HEALTH TIPS

ಲೋಕಸಭಾ ಸ್ಪೀಕರ್ ಪದಚ್ಯುತಿಗೆ ನೋಟಿಸ್: ಮಾಳ್ವಂಕರ್‌ ಅವರಿಂದ ಓಂ ಬಿರ್ಲಾವರೆಗೆ

ನವದೆಹಲಿ: ಬಜೆಟ್‌ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡದಿರುವುದು, ಸಂಸದರ ಅಮಾನತು ಹಾಗೂ ಪಕ್ಷಪಾತ ಧೋರಣೆ ಆರೋಪ ಮಾಡಿರುವ ವಿರೋಧ ಪಕ್ಷಗಳು, ಲೋಕಸಭಾ ಸ್ಪೀಕರ್ ಸ್ಥಾನದಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವಂತೆ ನೋಟಿಸ್ ಸಲ್ಲಿಸಿವೆ.

ಸ್ಪೀಕರ್ ವಿರುದ್ಧ ನೋಟಿಸ್ ಸಲ್ಲಿಸಲು ಕನಿಷ್ಠ 50 ಸಂಸದರ ಸಹಿ ಅಗತ್ಯ. ಆದರೆ, ಓಂ ಬಿರ್ಲಾ ಅವರ ಪದಚ್ಯುತಿಗೆ ವಿಪಕ್ಷಗಳ 120 ಸಂಸದರು ಸಹಿ ಹಾಕಿದ್ದಾರೆ. ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಸ್ಪೀಕರ್‌ಗಳ ಪಟ್ಟಿಯಲ್ಲಿ ಓಂ ಬಿರ್ಲಾ ಮಾತ್ರವಲ್ಲ, ಹಿಂದೆ ಇತರರಿಗೂ ಇಂಥದ್ದೇ ಸನ್ನಿವೇಶ ಎದುರಾಗಿತ್ತು ಎಂಬುದು ಇತಿಹಾಸಪುಟದಿಂದ ನೋಡಬಹುದು.

ಓಂ ಬಿರ್ಲಾ ವಿರುದ್ಧ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕ ಗೌರವ್ ಗೊಗೋಯಿ, ಮುಖ್ಯ ಸಚೇತಕ ಕೆ.ಸುರೇಶ್, ಸಚೇತಕ ಮೊಹಮ್ಮದ್ ಜಾವೇದ್ ಅವರನ್ನು ಒಳಗೊಂಡ ನಿಯೋಗವು, ಸಂವಿಧಾನದ 94(ಸಿ) ವಿಧಿಯಡಿ ಈ ನೋಟಿಸ್‌ ಅನ್ನು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್‌ ಕುಮಾರ್‌ ಸಿಂಗ್‌ ಅವರಿಗೆ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ ಜತೆಗೆ ಸಮಾಜವಾದಿ ಪಕ್ಷ, ಡಿಎಂಕೆ, ಆರ್‌ಜೆಡಿ, ಶಿವಸೇನಾ(ಯುಬಿಟಿ), ಎನ್‌ಸಿಪಿ(ಎಸ್‌ಪಿ) ಹಾಗೂ ಎಡಪಕ್ಷಗಳು ಸೇರಿ ವಿರೋಧ ಪಕ್ಷಗಳ 120 ಸಂಸದರು ಈ ನೋಟಿಸ್‌ಗೆ ಸಹಿ ಹಾಕಿದ್ದಾರೆ.

ಮೇಲಿನ ಆರೋಪಗಳ ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಬಳಿ ತೆರಳಿರುವ ಕಾಂಗ್ರೆಸ್ ಸಂಸದರು, 'ಅನಿರೀಕ್ಷಿತ ಕೃತ್ಯ' ಎಸಗಲು ಮುಂದಾಗಿದ್ದ ಕುರಿತು ಮಾಹಿತಿ ಇತ್ತು. ಈ ಕಾರಣಕ್ಕೆ ಸದನಕ್ಕೆ ಬಾರದಂತೆ ಮೋದಿ ಅವರಿಗೆ ಮನವಿ ಮಾಡಿದ್ದೆ ಎಂಬ ಬಿರ್ಲಾ ಅವರ ಹೇಳಿಕೆಯನ್ನೂ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

'ಬಿರ್ಲಾ ಅವರ ಇಂಥ ಆರೋಪಗಳು ಸಂಪೂರ್ಣ ಸುಳ್ಳು. ಸ್ಪೀಕರ್‌ ಅವರು ಸಂಸದೀಯ ಶಿಷ್ಟಾಚಾರ ಕಾಪಾಡುವುದು ಹಾಗೂ ನಿಯಮಗಳ ಪಾಲನೆಯ ಜವಾಬ್ದಾರಿ ಹೊತ್ತಿರುವ ಕಸ್ಟೋಡಿಯನ್ ಆಗಿದ್ದಾರೆ. ಆದರೆ, ಇಂತಹ ಆರೋಪಗಳನ್ನು ಹೊರಿಸುವುದಕ್ಕೆ ಅವರು ಸದನವನ್ನು ಬಳಸಿಕೊಂಡಿದ್ದಾರೆ' ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.

