ಬದಿಯಡ್ಕ: ಭಕ್ತಿ, ಶ್ರದ್ಧೆ, ಸಂಸ್ಕಾರದ ವಿಷಯಗಳು ಬಂದಾಗ ಹೆಣ್ಣು ಮಕ್ಕಳು ದೃಢ ನಿಲುವು ಹೊಂದುವುದು ಪ್ರಾಮುಖ್ಯವಾಗಿದೆ. ಆಧುನಿಕ ವಾತಾವರಣದಲ್ಲಿ ಬದಲಾವಣೆಗಳ ವೇಗವನ್ನು ಗಮನಿಸುವಾಗ ಕುಟುಂಬ ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಇನ್ನೂ ಹೆಚ್ಚಿದೆ. ಕುಟುಂಬದವರೆಲ್ಲರೂ ಆಗಾಗ ಒಟ್ಟು ಸೇರುವುದರ ಮೂಲಕ ಸುಖೀ ಕುಟುಂಬ ಸ್ಥಾಪನೆಗೆ ಅನುಕೂಲವಾಗುತ್ತದೆ. ದೇವಾಲಯವೆನ್ನುವ ಕೇಂದ್ರಗಳಲ್ಲಿ ಮಹಿಳೆಯರು ಒಟ್ಟು ಸೇರಿ ಪ್ರಾಚೀನ ಪರಂಪರೆಯ ಚಿಂತನೆ ನಡೆಸಬೇಕು ಎಂದು ಸಾಮಾಜಿಕ ಚಿಂತಕಿ ಹಾಗೂ ಕಾಸರಗೋಡು ನಗರಸಭೆ ಮಾಜಿ ಸದಸ್ಯೆ ಸವಿತಾ ಟೀಚರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವರಾತ್ರಿ ಪ್ರಯುಕ್ತÉೀತಡ್ಕ ಶ್ರೀಸದಾಶಿವ ದೇವಸ್ಥಾನದಲ್ಲಿ ನಡೆದ ಶುದ್ಧ ವಿಭೂತಿ ತಯಾರಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಅವರನ್ನು ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಪರವಾಗಿ ಗೌರವಿಸಲಾಯಿತು. ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ವಾಣೀನಗರ ವಾರ್ಡ್ ಸದಸ್ಯೆ ನಳಿನಾಕ್ಷಿ ಹಾಗೂ ಕುಂಬ್ಡಾಜೆ ಪಂಚಾಯಿತಿನ 4 ನೇ ಏತಡ್ಕ ವಾರ್ಡಿನ ಸದಸ್ಯೆ ನಯನಾ ಕಾನಕಜೆ ಇವರನ್ನು ಅಭಿನಂದಿಸಲಾಯಿತು. ದೇಶೀ ದನದ ಸೆಗಣಿಯಿಂದ ತಾನು ಸ್ವತಃ ಬೆರಣಿ ತಯಾರಿಸಿ ಅರ್ಪಿಸಿದ ಬದಿಯಡ್ಕದ ಬಾಲಕ ತನ್ಮಯಿಯನ್ನೂ ಅಭಿನಂದಿಸಲಾಯಿತು.
ಬೆಂಗಳೂರಿನ ವಕೀಲ ವೈ.ಎಚ್.ಗಣೇಶ ಕುಟುಂಬದವರು ಸಾಂಪ್ರದಾಯಿಕ ಭಸ್ಮ ಕರಂಡಕವನ್ನು ದೇವಸ್ಥಾನದಲ್ಲಿ ಬಳಕೆಗೆ ವಸ್ತುರೂಪದ ಸೇವೆಯಾಗಿ ನೀಡಿದರು. ಆಡಳಿತ ಮೊಕ್ತೇಸರ ಚಂದ್ರಶೇಖರ ಏತಡ್ಕ ಅಧ್ಯಕ್ಷತೆ ವಹಿಸಿದ್ದರು. ಇನ್ನೋರ್ವ ಆಡಳಿತ ಮೊಕ್ತೇಸರ ಡಾ.ಪ್ರಕಾಶ ವೈ.ಎಚ್, ವೈ.ವಿ. ಸುಬ್ರಹ್ಮಣ್ಯ, ಭಕ್ತರ ಮಂಡಳಿ ಸದಸ್ಯ ಚಂದ್ರಶೇಖರ ಕಡೇಕಲ್ಲು ಮುಂತಾದವರು ಉಪಸ್ಥಿತರಿದ್ದರು. ಡಾ.ಸುರೇಶ ಕುಮಾರ್ ಎನ್.ಆರ್.ಪುರ ಸ್ವಾಗತಿಸಿ, ಸುಧಾ ಮುರಳಿ ಮಾಣಿತ್ತೋಡಿ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು. ಡಾ.ಕೃಷ್ಣಮೂರ್ತಿ, ಹರಿಶರಣ ವೈ.ಪಿ, ವೈ.ಸುಹಾಸ ರಮಣ ಹಾಗೂ ಅಶ್ವಿನಿ ರಮಣ ಇವರು ದೇಶೀ ತಳಿಯ ಹಸುವಿನ ಬೆರಣಿಯಿಂದ ಶುದ್ಧ ಭಸ್ಮ ತಯಾರಿಯನ್ನು ಸಂಘಟಿಸಿ ಕಾರ್ಯಕ್ರಮ ನಿರೂಪಿಸಿದರು. ವೈ.ವಿ.ರಮೇಶ ವಂದಿಸಿದರು.

.jpg)
