ಈಶಾನ್ಯ ರಾಜ್ಯಗಳ ಪಟ್ಟಿಯಲ್ಲಿರುವ ಮಿಜೋರಾಂ ಈಗ ಭಾರತದ ಮೊದಲ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿದೆ. ಯುನೆಸ್ಕೋ ಪ್ರಕಾರ, ಶೇ 95ರಷ್ಟು ಸಾಕ್ಷರತೆ ಇರುವ ರಾಜ್ಯ ಸಂಪೂರ್ಣ ಸಾಕ್ಷರ ಎಂದು ಘೋಷಿಸಲಾಗುತ್ತದೆ. ಮಿಜೋರಾಂ ಸದ್ಯ ಶೇ 98.2 ರಷ್ಟು ಸಾಕ್ಷರತಾ ಪ್ರಮಾಣವನ್ನು ದಾಖಲಿಸುವ ಮೂಲಕ ದೇಶದಲ್ಲಿ ಹೆಚ್ಚು ಅಕ್ಷರಸ್ಥರಿರುವ ರಾಜ್ಯವೆಂದು ಘೋಷಿಸಲಾಗಿದೆ.
ಮಿಜೋರಾಂನ ಮುಖ್ಯಮಂತ್ರಿ ಲಾಲ್ದುಹೋಮಾ ಇತ್ತೀಚೆಗೆ ಕ್ರಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, 'ಮಿಜೋರಾಂನ ಈ ಸಾಧನೆ ಅಂತ್ಯವಲ್ಲ, ಸಬಲೀಕರಣದ ಹೊಸ ಯುಗ ಆರಂಭ' ಎಂದು ಹೇಳಿದ್ದಾರೆ. ಜತೆಗೆ ಸಮಗ್ರ ಶಿಕ್ಷಣ ಯೋಜನೆ ಜಾರಿಗೊಳಿಸುವ, ಡಿಜಿಟಲ್ ಶಿಕ್ಷಣ , ಹಣಕಾಸು ಮತ್ತು ಉದ್ಯಮಶೀಲ ಕೌಶಲ್ಯಗಳನ್ನು ಪಠ್ಯಗಳಲ್ಲಿ ಸೇರಿಸಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
1987ರ ಫೆಬ್ರುವರಿ 20 ರಂದು ಮಿಜೋರಾಂ ಭಾರತದ 23ನೇ ರಾಜ್ಯವಾಗಿ ಘೋಷಣೆಯಾಯಿತು. 21,081 ಕಿ.ಮೀ ಭೌಗೋಳಿಕ ವಿಸ್ತೀರ್ಣವಿರುವ ಮಿಜೋರಾಂನ ಸಾಕ್ಷರತಾ ಪ್ರಮಾಣ 2011ರಲ್ಲಿ ಶೇ 91.33 ರಷ್ಟಿತ್ತು. ಆಗ ದೇಶದಲ್ಲಿ 3ನೇ ಸ್ಥಾನ ಪಡೆದುಕೊಂಡಿತ್ತು. 'ಉಲ್ಲಾಸ್' ಎಂಬ ಕೇಂದ್ರ ಸರ್ಕಾರದ ಯೋಜನೆಯನ್ನು ಸಮಗ್ರವಾಗಿ ಜಾರಿ ಮಾಡಿದ್ದು, ಮಿಜೋರಾಂನ ಪೂರ್ಣ ಸಾಕ್ಷರತೆಗೆ ಬಲ ತುಂಬಿದೆ ಎಂದು ವರದಿಯಾಗಿದೆ.
ಇಲ್ಲಿನ ಶಾಲೆಗಳಲ್ಲಿ ಅನುಭವ ಆಧಾರಿತ ಪಠ್ಯಕ್ರಮವನ್ನು ಪರಿಚಯಿಸಲು ಯೋಜನೆ ರೂಪಿಸಲಾಗಿದೆ. 770 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲಾಗುವುದು. 2026-27ನೇ ಶೈಕ್ಷಣಿಕ ವರ್ಷದಿಂದ 1, 2, 3 ಮತ್ತು 6ನೇ ತರಗತಿಗಳಿಗೆ ಹೊಸ ಪಠ್ಯಕ್ರಮ ಜಾರಿಯಾಗಲಿದೆ. ಗಣಿತ ಹಾಗೂ ವಿಜ್ಞಾನ ವಿಷಯಗಳ ಪಠ್ಯಕ್ರಮವನ್ನು ಮಕ್ಕಳ ದೈನಂದಿನ ಜೀವನಕ್ಕೆ ಅನ್ವಯವಾಗುವಂತೆ ರೂಪಿಸಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆಗಳಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಿಜೋರಾಂನಲ್ಲಿ ಸಾಕ್ಷರತೆ ಪ್ರಮಾಣ ಏರಿಕೆಗೆ ಕಾರಣವೇನು?
