ಲಂಡನ್: ಬ್ರಿಟನ್‌ನಲ್ಲಿ ನಡೆದ ಕ್ಷೇತ್ರವೊಂದರ ಉಪ ಚುನಾವಣೆಯಲ್ಲಿ ಗ್ರೀನ್ ಪಕ್ಷವು ಜಯಶಾಲಿಯಾಗಿದೆ. ಈ ಗೆಲುವು ಸಣ್ಣ ಪಕ್ಷಕ್ಕೆ ಮತ್ತಷ್ಟು ಬಲ ತುಂಬಿದೆ ಮತ್ತು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರಿಗೆ ಹಿನ್ನಡೆ ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಗ್ರೇಟರ್ ಮ್ಯಾಂಚೆಸ್ಟರ್ ಪ್ರದೇಶದ ಗೋರ್ಟನ್ ಮತ್ತು ಡೆಂಟನ್ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಗ್ರೀನ್ ಪಕ್ಷದ ಹನ್ನಾ ಸ್ಪೆನ್ಸರ್ ಅವರು 14,980 ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾಗಿದ್ದಾರೆ. ರಿಫಾರ್ಮ್ ಯುಕೆ ಪಕ್ಷದ ಮ್ಯಾಥ್ಯೂ ಗುಡ್‌ವಿನ್ ಅವರು 10,578 ಮತ ಮತ್ತು ಸ್ಟಾರ್ಮರ್ ಅವರ ಲೇಬರ್ ಪಕ್ಷದ ಏಂಜಲಿಕಿ ಸ್ಟೊಗಿಯಾ ಅವರು 9,364 ಮತಗಳನ್ನು ಪಡೆದಿದ್ದಾರೆ.
ಈ ಕ್ಷೇತ್ರವು ಕಳೆದ ಒಂದು ದಶಕದಿಂದ ಲೇಬರ್ ಪಕ್ಷದ ಭದ್ರಕೋಟೆಯಾಗಿತ್ತು. ಈ ಮೂಲಕ ಮತದಾರರು ಸ್ಟಾರ್ಮರ್ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

