ಅವರು ಆರೋಗ್ಯಕರವಾಗಿದ್ದು, ಯಾವುದೇ ಕಳವಳ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸೋನಂ ವಾಂಗ್ಚುಕ್ ಅವರ ಬಂಧನದ ಆದೇಶವನ್ನು ಯಾವ ನೆಲೆಯಲ್ಲಿ ಹೊರಡಿಸಲಾಯಿತು, ಅದು ಈಗಲೂ ಹೇಗೆ ಮುಂದುವರಿದಿದೆ ಹಾಗೂ ಆರೋಗ್ಯದ ನೆಲೆಯಲ್ಲಿ ಅವರನ್ನು ಯಾಕೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾ. ಅರವಿಂದ್ ಕುಮಾರ್ ಹಾಗೂ ನ್ಯಾ. ಪಿ.ಬಿ. ವರಾಳೆ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ವಿವರಿಸಿದರು.
"ನಾವು ಅವರ ಆರೋಗ್ಯವನ್ನು ನಿಯಮಿತವಾಗಿ 24 ಬಾರಿ ಪರೀಕ್ಷಿಸಿದ್ದೇವೆ. ಅವರು ಆರೋಗ್ಯಕರವಾಗಿದ್ದಾರೆ. ಅವರಿಗೆ ಸ್ವಲ್ಪ ಜೀರ್ಣ ಸಮಸ್ಯೆ ಇತ್ತು. ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಆತಂಕ ಪಡಬೇಕಾದ ಅಗತ್ಯವಿಲ್ಲ. ಯಾವುದೂ ಕಳವಳಕಾರಿಯಾಗಿಲ್ಲ. ನಾವು ಈ ರೀತಿಯ ವಿನಾಯಿತಿ ನೀಡಲು ಸಾಧ್ಯವಿಲ್ಲ" ಎಂದು ಅವರು ವಾದಿಸಿದರು.
"ಯಾವ ನೆಲೆಯಲ್ಲಿ ಬಂಧನದ ಆದೇಶ ಹೊರಡಿಸಲಾಯಿತು, ಅದು ಮುಂದುವರಿಯಲಿದೆ. ಅವರನ್ನು ಆರೋಗ್ಯದ ನೆಲೆಯಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಅದು ಅಪೇಕ್ಷಣೀಯವೂ ಅಲ್ಲ. ನಾವು ತೀವ್ರ ಕಾಳಜಿ ವಹಿಸಿದ್ದೇವೆ" ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಯಂಗ್ಮೊ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

