ಚೆನ್ನೈ: ಆಡಳಿತಾರೂಢ ಡಿಎಂಕೆಯು ತನ್ನ ಮಿತ್ರಪಕ್ಷಗಳೊಂದಿಗೆ ಚರ್ಚಿಸಲು ಪಕ್ಷದ ಹಿರಿಯ ನಾಯಕ ಟಿ.ಆರ್. ಬಾಲು ನೇತೃತ್ವದಲ್ಲಿ ಏಳು ಸದಸ್ಯರ ಸೀಟು ಹಂಚಿಕೆ ಸಮಿತಿಯನ್ನು ಶನಿವಾರ ರಚಿಸಿದೆ.
ಮುಂಬರುವ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯ ಮಾತುಕತೆಯನ್ನು ಮಿತ್ರಪಕ್ಷಗಳೊಂದಿಗೆ ಫೆ.22ರ ಭಾನುವಾರದಿಂದಲೇ ಆರಂಭಿಸುವ ಸಾಧ್ಯತೆಯಿದೆ ಎಂದು ಡಿಎಂಕೆಯ ಮೂಲಗಳು ತಿಳಿಸಿವೆ.
ಮೈತ್ರಿಕೂಟದಲ್ಲಿ ಡಿಎಂಡಿಕೆಯನ್ನು ಒಳಗೊಳ್ಳುವುದರ ಜೊತೆಗೆ, ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆಯಿದೆ ಎನ್ನಲಾಗಿದೆ.
ವಿಜಯಕಾಂತ್ ಸ್ಥಾಪಿಸಿರುವ ಡಿಎಂಡಿಕೆಯನ್ನು ತಮ್ಮ ಒಕ್ಕೂಟಕ್ಕೆ ಸೆಳೆಯಲು ಡಿಎಂಕೆ ಹಾಗೂ ಎಐಎಡಿಎಂಕೆ ನಡುವೆ ಹಗ್ಗಜಗ್ಗಾಟ ನಡೆದಿದೆ.
ಡಿಎಂಕೆಯು ಸಮಿತಿ ರಚಿಸಿದ ಬೆನ್ನಿಗೆ ಎಂಡಿಎಂಕೆ ಪಕ್ಷವು ಸಹ ನಾಲ್ವರು ಸದಸ್ಯರ ಸಮಿತಿ ರಚಿಸಿದ್ದು, ಸೀಟು ಹಂಚಿಕೆಯ ಮಾತುಕತೆ ನಡೆಸಲಿದೆ ಎಂದು ಎಂಡಿಎಂಕೆ ಮುಖ್ಯಸ್ಥ ವೈಕೊ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅವಕಾಶವಿಲ್ಲ ಎಂದಿರುವ ವೈಕೊ, ಸ್ಟಾಲಿನ್ ಬಹುಮತದಿಂದ ಅಧಿಕಾರಕ್ಕೆ ಮರಳುತ್ತಾರೆ ಎಂದಿದ್ದಾರೆ.

