ದುಬೈ: ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆಗಿನ ಸಂಪರ್ಕಗಳು ಬಹಿರಂಗವಾದ ಹಿನ್ನೆಲೆಯಲ್ಲಿ ದುಬೈ ಮೂಲದ ಜಾಗತಿಕ ಬಂದರು ನಿರ್ವಹಣಾ ದೈತ್ಯ ಡಿಪಿ ವರ್ಲ್ಡ್ ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಸುಲ್ತಾನ್ ಅಹ್ಮದ್ ಬಿನ್ ಸುಲೈಮ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಹೊಸದಾಗಿ ಬಿಡುಗಡೆಯಾದ ದಾಖಲೆಗಳಲ್ಲಿ ಸುಲೈಮ್ ಮತ್ತು ಎಪ್ಸ್ಟೀನ್ ನಡುವೆ ನೂರಾರು ಇಮೇಲ್ ಗಳ ವಿನಿಮಯ ನಡೆದಿರುವುದು ಬಹಿರಂಗವಾಗಿದ್ದು, ಇದರಿಂದ ಸಂಸ್ಥೆಯ ಮೇಲೆ ವ್ಯಾಪಕ ಒತ್ತಡ ಹೆಚ್ಚಾಗಿತ್ತು ಎಂದು BBC ವರದಿ ಮಾಡಿದೆ.
ಡಿಪಿ ವರ್ಲ್ಡ್ ಪ್ರಕಟಿಸಿದ ಹೇಳಿಕೆಯಲ್ಲಿ "ತಕ್ಷಣದಿಂದಲೇ ಜಾರಿಗೆ ಬರುತ್ತದೆ" ಎಂದು ರಾಜೀನಾಮೆ ಘೋಷಿಸಿದೆ. ಎಸ್ಸಾ ಕಾಝಿಮ್ ಅವರನ್ನು ಹೊಸ ಅಧ್ಯಕ್ಷರನ್ನಾಗಿ ಹಾಗೂ ಯುವರಾಜ್ ನಾರಾಯಣ್ ಅವರನ್ನು ಮುಖ್ಯ ಕಾರ್ಯನಿರ್ವಾಹಕರನ್ನಾಗಿ ನೇಮಿಸಲಾಗಿದೆ. ಇದೇ ವೇಳೆ ಸಂಸ್ಥೆಯ ಅಧಿಕೃತ ವೆಬ್ಸೈಟ್ ನಿಂದ ಸುಲೈಮ್ ಅವರ ಫೊಟೋವನ್ನೂ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.
ಆರು ಖಂಡಗಳಲ್ಲಿ ಬಂದರು ಟರ್ಮಿನಲ್ ಗಳನ್ನು ನಿರ್ವಹಿಸುತ್ತಿರುವ ಡಿಪಿ ವರ್ಲ್ಡ್ ಜಾಗತಿಕ ವ್ಯಾಪಾರ ಮೂಲಸೌಕರ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಇತ್ತೀಚಿನ ಬೆಳವಣಿಗೆಗಳಿಂದ ಅದರ ಉದ್ಯಮ ವಲಯದಿಂದ ಆಕ್ರೋಶ ಎದುರಿಸಿದೆ ಎಂದು ತಿಳಿದು ಬಂದಿದೆ. ಈ ವಾರ ಯುನೈಟೆಡ್ ಕಿಂಗ್ಡಮ್ ನ ಅಭಿವೃದ್ಧಿ ಹಣಕಾಸು ಸಂಸ್ಥೆ ಹಾಗೂ ಕೆನಡಾದ ಎರಡನೇ ಅತಿದೊಡ್ಡ ಪಿಂಚಣಿ ನಿಧಿ ಲಾ ಕೈಸ್ಸೆಯು ಡಿಪಿ ವರ್ಲ್ಡ್ ಮೇಲಿನ ಹೊಸ ಹೂಡಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಡಿಪಿ ವರ್ಲ್ಡ್ ಹಣಕಾಸು ನೆರವು ನೀಡುತ್ತಿದ್ದ ಪ್ರಿನ್ಸ್ ಆಫ್ ವೇಲ್ಸ್ ಅವರ 'ಅರ್ಥ್ಶಾಟ್' ಯೋಜನೆಯೂ, ಸುಲೈಮ್ ಹೆಸರು ಎಪ್ಸ್ಟೀನ್ ಫೈಲ್ ನಲ್ಲಿ ಕಾಣಿಸಿಕೊಂಡ ಬಳಿಕ ಯುಕೆಯ ಚಾರಿಟಿ ಆಯೋಗದ ಗಮನಕ್ಕೆ ಬಂದಿದೆ. ಇದು ಡಿಪಿ ವರ್ಲ್ಡ್ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಎಪ್ಸ್ಟೀನ್ ಫೈಲ್ ಗಳು ಸುಲೈಮ್ ಮತ್ತು ಎಪ್ಸ್ಟೀನ್ ನಡುವಿನ ದೀರ್ಘಕಾಲಿಕ ಹಾಗೂ ನಿಕಟ ಸಂಪರ್ಕವನ್ನು ಬಹಿರಂಗಪಡಿಸಿವೆ. ಎಪ್ಸ್ಟೀನ್ , ಸುಲೈಮ್ ಅವರನ್ನು ರಾಜಕೀಯ ಹಾಗೂ ಉದ್ಯಮ ಕ್ಷೇತ್ರದ ಅನೇಕ ಅಂತರರಾಷ್ಟ್ರೀಯ ವ್ಯಕ್ತಿಗಳಿಗೆ ಇಮೇಲ್ ಮೂಲಕ ಪರಿಚಯಿಸಿದ್ದರೆ, 2016ರಲ್ಲಿ ಸುಲೈಮ್ ಅವರು ಪ್ರಿನ್ಸ್ ಆಫ್ ವೇಲ್ಸ್ ಅವರಿಗೆ ಡಿಪಿ ವರ್ಲ್ಡ್ ಲಂಡನ್ ಗೇಟ್ ವೇ ಬಂದರಿನ ಪ್ರವಾಸದ ಅವಕಾಶವನ್ನು ನೀಡಿದ್ದರು ಎಂಬುದೂ ಉಲ್ಲೇಖವಾಗಿದೆ.
ಅಮೆರಿಕದ ಸೆನೆಟರ್ ರೋ ಖನ್ನಾ ಮತ್ತು ಥಾಮಸ್ ಮಾಸ್ಸಿ ಅವರು ಸುಲೈಮ್ ಅವರನ್ನು ಎಪ್ಸ್ಟೀನ್ ಜೊತೆ ಸಂಪರ್ಕ ಹೊಂದಿದ್ದ "ಆರು ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು" ಎಂದು ಆರೋಪಿಸಿದ್ದಾರೆ. ಫೆಬ್ರವರಿ 9ರಂದು ಮಾಸ್ಸಿ ಸೂಚಿಸಿದ ತಿದ್ದುಪಡಿಗಳಲ್ಲಿ 2009ರಲ್ಲಿ ಎಪ್ಸ್ಟೀನ್ ಕಳುಹಿಸಿದ "ಚಿತ್ರಹಿಂಸೆ ವಿಡಿಯೋ" ಉಲ್ಲೇಖವಿರುವ ಇಮೇಲ್ ದಾಖಲೆ ಕೂಡ ಸೇರಿದೆ. ಆ ಇಮೇಲ್ ಸ್ವೀಕರಿಸಿದವರು ಚೀನಾ-ಅಮೆರಿಕ ನಡುವೆ ಪ್ರಯಾಣಿಸುತ್ತಿರುವುದಾಗಿ ಉತ್ತರಿಸಿದ್ದರೂ ಅದರ ಸಂದರ್ಭ ಸ್ಪಷ್ಟವಾಗಿಲ್ಲ. ಆ ಇಮೇಲ್ ಸ್ವೀಕರಿಸಿದವರು ಸುಲೈಮ್ ಎಂದು ಅಮೆರಿಕ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
►'ವಿಶ್ವಾಸಾರ್ಹ ಸ್ನೇಹಿತ' ಎಂದು ಉಲ್ಲೇಖ
ಬಿಬಿಸಿ ನ್ಯೂಸ್ ಅರಬಿಕ್ ವಿಶ್ಲೇಷಣೆಯ ಪ್ರಕಾರ, 2007ರಿಂದಲೇ ಸುಲೈಮ್ ಮತ್ತು ಎಪ್ಸ್ಟೀನ್ ನಡುವಿನ ಸಂಪರ್ಕ ಮುಂದುವರಿದಿತ್ತು. ಇಬ್ಬರೂ ತಮ್ಮ ಪ್ರಯಾಣ ಯೋಜನೆಗಳು, ಉದ್ಯಮ ವಿಚಾರಗಳು, ಸಂಪರ್ಕಗಳು, ಸುದ್ದಿ ಲೇಖನಗಳು ಹಾಗೂ ಕೆಲವೊಮ್ಮೆ ಹಾಸ್ಯ ಸಂದೇಶಗಳನ್ನು ನಿಯಮಿತವಾಗಿ ಹಂಚಿಕೊಂಡಿದ್ದಾರೆ. 2013ರ ಜೂನ್ನ ಇಮೇಲ್ ನಲ್ಲಿ ಎಪ್ಸ್ಟೀನ್ ಸುಲೈಮ್ ಅವರನ್ನು "ಅತ್ಯಂತ ವಿಶ್ವಾಸಾರ್ಹ ಸ್ನೇಹಿತರಲ್ಲಿ ಒಬ್ಬರು" ಎಂದು ಬಣ್ಣಿಸಿದ್ದಾನೆ.
ದುಬೈ "ಇಸ್ಲಾಮಿಕ್" ಡಿಜಿಟಲ್ ಕರೆನ್ಸಿ ಆರಂಭಿಸುವ ವಿಚಾರ ಸೇರಿದಂತೆ ಜಾಗತಿಕ ಉದ್ಯಮ ಆಲೋಚನೆಗಳನ್ನೂ ಚರ್ಚಿಸಿದ್ದರೆಂದು ದಾಖಲೆಗಳು ಸೂಚಿಸುತ್ತವೆ. ಇದೇ ವೇಳೆ ಸುಲೈಮ್ ತನ್ನ ಹಾಗೂ ತನ್ನ ಮಗಳು ಮತ್ತು ಕುಟುಂಬದ ಆರೋಗ್ಯ ವಿಚಾರಗಳ ಕುರಿತು ಎಪ್ಸ್ಟೀನ್ ಸಲಹೆ ಕೇಳಿರುವುದೂ ಇಮೇಲ್ ಗಳಲ್ಲಿ ಗೋಚರಿಸುತ್ತದೆ. ಎಪ್ಸ್ಟೀನ್ 2008ರಲ್ಲಿ ಅಪರಾಧ ಶಿಕ್ಷೆಗೆ ಗುರಿಯಾದ ಬಳಿಕವೂ ಕನಿಷ್ಠ 2017ರವರೆಗೆ ಸಂಪರ್ಕ ಮುಂದುವರಿದಿದ್ದುದಾಗಿ ದಾಖಲೆಗಳು ತಿಳಿಸುತ್ತವೆ.
