ಲಂಡನ್: ಫೆಲೆಸ್ತೀನಿಯನ್ ಪರ ಅಭಿಯಾನ ನಡೆಸುತ್ತಿರುವ ಫೆಲೆಸ್ತೀನ್ ಆಯಕ್ಷನ್ ಗ್ರೂಪ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಬ್ರಿಟನ್ ನಿಷೇಧಿಸಿರುವುದು ಕಾನೂನುಬಾಹಿರ ಕ್ರಮ ಎಂದು ಬ್ರಿಟನ್‌ನ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ಹೈಕೋರ್ಟ್ ತೀರ್ಪಿನ ಬಳಿಕವೂ ನಿಷೇಧವು ತಾತ್ಕಾಲಿಕವಾಗಿ ಜಾರಿಯಲ್ಲಿರುತ್ತದೆ.
ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಬ್ರಿಟನ್ ಸರ್ಕಾರ ಹೇಳಿದೆ.
ಬ್ರಿಟನ್‌ನಲ್ಲಿ ಇಸ್ರೇಲ್ ಸಂಯೋಜಿತ ರಕ್ಷಣಾ ಸಂಸ್ಥೆಗಳ ಪ್ರವೇಶದ್ವಾರವನ್ನು ನಿರ್ಬಂಧಿಸುವುದು ಅಥವಾ ಕೆಂಪು ಬಣ್ಣಗಳನ್ನು ಎಸೆಯುವುದು ಸೇರಿದಂತೆ ಸಂಸ್ಥೆಗಳ ವಿರುದ್ಧ 'ನೇರ ಕ್ರಮ'ಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಫೆಲೆಸ್ತೀನ್ ಆಯಕ್ಷನ್ ಗ್ರೂಪ್ ಅನ್ನು ನಿಷೇಧಿಸುವುದಾಗಿ ಬ್ರಿಟನ್ ಸರ್ಕಾರ ಜುಲೈನಲ್ಲಿ ಘೋಷಿಸಿತ್ತು. ಈ ಕ್ರಮವು ಪ್ರತಿಭಟನೆಯ ಹಕ್ಕಿನ ಮೇಲಿನ ಸರ್ವಾಧಿಕಾರಿ ನಿರ್ಬಂಧವಾಗಿದೆ ಎಂದು ಫೆಲೆಸ್ತೀನ್ ಆಯಕ್ಷನ್ ಗ್ರೂಫ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

