ನ್ಯೂಯಾರ್ಕ್: ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್ ಜೊತೆ ತಾವು ಸಂಬಂಧ ಹೊಂದಿದ್ದರ ಕುರಿತಂತೆ ಮೈಕ್ರೊ ಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ತಮ್ಮ ಒಡೆತನದ ಗೇಟ್ಸ್ ಫೌಂಡೇಷನ್ ಸಿಬ್ಬಂದಿಯ ಕ್ಷಮೆ ಕೋರಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
'ಎಪ್‌ಸ್ಟೈನ್ ಜೊತೆ ಸಂಬಂಧ ಹೊಂದಿದ್ದರೂ ನಾನು ಯಾವುದೇ ಅಕ್ರಮ ಎಸಗಿಲ್ಲ ಎಂಬುದಾಗಿಯೂ ಗೇಟ್ಸ್ ಹೇಳಿದ್ದಾರೆ' ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
'ನನಗೆ ರಷ್ಯಾದ ಇಬ್ಬರು ಮಹಿಳೆಯರೊಂದಿಗೆ ಸ್ನೇಹಸಂಬಂಧ ಇತ್ತು. ಇದನ್ನು ಎಪ್‌ಸ್ಟೈನ್ ಪತ್ತೆ ಮಾಡಿದ್ದ. ಈ ವಿಚಾರ ಗೇಟ್ಸ್ ಫೌಂಡೇಷನ್‌ನ ಕಾರ್ಯದ ಮೇಲೆ ಪರಿಣಾಮ ಬೀರಿತ್ತು. ಆದರೆ, ಎಪ್‌ಸ್ಟೈನ್ ಮಾಡಿದ್ದ ಅಪರಾಧಗಳಲ್ಲಿ ನಾನು ಭಾಗಿಯಾಗಿರಲಿಲ್ಲ' ಎಂದು ಗೇಟ್ಸ್ ಅವರು ನಿಯತಕಾಲಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
'ಎಪ್‌ಸ್ಟೈನ್ ಜೊತೆ ಕಾಲಕಳೆದದ್ದು ಹಾಗೂ ಆತನೊಂದಿಗೆ ಫೌಂಡೇಷನ್ ಸಿಬ್ಬಂದಿಯ ಸಭೆ ನಡೆಸಿದ್ದು ನಾನು ಮಾಡಿದ ದೊಡ್ಡ ತಪ್ಪು' ಎಂದೂ ಅವರು ಹೇಳಿದ್ದಾರೆ.