►ಮಹಿಳೆಯರ ಕುರಿತು ಇಮೇಲ್ ಚರ್ಚೆಗಳು
ಇಮೇಲ್ ಗಳ ಪ್ರಕಾರ ಇಬ್ಬರೂ ತಮ್ಮ ಸುತ್ತಮುತ್ತಲಿನ ಹುಡುಗಿಯರು ಮತ್ತು ಮಹಿಳೆಯರ ಕುರಿತು ಹಲವು ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. 2013ರ ಇಮೇಲ್ ನಲ್ಲಿ ಇಬ್ಬರು ಮಹಿಳೆಯರ ಕುರಿತು , ಒಬ್ಬರನ್ನು ಹೊಗಳಿ ಮತ್ತೊಬ್ಬರನ್ನು ತಿರಸ್ಕರಿಸಿದಂತೆ ಉಲ್ಲೇಖವಿದೆ. ನಾಲ್ಕು ವರ್ಷಗಳ ನಂತರದ ಇಮೇಲ್ ಗಳಲ್ಲಿ ಎಪ್ಸ್ಟೀನ್ ನ "ಖಾಸಗಿ ಮಸಾಜ್ ಮಾಡುವವಳು" ಟರ್ಕಿಯ ಹೋಟೆಲ್ ನಲ್ಲಿ "ವಿಸ್ತೃತ ತರಬೇತಿ ಕಾರ್ಯಕ್ರಮ"ಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ದಾಖಲೆಗಳು ಸೂಚಿಸುತ್ತವೆ. ಆ ಮಹಿಳೆ ರಷ್ಯಾ ಪಾಸ್ಪೋರ್ಟ್ ಹೊಂದಿದ್ದಾಳೆ ಎಂಬುದನ್ನೂ ದೃಢಪಡಿಸಲಾಗಿದೆ.
2015ರ ಸಂಬಂಧವಿಲ್ಲದ ಇಮೇಲ್ ನಲ್ಲಿ "ರಷ್ಯಾ ಎಲ್ಲಾ ಸುಂದರ ಮಹಿಳೆಯರ ಮೂಲ" ಎಂದು ಸುಲೈಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡು ಪ್ರತ್ಯೇಕ ಇಮೇಲ್ ಗಳಲ್ಲಿ ಸುಲೈಮ್ ಗೆ ಐರಿಶ್ ಹಾಗೂ ಉಜ್ಬೆಕ್ ಮೂಲದ ಗರ್ಲ್ಫ್ರೆಂಡ್ ಗಳಿದ್ದರೂ ಎಂಬುದೂ ತಿಳಿದುಬರುತ್ತದೆ. 2017ರಲ್ಲಿ "ಇದು ನನ್ನ ಹೊಸ 22 ವರ್ಷದ ಉಜ್ಬೆಕ್ ಗೆಳತಿ" ಎಂದು ಬರೆದಿದ್ದಾಗ ಎಪ್ಸ್ಟೀನ್ ಆಕೆಯ ಪಾಸ್ಪೋರ್ಟ್ ಪ್ರಕಾರ 23 ವರ್ಷ ಎಂದು ಸರಿಪಡಿಸಿರುವುರುದು ಕಂಡು ಬಂದಿದೆ.
ಪತ್ರವ್ಯವಹಾರವು ಸುಲೈಮ್ ವಿವಾಹಿತರಾಗಿದ್ದು, ಒಂದೇ ಅವಧಿಯಲ್ಲಿ ಇಬ್ಬರು ಪತ್ನಿಯರನ್ನು ಹೊಂದಿದ್ದರು ಎಂದು ಎಪ್ಸ್ಟೀನ್ ಫೈಲ್ಸ್ ಬಹಿರಂಗಪಡಿಸಿದೆ. ಕೆಲ ಸಂದರ್ಭಗಳಲ್ಲಿ ಲೈಂಗಿಕ ಹಾಗೂ ʼವರ್ಣʼ ಸಂಬಂಧಿತ ಹಾಸ್ಯ ಸಂದೇಶಗಳನ್ನು ಫಾರ್ವರ್ಡ್ ಮಾಡಿರುವುದೂ ʼಫೈಲ್ʼ ಗಳಲ್ಲಿ ಕಾಣುತ್ತದೆ.
►ಮ್ಯಾಂಡೆಲ್ಸನ್ ಸಂಪರ್ಕ
ಲಂಡನ್ ಗೇಟ್ ವೇ ಬಂದರು ಒಪ್ಪಂದದ ವಿಚಾರದಲ್ಲಿ ಸುಲೈಮ್ ಪರವಾಗಿ ಎಪ್ಸ್ಟೀನ್ ಲಾರ್ಡ್ ಮ್ಯಾಂಡೆಲ್ಸನ್ ಅವರನ್ನು ಸಂಪರ್ಕಿಸಿದ್ದಾನೆ ಎಂಬುದನ್ನು 2009ರ ಇಮೇಲ್ ಸೂಚಿಸುತ್ತದೆ. "ಸುಲ್ತಾನನೊಂದಿಗೆ ಚೆನ್ನಾಗಿರಿ" ಎಂದು ಎಪ್ಸ್ಟೀನ್ ಸಲಹೆ ನೀಡಿದ್ದ ಇಮೇಲ್ ನಲ್ಲಿ ಭೇಟಿ ನಿಗದಿಯೂ ಉಲ್ಲೇಖವಾಗಿದೆ. ಡಿಪಿ ವರ್ಲ್ಡ್ ಒಪ್ಪಂದಕ್ಕೆ ಬೆಂಬಲ ಪಡೆಯಲು ನಡೆದ ಈ ಸಂಪರ್ಕದಲ್ಲಿ ಎಪ್ಸ್ಟೀನ್ ಮಧ್ಯವರ್ತಿಯಾಗಿದ್ದಾನೆ ಎಂಬ ಸೂಚನೆ ಇದ್ದರೂ, ಅಂತಿಮ ಅನುಮೋದನೆಯಲ್ಲಿ ಅವನ ಪಾತ್ರ ಸ್ಪಷ್ಟವಾಗಿಲ್ಲ. ಲಾರ್ಡ್ ಮ್ಯಾಂಡೆಲ್ಸನ್ ಅವರನ್ನು BBC ಈ ಕುರಿತು ಪ್ರತಿಕ್ರಿಯೆಗಾಗಿ ಸಂಪರ್ಕಿಸಿದೆ.
ಮಾರ್ಚ್ 2016 ನಂತರ ಕಳುಹಿಸಲಾದ ಇಮೇಲ್ ಮಾತುಕತೆಯಲ್ಲಿ, ಸುಲೈಮ್, ಲಂಡನ್ ಗೇಟ್ ವೇ ಬಂದರಿನಲ್ಲಿ ಪ್ರಿನ್ಸ್ ವಿಲಿಯಂ ಅವರನ್ನು ಅಧಿಕೃತವಾಗಿ ಬರಮಾಡಿಕೊಂಡಿದ್ದಾಗಿ ವಿವರಿಸಿದ್ದಾರೆ. ಅದೇ ಇಮೇಲ್ ನಲ್ಲಿ, ಅದರ ನಂತರದ ದಿನ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಆಯೋಜಿಸಲಾದ ಸಮಾರಂಭವೊಂದರಲ್ಲಿ ಪ್ರಿನ್ಸ್ ವಿಲಿಯಂ ಅವರೊಂದಿಗೆ ತಾವು ಹಾಜರಾಗಿ ಭಾಗವಹಿಸಿದ್ದುದನ್ನೂ ಉಲ್ಲೇಖಿಸಿದ್ದಾರೆ. ಈ ಕುರಿತು ಕಳುಹಿಸಿದ ಸಂದೇಶಕ್ಕೆ ಎಪ್ಸ್ಟೀನ್ "fun" ಎಂಬ ಒಂದೇ ಪದದ ಪ್ರತಿಕ್ರಿಯೆಯನ್ನು ನೀಡಿರುವುದು ಇಮೇಲ್ ದಾಖಲೆಗಳು ತೋರಿಸುತ್ತವೆ.
