ರಾಂಚಿ: ನಿರೀಕ್ಷಿತ ಮಟ್ಟದಲ್ಲಿ ಯೂ-ಟ್ಯೂಬ್ ಫಾಲೋವರ್ ಗಳನ್ನು ಸಂಪಾದಿಸಲು ವಿಫಲನಾದ ಹತಾಶೆಯಿಂದ 27 ವರ್ಷ ವಯಸ್ಸಿನ ಯೂಟ್ಯೂಬರ್ ಒಬ್ಬ 10 ಲಕ್ಷ ರೂಪಾಯಿ ಮೌಲ್ಯದ ತನ್ನ ಹೋಮ್ ಸ್ಟುಡಿಯೊಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
ನೆರೆಮನೆಯವರು ಯುವಕನ ಕುಟುಂಬವನ್ನು ಬೆಂಕಿಯ ಕೆನ್ನಾಲಿಗೆಯಿಂದ ಪಾರು ಮಾಡಿದರು.
ಜಾರ್ಖಂಡ್ ನ ಗವ್ರ್ಹಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಿಧಾಯಕ್ ಪ್ರಜಾಪತಿ ತನ್ನ ಮನೆಯಲ್ಲಿ ಚಿತ್ರಗಳ ಎಡಿಟಿಂಗ್ ಮತ್ತು ಡಿಜಿಟಲ್ ಕೆಲಸದ ಸ್ಟುಡಿಯೊ ನಿರ್ವಹಿಸುತ್ತಿದ್ದ. ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿ ಈ ಅತ್ಯಾಧುನಿಕ ಸ್ಟುಡಿಯೊ ನಿರ್ಮಾಣ ಮಾಡಿದ್ದ ಎಂದು ನೆರೆಯವರು ಹೇಳಿದ್ದಾರೆ. ಆದರೆ ಯೂಟ್ಯೂಬ್ ನಲ್ಲಿ ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಸಂಪಾದಿಸುವಲ್ಲಿ ವಿಫಲನಾಗಿ ತೀವ್ರ ಖಿನ್ನತೆಯಿಂದ ಈ ಕೃತ್ಯ ಎಸಗಿದ್ದಾಗಿ ಪೊಲೀಸರು ವಿವರಿಸಿದ್ದಾರೆ.
ಗ್ರಾಮದ ಮಾಜಿ ಮುಖ್ಯಸ್ಥ ಮತ್ತು ನೆರೆಮನೆಯ ಪ್ರಕಾಶ್ ಕುಮಾರ್ ಅರುಣ್ ಅವರ ಪ್ರಕಾರ, ಕಳೆದ ವಾರದಿಂದ ಪ್ರಜಾಪತಿ ತೀವ್ರ ಖಿನ್ನನಾಗಿದ್ದ. ಶನಿವಾರ ರಾತ್ರಿ 10.00 ಗಂಟೆಯ ವೇಳೆಗೆ ಸ್ಟುಡಿಯೊಗೆ ಒಳಗಿನಿಂದ ಬೀಗ ಹಾಕಿಕೊಂಡು ಬೆಂಕಿ ಹಚ್ಚಿದ. ಮನೆಯಲ್ಲಿ ಹೊಗೆ ತುಂಬಿಕೊಂಡಾಗ ಮನೆಯವರಿಗೆ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಕ್ಕಿಹಾಕಿಕೊಂಡಿರುವುದು ಗೊತ್ತಾಯಿತು. ಅವರ ಚೀರಾಟ ಕೇಳಿ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಧಾವಿಸಿದ ಪೊಲೀಸರು ಬಾಗಿಲು ಮುರಿದು ಕುಟುಂಬದ ಎಲ್ಲರನ್ನೂ ಸುರಕ್ಷಿತವಾಗಿ ಹೊರತಂದರು.
ಕುಟುಂಬ ಸದಸ್ಯರು ಸುರಕ್ಷಿತವಾಗಿದ್ದು, ದುಬಾರಿ ಕಂಪ್ಯೂಟರ್, ಕ್ಯಾಮೆರಾ, ಸೌಂಡ್ ಸಿಸ್ಟಮ್ ಮತ್ತು ಲೈಟಿಂಗ್ ಪರಿಕರಗಳು ಭಸ್ಮವಾಗಿವೆ.

