ಕೊಲ್ಲಂ: ಚೂಡಿದಾರ್ ಧರಿಸಿದ್ದಕ್ಕಾಗಿ ಮುಖ್ಯೋಪಾಧ್ಯಾಯಿನಿಯೊಬ್ಬರನ್ನು ಶಾಲೆಗೆ ಪ್ರವೇಶಿಸಲು ಅವಕಾಶ ನೀಡದೆ ಹೊರ ನಿಲ್ಲಿಸದ ಬಗ್ಗೆ ದೂರು ದಾಖಲಾಗಿದೆ. ಕೊಟ್ಟಾರಕ್ಕರದ ನೆಡುವತ್ತೂರಿನ ಈಶ್ವರವಿಲಾಸಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ಬುಧವಾರ ನಡೆದಿದೆ.
ಮುಖ್ಯೋಪಾಧ್ಯಾಯಿನಿ ಸಿಂಧು ಎಸ್. ನಾಯರ್ ಅವರನ್ನು ಶಾಲಾ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ತಡೆದರು. ಶಾಲಾ ವ್ಯವಸ್ಥಾಪಕರ ಸೂಚನೆಯ ಮೇರೆಗೆ ಅವರನ್ನು ತಡೆಯಲಾಗುತ್ತಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದರು ಎಂದು ಶಿಕ್ಷಕಿ ಆರೋಪಿಸಿದ್ದಾರೆ. ಚೂಡಿದಾರ್ ಧರಿಸಿದ್ದಕ್ಕಾಗಿ ಅವರನ್ನು ತಡೆದರು ಎಂದು ಮುಖ್ಯೋಪಾಧ್ಯಾಯಿನಿ ಸ್ಪಷ್ಟಪಡಿಸಿದ್ದಾರೆ. ಶಾಲೆಗೆ ಪ್ರವೇಶಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಮುಖ್ಯೋಪಾಧ್ಯಾಯಿನಿ ಗೇಟ್ ಮುಂದೆ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಕೊನೆಗೆ, ಪೋಲೀಸರು ಆಗಮಿಸಿ ಶಿಕ್ಷಕಿಗೆ ಶಾಲೆಯೊಳಗೆ ಪ್ರವೇಶಿಸಿಸಲು ಅವಕಾಶ ನೀಡಿದರು.
ಆದಾಗ್ಯೂ, ಆಡಳಿತ ಮಂಡಳಿ ಈ ಆರೋಪಗಳನ್ನು ನಿರಾಕರಿಸಿದೆ. ಶಾಲಾ ವ್ಯವಸ್ಥಾಪಕಿಯು ಶಾಲೆಗೆ ಯಾವುದೇ ಉಡುಪಿನಲ್ಲಿ ಬರಬಹುದು ಮತ್ತು ತಡೆಯಲು ಹೇಳಿಲ್ಲ ಎಂದು ವಿವರಣೆ ನೀಡಿದ್ದಾರೆ. ವ್ಯವಸ್ಥಾಪಕಿಯು ಅಂತಹ ಬೇಡಿಕೆಯನ್ನು ಇಟ್ಟಿಲ್ಲ ಮತ್ತು ಮುಖ್ಯೋಪಾಧ್ಯಾಯಿನಿ ಏಕೆ ಅಂತಹ ಆರೋಪ ಮಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಶಾಲೆಯಲ್ಲಿ ಹುಡುಗಿಯರು ಚೂಡಿದಾರ್ ಧರಿಸಿ ಬರುವುದರಿಂದ, ಶಾಲೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಕಿಗೆ ಅವರು ಇಷ್ಟಪಡುವ ಬಟ್ಟೆಗಳನ್ನು ಧರಿಸಲು ಸ್ವಾತಂತ್ರ್ಯವಿಲ್ಲವೇ ಎಂಬುದು ಪ್ರಶ್ನೆಯಾಗಿದೆ. ಆಡಳಿತ ಮಂಡಳಿ ಮತ್ತು ಮುಖ್ಯ ಶಿಕ್ಷಕರ ನಡುವೆ ಬೇರೆ ಯಾವುದೇ ರೀತಿಯ ವಿವಾದವಿದೆಯೇ ಎಂಬುದರ ಕುರಿತು ಹೆಚ್ಚಿನ ಸ್ಪಷ್ಟೀಕರಣ ಲಭಿಸಿಲ್ಲ.