ಪದಚ್ಯುತ ನೋಟಿಸ್ ಎದುರಿಸಿದ ಇತರ ಸ್ಪೀಕರ್‌ಗಳು

ಲೋಕಸಭಾ ಸ್ಪೀಕರ್‌ ಪದಚ್ಯುತಿಗೊಳಿಸುವ ನೋಟಿಸ್‌ ಜಾರಿ ಇದೇ ಮೊದಲಲ್ಲ. ಈ ಹಿಂದೆಯೂ ಇಂಥ ಪ್ರಯತ್ನಗಳನ್ನು ವಿರೋಧ ಪಕ್ಷಗಳು ಮಾಡಿವೆ.

1954ರಲ್ಲಿ ಜಿ.ವಿ. ಮಾಳ್ವಂಕರ್ ಅವರ ವಿರುದ್ಧವೂ 1954ರ ಡಿಸೆಂಬರ್‌ನಲ್ಲಿ ಪದಚ್ಯುತಿ ನೋಟಿಸ್ ಜಾರಿಯಾಗಿತ್ತು. ಅಂದಿನ ವಿರೋಧ ಪಕ್ಷದ ನಾಯಕ ಜೆ.ಬಿ. ಕೃಪಲಾನಿ ಅವರು ಇದರ ನೇತೃತ್ವ ವಹಿಸಿದ್ದರು. ಪಕ್ಷಪಾತ ವರ್ತನೆಯ ಆರೋಪವನ್ನು ಮಾಳ್ವಂಕರ್ ವಿರುದ್ಧ ಮಾಡಲಾಗಿತ್ತು. ಎರಡು ಗಂಟೆಗಳ ಚರ್ಚೆಯ ಬಳಿಕ ಪದಚ್ಯುತಿ ಪ್ರಸ್ತಾವನೆಗೆ ಸೋಲಾಯಿತು. ಭಾರತದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದೇ ವಿಶ್ಲೇಷಿಸಲಾಗುತ್ತದೆ.

1954ರಲ್ಲಿ ಸದನದಲ್ಲಿ ಮಾತನಾಡಿದ್ದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು, 'ಚರ್ಚೆಯಲ್ಲಿ ಅತಿ ಹೆಚ್ಚು ಸಮಯವು ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷಗಳಿಗೆ ಸಿಗಬೇಕು. ಜತೆಗೆ, ಸ್ಪೀಕರ್ ಅವರಿಗೆ ಸವಾಲೆಸೆಯುವುದನ್ನು ಹಗುರವಾಗಿ ಪರಿಗಣಿಸಲಾಗದು. ನಿಲುವಳಿ ಎಂಬುದು ಒಬ್ಬ ವ್ಯಕ್ತಿಯ ಕುರಿತಲ್ಲ, ಬದಲಿಗೆ ಸದನದ ಉನ್ನತ ಘನತೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಯಾವುದೇ ಸದಸ್ಯರಿಗೆ ವಿಪ್ ಜಾರಿ ಮಾಡಬಾರದು. ಪ್ರತಿ ಸಂಸದರು ತಮ್ಮ ವಿವೇಚನೆಯನ್ನು ಆಧರಿಸಿ ಮತ ಚಲಾಯಿಸುವ ಮೂಲಕ ಪೀಠಕ್ಕೆ ಗೌರವ ಸಲ್ಲಿಸಬೇಕು' ಎಂದಿದ್ದರು.

1966ರಲ್ಲಿ ಸರ್ದಾರ್ ಹುಕುಂ ಸಿಂಗ್ ಅವರನ್ನು ಪದಚ್ಯುತಿಗೊಳಿಸುವಂತೆ ವಿರೋಧ ಪಕ್ಷಗಳು ನೋಟಿಸ್ ಜಾರಿ ಮಾಡಿದ್ದವು. ಆದರೆ ಅದಕ್ಕೆ ಅಗತ್ಯವಿದ್ದ ಕನಿಷ್ಠ 50 ಸಂಸದರ ಸಹಿ ಇಲ್ಲದ ಕಾರಣ, ಅದು ಬಿದ್ದುಹೋಯಿತು.

1987ರಲ್ಲಿ ಬಲರಾಮ್ ಜಾಖಡ್ ಅವರು ಲೋಕಸಭಾ ಸ್ಪೀಕರ್ ಆಗಿದ್ದ ಅವಧಿಯಲ್ಲೂ ಅವರ ವಿರುದ್ಧ ವಿಪಕ್ಷಗಳು ಪದಚ್ಯುತಿಗೊಳಿಸುವ ನೋಟಿಸ್ ಜಾರಿ ಮಾಡಿದ್ದವು.

