ವಿಶ್ವಸಂಸ್ಥೆ: ಅಮೆರಿಕದ ದಾಳಿಗಳ ಪುನರಾವರ್ತಿತ ಬೆದರಿಕೆಗಳ ಮಧ್ಯೆ ಇರಾನ್‌ನ ಸುತ್ತಲಿನ ಪ್ರಾದೇಶಿಕ ಉಲ್ಬಣಗೊಳ್ಳುವ ಅಪಾಯದ ಬಗ್ಗೆ ದಿಗ್ಬ್ರಮೆಗೊಂಡಿರುವುದಾಗಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಶುಕ್ರವಾರ ಹೇಳಿದ್ದಾರೆ.
ಪ್ರಾದೇಶಿಕ ಮಿಲಿಟರಿ ಉಲ್ಬಣದ (ಸಂಘರ್ಷದ ತೀವ್ರತೆ, ವ್ಯಾಪ್ತಿ ಅಥವಾ ಹಿಂಸಾಚಾರದಲ್ಲಿ ಹೆಚ್ಚಳ, ಹೆಚ್ಚುವರಿ ಪಡೆ ಅಥವಾ ಶಸ್ತ್ರಾಸ್ತ್ರಗಳ ಜಮಾವಣೆ) ಸಂಭವನೀಯತೆ ಮತ್ತು ನಾಗರಿಕರ ಮೇಲೆ ಅದರ ಪ್ರಭಾವದ ಕಳವಳಗೊಂಡಿದ್ದು ಸಂಬಂಧಿಸಿದ ಎಲ್ಲಾ ಪಕ್ಷದವರು ಸಂಯಮ ಮತ್ತು ಸಮಂಜಸವಾಗಿ ವರ್ತಿಸುವರೆಂಬ ವಿಶ್ವಾಸವಿದೆ ಎಂದು ಟರ್ಕ್ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯ ಸಭೆಯಲ್ಲಿ ಹೇಳಿದ್ದಾರೆ.
ವಿವಾದಗಳನ್ನು ಪರಿಹರಿಸಲು ಬಲದ ಬಳಕೆಯ ಸಾಮಾನ್ಯೀಕರಣದ ಬಗ್ಗೆ ಎಚ್ಚರಿಕೆ ನೀಡಿದ ಅವರು, ಘರ್ಷಣೆಗಳು ಮಾನವ ಹಕ್ಕುಗಳ ಪಾಳುಭೂಮಿಯನ್ನು ಸೃಷ್ಟಿಸುತ್ತದೆ. ಅಂತಾರಾಷ್ಟ್ರೀಯ ಮಾನವೀಯ ಮತ್ತು ಮಾನವ ಹಕ್ಕುಗಳ ಕಾನೂನಿನ ಸೌಧವು ನಮ್ಮ ಕಣ್ಣಮುಂದೆಯೇ ಕುಸಿದು ಬೀಳುವುದನ್ನು ಜಗತ್ತು ಮೂಕಪ್ರೇಕ್ಷಕನಂತೆ ನಿಲ್ಲಲು ಸಾಧ್ಯವಿಲ್ಲ. 2010ರ ಬಳಿಕ ಸಶಸ್ತ್ರ ಸಂಷರ್ಘದ ಸಂಖ್ಯೆ ಬಹುತೇಕ ದುಪ್ಪಟ್ಟಾಗಿದೆ. ಜಗತ್ತು ನಿಜವಾಗಿಯೂ ಅತ್ಯಂತ ಅಪಾಯದ ಸ್ಥಳವಾಗುತ್ತಿದೆ. ಅಧಿಕಾರಕ್ಕಾಗಿ ನಿರಂತರ ಪೈಪೋಟಿ ನಡೆಯುತ್ತಿದ್ದು ಎಲ್ಲೆಡೆ ಹಕ್ಕುಗಳಿಗೆ ಹಾನಿಯಾಗುತ್ತಿದೆ. ಭೂಮಿ, ಇಂಧನ, ಜಾಗತಿಕ ಆರ್ಥಿಕತೆಯಲ್ಲಿ ಪ್ರಾಬಲ್ಯ ಸಾಧಿಸಲು, ಇನ್ನಷ್ಟು ಅಧಿಕಾರ ಸಂಗ್ರಹಿಸಲು ಎಲ್ಲೆಡೆ ಸ್ಪರ್ಧೆ, ಪೈಪೋಟಿ ಮುಂದುವರಿದಿದೆ. ಆದರೆ ಅಧಿಕಾರ, ಬಲವನ್ನು ಖಂಡಿತವಾಗಿಯೂ ಇತರ ಉದ್ದೇಶಗಳಿಗೆ ಬಳಸಬೇಕಿದೆ ಎಂದು ಆಗ್ರಹಿಸಿದ್ದಾರೆ.