ತಲಾವ್‌ಮಂಗೈಹನಾ : ಮಿಜೋರಾಂನ ಸಾಕ್ಷರತಾ ಕ್ರಾಂತಿಯ ಹಿಂದೆ ಸಾವಿರಾರು ಸ್ವಯಂ ಸೇವಕರ ನಿಸ್ವಾರ್ಥ ಸೇವೆ ಇದೆ. ಅವರು ಸ್ವತಃ ಹಳ್ಳಿಗಳಿಗೆ ತೆರಳಿ ಅಲ್ಲಿನ ಜನರಿಗೆ ಓದಲು ಮತ್ತು ಬರೆಯಲು ಕಲಿಸಿದ್ದಾರೆ.
ಸಮುದಾಯಗಳ ಸಹಭಾಗಿತ್ವ: ಇಲ್ಲಿ ಶಿಕ್ಷಣ ಕಲಿಯುವುದು ವೈಯಕ್ತಿಕವಾದುದಲ್ಲ. ಬದಲಾಗಿ ಇಡೀ ಸಮಾಜದ ಜವಾಬ್ದಾರಿಯಾಗಿದೆ. ಮಿಜೋರಾಂನಲ್ಲಿರುವ ಧಾರ್ಮಿಕ ಕೇಂದ್ರಗಳು ಪಾಠ ಬೋಧನೆಯನ್ನು ಕೈಗೊಂಡಿವೆ.
ಉಲ್ಲಾಸ್ ಮತ್ತು ಹೊಸ ಶಿಕ್ಷಣ ನೀತಿ: ಕೇಂದ್ರ ಸರ್ಕಾರದ 'ಉಲ್ಲಾಸ್' - ನವ ಭಾರತ ಸಾಕ್ಷರತಾ ಕಾರ್ಯಕ್ರಮವನ್ನು ಮಿಜೋರಾಂ ದೇಶದಲ್ಲಿಯೇ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ. ಈ ಯೋಜನೆಯಡಿ ಮನೆ ಮನೆಗೆ ಭೇಟಿ ನೀಡಿ ಅಕ್ಷರಸ್ಥರಲ್ಲದವರನ್ನು ಗುರುತಿಸಿ ಅವರಿಗೆ ಮೂಲಭೂತ ಶಿಕ್ಷಣ ನೀಡಲಾಗಿದೆ.
ಮೂಲಸೌಕರ್ಯ ಮತ್ತು ಶೈಕ್ಷಣಿಕ ಸುಧಾರಣೆಗಳು: ಇಲ್ಲಿನ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಹೊಸ ಶಾಲೆಗಳನ್ನು ನಿರ್ಮಿಸಿದೆ. ಪ್ರತಿ ಶಾಲೆಗೂ ತರಬೇತಿ ಪಡೆದ ಹಾಗೂ ನುರಿತ ಶಿಕ್ಷಕರನ್ನು ನೇಮಿಸಿದೆ. ದೂರದ ಗುಡ್ಡಗಾಡು ಪ್ರದೇಶಗಳಲ್ಲಿರುವ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸುವ ಮೂಲಕ ಡಿಜಿಟಲ್ ಶಿಕ್ಷಣಕ್ಕೂ ಒತ್ತು ನೀಡಿದೆ. ಈ ಅಂಶಗಳಿಂದ ಮಿಜೋರಾಂನ ಸಾಕ್ಷರತಾ ಪ್ರಮಾಣ ಏರಿಕೆಗೆ ಕಾರಣವಾಗಿದೆ ಎಂದು ವರದಿ ಹೇಳುತ್ತದೆ.
ರಾಜ್ಯವಾರು ಸಾಕ್ಷರತೆ ಪಟ್ಟಿ
ಮಿಜೋರಾಂ - ಶೇ 98.2
ಲಕ್ಷದ್ವೀಪ - ಶೇ 97.3
ನಾಗಾಲ್ಯಾಂಡ್ - ಶೇ 95.7
ಕೇರಳ - ಶೇ 95.3
ಮೇಘಾಲಯ - ಶೇ 94.2
ತ್ರಿಪುರ - ಶೇ 93.7
ಚಂಡೀಗಢ - ಶೇ 93.7
ಗೋವಾ - ಶೇ 93.6
ಪುದುಚೇರಿ - ಶೇ 92.7
ಮಣಿಪುರ - ಶೇ 92
ಭಾರತದಲ್ಲಿವೆ 1 ಲಕ್ಷಕ್ಕೂ ಹೆಚ್ಚು ಏಕಶಿಕ್ಷಕ ಶಾಲೆ
ಶಿಕ್ಷಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 2024-25ನೇ ಸಾಲಿನಲ್ಲಿ 1,04,125 ಏಕ ಶಿಕ್ಷಕ ಶಾಲೆಗಳಿವೆ. ಆ ಶಾಲೆಗಳಲ್ಲಿ 33,76,769 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸರಾಸರಿ ಪ್ರತಿ ಶಾಲೆಯಲ್ಲಿ 34 ವಿದ್ಯಾರ್ಥಿಗಳಿದ್ದಾರೆ. ಶಿಕ್ಷಣ ಹಕ್ಕು ಕಾಯ್ದೆ, 2009 ರ ಪ್ರಕಾರ, ಪ್ರಾಥಮಿಕ ಹಂತದಲ್ಲಿ (4 ನೇ ತರಗತಿಗಳು) ವಿದ್ಯಾರ್ಥಿ-ಶಿಕ್ಷಕರ ಅನುಪಾತವು 30:1 ಮತ್ತು ಉನ್ನತ ಪ್ರಾಥಮಿಕ ಹಂತದಲ್ಲಿ (6-8 ನೇ ತರಗತಿಗಳು) 35:1 ಆಗಿರಬೇಕು. ಏಕ ಶಿಕ್ಷಕ ಶಾಲೆಗಳು ಆಂಧ್ರಪ್ರದೇಶದಲ್ಲಿ ಅಧಿಕವಾಗಿವೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಲಕ್ಷದ್ವೀಪಗಳಲ್ಲಿವೆ.
2022-23ರಲ್ಲಿ 1,18,190 ಇದ್ದ ಏಕ ಶಿಕ್ಷಕ ಶಾಲೆಗಳು 2023-24ರಲ್ಲಿ 1,10,971 ಕ್ಕೆ ಇಳಿದಿದೆ. ಆಂಧ್ರಪ್ರದೇಶದಲ್ಲಿ 12,912, ಉತ್ತರ ಪ್ರದೇಶ 9,508, ಜಾರ್ಖಂಡ್ 9,1720, ಮಹಾರಾಷ್ಟ್ರ 8,152, ಕರ್ನಾಟಕ 7,349, ಲಕ್ಷದ್ವೀಪ 7,217, ಮಧ್ಯಪ್ರದೇಶ 7,217, ಪಶ್ಚಿಮ ಬಂಗಾಳ 6,482, ರಾಜಸ್ಥಾನ 6,110 ಮತ್ತು ತೆಲಂಗಾಣ 6,110, ತೆಲಂಗಾಣ 6,110 ಏಕಶಿಕ್ಷಕ ಶಾಲೆಗಳಿವೆ. ಅಂಕಿ ಅಂಶಗಳ ಪ್ರಕಾರ ಏಕಶಿಕ್ಷಕ ಶಾಲೆಗಳ ದಾಖಲಾತಿ ಏರುಗತಿಯಲ್ಲಿಯೇ ಇದೆ.
ಭಾರತದಲ್ಲಿ ಸಾಕ್ಷರತಾ ಅಂತರ ಎಷ್ಟಿದೆ?
ದೇಶದಲ್ಲಿ ಪ್ರತಿ 5 ಜನರಲ್ಲಿ 4 ಜನ ಸಾಕ್ಷರರು ಎಂದು ಘೋಷಿಸಲಾಗಿದೆ. ಆದರೆ ಲಿಂಗವಾರು ನೋಡಿದಾಗ ಇದರ ಪ್ರಮಾಣ ಪ್ರತಿ 100 ಸಾಕ್ಷರ ಪುರುಷರಿಗೆ ಕೇವಲ 87 ಸಾಕ್ಷರ ಮಹಿಳೆಯರು ಮಾತ್ರ ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಅಂತರ ಹೆಚ್ಚಿದೆ. ಶಿಥಿಲಗೊಂಡ ಶಾಲೆಗಳು, ಶಿಕ್ಷಕರ ಕೊರತೆ, ಬಾಲ್ಯ ವಿವಾಹ ಮತ್ತು ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ದೂರವಿಡುವ ಪದ್ಧತಿಗಳಿಂದಾಗಿ ಗ್ರಾಮೀಣ ಭಾಗದ ಸಾಕ್ಷರತಾ ಪ್ರಮಾಣ ಕುಸಿಯುತ್ತಿದೆ ಎಂದು ವರದಿ ಹೇಳುತ್ತದೆ.
ಇತ್ತೀಚಿಗೆ ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟಪತಿ ದ್ರೌಪದಿ ಮುರ್ಮು ಅವರು 'ಡಿಜಿಟಲ್ ಪರಿಕರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಶಾಲಾ ಪಠ್ಯಕ್ರಮದಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಸೇರಿಸುವುದು ಅನಿವಾರ್ಯವಾಗಿದೆ' ಎಂದು ಉಲ್ಲೇಖಿಸಿದ್ದಾರೆ. ಸೈಬರ್ ಭದ್ರತೆ, ಬೆದರಿಕೆಗಳು, ಡೀಪ್‌ಫೇಕ್, ತಪ್ಪು ಮಾಹಿತಿ ಹಾಗೂ ಆನ್‌ಲೈನ್ ವಂಚನೆ ಕುರಿತ ಡಿಜಿಟಲ್ ಸಾಕ್ಷರತೆಯನ್ನು ಶಾಲಾ ಹಂತದಿಂದಲೇ ಕಲಿಸುವುದು ಅನಿವಾರ್ಯವಾಗಿದೆ. ಸಮೀಕ್ಷೆಯ ಪ್ರಕಾರ, ಶೇ 32ರಷ್ಟು ಪೋಷಕರು ಅಂತರ್ಜಾಲದ ಸುರಕ್ಷತೆ ಕುರಿತು ಮೀಸಲಾದ ವಿಷಯ ಜಾರಿಯಾಗಬೇಕು ಎಂದು ಹೇಳಿದ್ದಾರೆ.ಪಠ್ಯಕ್ರಮದಲ್ಲಿ ಡಿಜಿಟಲ್ ಸಾಕ್ಷರತೆ ಅನಿವಾರ್ಯಉಲ್ಲಾಸ್-ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಅಡಿ 3 ಕೋಟಿಗೂ ಹೆಚ್ಚು ಕಲಿಯುವವರಿದ್ದಾರೆ. 42 ಲಕ್ಷ ಕಲಿಸಲು ಸ್ವಯಂ ಸೇವಕರು ದಾಖಲಾಗಿದ್ದಾರೆ. ಈಗಾಗಲೇ ಸುಮಾರು 1.83 ಕೋಟಿ ಜನರು ಈ ಯೋಜನೆಯಿಂದ ಸಾಕ್ಷರರಾಗಿದ್ದಾರೆ. ಈ ಕಾರ್ಯಕ್ರಮ 26 ಭಾರತೀಯ ಭಾಷೆಗಳಲ್ಲಿ ಕಲಿಕಾ ಸಾಮಗ್ರಿಗಳನ್ನು ನೀಡುತ್ತಿದೆ. ಉಲ್ಲಾಸ್-ನವ ಭಾರತ ಸಾಕ್ಷರತಾ ಕಾರ್ಯಕ್ರಮ
2023-24ರ ಪಿಎಲ್‌ಎಫ್‌ಎಸ್ ವರದಿ ಪ್ರಕಾರ ಭಾರತದ ಸಾಕ್ಷರತಾ ಪ್ರಮಾಣ ಶೇ 80.9 ರಷ್ಟಿದೆ. ಆ ಪೈಕಿ ಪುರುಷರು ಶೇ 87.4 ಹಾಗೂ ಮಹಿಳೆಯರು 71.5% ರಷ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 77.5 ಮತ್ತು ನಗರ ಪ್ರದೇಶದಲ್ಲಿ ಶೇ 88.9 ರಷ್ಟಿದೆ.
ಮೂಲ; ಪಿಟಿಐ, ಸರ್ಕಾರಿ ಸಂಸ್ಥೆ, ಏಜೆನ್ಸೀಸ್