2026ರಲ್ಲಿ ಓಂ ಬಿರ್ಲಾ ವಿರುದ್ಧವೂ ಇಂಥದ್ದೇ ಪ್ರಯತ್ನ ನಡೆದಿದೆ. ರಾಜ್ಯಸಭೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿಂದಿನ ಸಭಾಧ್ಯಕ್ಷ ಜಗದೀಪ್ ಧನಕರ್ ವಿರುದ್ಧ ಪಕ್ಷಪಾತದ ಆರೋಪ ಮಾಡಿ ಕೆಲ ಸಂಸದರು ನೋಟಿಸ್ ನೀಡಿದ್ದರು. 1952ರ ನಂತರದಲ್ಲಿ ಉಪರಾಷ್ಟ್ರಪತಿ ವಿರುದ್ಧ ಸಲ್ಲಿಕೆಯಾದ ಇಂಥ ಮೊದಲ ನೋಟಿಸ್ ಇದಾಗಿತ್ತು. ಆದರೆ ಅಗತ್ಯ ಸಂಖ್ಯೆಯ ಬೆಂಬಲ ಇಲ್ಲದ ಕಾರಣ ಅದಕ್ಕೆ ಸೋಲಾಯಿತು.

ಪದಚ್ಯುತಿ ನೋಟಿಸ್‌ ಯಶಸ್ವಿಯಾದ ಉದಾಹರಣೆಗಳಿವೆಯೇ?

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಪದಚ್ಯುತಿಗೊಳಿಸುವ ಕುರಿತು ವಿರೋಧ ಪಕ್ಷಗಳು ನೋಟಿಸ್‌ ನೀಡಿವೆ. ಆದರೆ, ಸಂಸದೀಯ ಇತಿಹಾಸ ಅವಲೋಕಿಸಿದಾಗ, ಈ ಹಿಂದೆ ಇಂತಹ ಯಾವ ಪ್ರಯತ್ನಗಳು ಯಶಸ್ವಿಯಾದ ನಿದರ್ಶನಗಳು ಇಲ್ಲ ಎಂಬುದು ಗೊತ್ತಾಗುತ್ತದೆ.

ಇಂತಹ ನೋಟಿಸ್‌ಗೆ ಕನಿಷ್ಠ ಇಬ್ಬರು ಲೋಕಸಭಾ ಸಂಸದರು ಸಹಿ ಹಾಕುವುದು ಕಡ್ಡಾಯ. ಚರ್ಚೆ ಬಳಿಕ, ಸರಳ ಬಹುಮತದೊಂದಿಗೆ ಸದನ ಠರಾವು ಅನುಮೋದಿಸುವ ಮೂಲಕ ಸ್ಪೀಕರ್‌ ಅವರನ್ನು ಪದಚ್ಯುತಗೊಳಿಸುವುದಕ್ಕೆ ಸಂವಿಧಾನದ 94(ಸಿ) ವಿಧಿ ಅವಕಾಶ ನೀಡುತ್ತದೆ.

'ಸದನದ ಒಟ್ಟು ಸದಸ್ಯರ ಸಂಖ್ಯೆಯನ್ನು ಪರಿಗಣಿಸಲಾಗುತ್ತದೆ. ಸದನದಲ್ಲಿ ಹಾಜರಿರುವ ಹಾಗೂ ಮತ ಚಲಾಯಿಸುವ ಸದಸ್ಯರ ಸಂಖ್ಯೆ ಅಲ್ಲ. ಇದು ಸಾಮಾನ್ಯ ಪ್ರಕ್ರಿಯೆ' ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ.ಆಚಾರಿ ಹೇಳಿರುವುದು ವರದಿಯಾಗಿದೆ.

'ನೋಟಿಸ್‌ ಅಲ್ಲಿ ನಿರ್ದಿಷ್ಟ ಆರೋಪಗಳಿದ್ದಾಗ ಮಾತ್ರ ಸ್ಪೀಕರ್‌ ಅದಕ್ಕೆ ಉತ್ತರಿಸಲು ಸಾಧ್ಯ' ಎಂದು ಹೇಳಿದ ಅವರು, 'ನಿರ್ಣಯವು ಅವಹೇಳನಕಾರಿ ಭಾಷೆ ಅಥವಾ ವಿಷಯವಸ್ತು ಒಳಗೊಂಡಿರಬಾರದು' ಎಂದೆನ್ನಲಾಗಿದೆ.

ಸಂವಿಧಾನದ 96ನೇ ವಿಧಿಯು, ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಸ್ಪೀಕರ್‌ ಅವರಿಗೆ ಅವಕಾಶ ನೀಡುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries