರಂತರ ಪ್ರಸ್ತಾಪಿಸುತ್ತಿದೆ. ಅಮೆರಿಕದ ಸಾಗರೋತ್ತರ ನೆಲೆಗಳು ಹಾಗೂ ಯುರೋಪ್‌ಗೆ ಬೆದರಿಕೆ ಒಡ್ಡಬಲ್ಲ ಕ್ಷಿಪಣಿಗಳನ್ನು ಇರಾನ್ ಈಗಾಗಲೇ ಅಭಿವೃದ್ಧಿಪಡಿಸಿದೆ. ಮತ್ತು ಅವರು ಶೀಘ್ರದಲ್ಲೇ ಅಮೆರಿಕವನ್ನು ತಲುಪಬಲ್ಲ ಕ್ಷಿಪಣಿಗಳನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಟ್ರಂಪ್ ಇತ್ತೀಚೆಗೆ ಹೇಳಿದ್ದರು.