► ಅಂತರರಾಷ್ಟ್ರೀಯ ಪ್ರಭಾವಿಗಳ ಪರಿಚಯಗಳು
ದಾಖಲೆಗಳಲ್ಲಿ ಇಸ್ರೇಲಿನ ಮಾಜಿ ಪ್ರಧಾನಿ ಎಹುದ್ ಬರಾಕ್, ಡೊನಾಲ್ಡ್ ಟ್ರಂಪ್ ಅವರ ಮಾಜಿ ಸಲಹೆಗಾರ ಸ್ಟೀವ್ ಬ್ಯಾನನ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ರಾಜಕೀಯ ಹಾಗೂ ಉದ್ಯಮ ವಲಯದ ವ್ಯಕ್ತಿಗಳಿಗೆ ಎಪ್ಸ್ಟೀನ್ ಸುಲೈಮ್ ಅವರನ್ನು ಪರಿಚಯಿಸಿದ್ದಾನೆ ಎಂಬ ಉಲ್ಲೇಖವಿದೆ. ನಂತರದ ಇಮೇಲ್ ಗಳಲ್ಲಿ ಸುಲೈಮ್ ಅವರು ಆ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಸಾಧಿಸಿರುವುದೂ ಕಂಡುಬರುತ್ತದೆ.
2015ರ ಇಮೇಲ್ ನಲ್ಲಿ ಎಲೋನ್ ಮಸ್ಕ್ ಕುರಿತು "ಪ್ರಸ್ತಾಪ" ಉಲ್ಲೇಖವಿದ್ದರೂ ಹೆಚ್ಚಿನ ವಿವರಗಳಿಲ್ಲ. ಆಫ್ರಿಕಾ ಖಂಡದ ಕೆಲ ರಾಷ್ಟ್ರಾಧ್ಯಕ್ಷರಿಗೆ ಪರಿಚಯಸಲು ಯತ್ನಿಸಿದ್ದಾನೆ ಎಂಬ ಸೂಚನೆಗಳೂ ಫೈಲ್ ಗಳಲ್ಲಿ ಕಂಡುಬಂದಿವೆ. 2017ರಲ್ಲಿ ಟ್ರಂಪ್ ಪದಗ್ರಹಣ ಸಮಾರಂಭದ ಆಹ್ವಾನ ಸ್ವೀಕರಿಸಬೇಕೇ ಎಂಬ ವಿಚಾರದಲ್ಲಿ ಸುಲೈಮ್ ಎಪ್ಸ್ಟೀನ್ ಸಲಹೆ ಕೇಳಿದ್ದಾರೆ. ಪ್ರಿನ್ಸ್ ಆಂಡ್ರ್ಯೂ ಆಯೋಜಿಸಿದ್ದ ಭೋಜನ ಕೂಟ ಸಮಾರಂಭದ ಆಹ್ವಾನ ಕುರಿತ ಇಮೇಲ್ ಗಳೂ ಸೇರಿವೆ.
ಇದಲ್ಲದೆ ನ್ಯೂಯಾರ್ಕ್ನ ಎಪ್ಸ್ಟೀನ್ ನಿವಾಸ ಹಾಗೂ ಯುಎಸ್ ವರ್ಜಿನ್ ದ್ವೀಪಗಳ ಭೇಟಿಯ ಯೋಜನೆಗಳು ಮತ್ತು ಅಂತರರಾಷ್ಟ್ರೀಯ ಪ್ರಯಾಣ ವಿವರಗಳನ್ನು ಪರಸ್ಪರ ಹಂಚಿಕೊಂಡಿರುವ ಅನೇಕ ಇಮೇಲ್ ಗಳು ಎಪ್ಸ್ಟೀನ್ ಫೈಲ್ ನಲ್ಲಿ ಕಂಡು ಬರುತ್ತವೆ.

