ಕಾಸರಗೋಡು: ನಗರಸಭೆಯ 2026- 27ನೇ ವಾರ್ಷಿಕ ಯೋಜನೆ ರಚನೆಗಾಗಿ 9ನೇ ವಾರ್ಡ್ ನುಳ್ಳಿಪಾಡಿ ವಾರ್ಡ್ ಸದಸ್ಯರ ಸಭೆಯು ಕಾಸರಗೋಡು ಕನ್ನಡ ಗ್ರಾಮದಲ್ಲಿ ಜರುಗಿತು. ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಉದ್ಘಾಟಿಸಿ ಮಾತನಾಡಿ, ಕಾಸರಗೋಡು ನಗರ ಸಭೆಯನ್ನು ಜನರ ಸಹಕಾರದಿಂದ ರಾಜ್ಯದಲ್ಲಿ ಅತ್ಯುತ್ತಮ ನಗರಸಭೆಯನ್ನಾಗಿ ರಚಿಸಲು ಶ್ರಮ ವಹಿಸುವುದಾಗಿ ತಿಳಿಸಿದರು.
ನಗರಸಭೆಯ 9ನೇ ವಾರ್ಡ್ ಕೌನ್ಸಿಲರ್ ಶಾರದಾ ದಯಾನಂದ ಜೆ.ಪಿ ನಗರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆಯ ಆರೋಗ್ಯ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷೆ ಮೆಹರುನ್ನೀಸಾ ಹಮೀದ್ ಅವರು 2026- 27ನೇ ವಾರ್ಷಿಕ ಯೋಜನೆಯಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿದರು.
ನಗರಸಭೆಯ ಮಾಜಿ ಕೌನ್ಸಿಲರ್ ಶಂಕರ ಜೆ.ಪಿ ನಗರ ಹಾಗೂ ಕಾಸರಗೋಡು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು. ಶಿವರಾಮ ಕಾಸರಗೋಡು ಅವರು ಕನ್ನಡ ಗ್ರಾಮದಲ್ಲಿ ಕಾಸರಗೋಡು ಗೋ- ಕುಟೀರ ನಿರ್ಮಾಣವಾಗುತ್ತಿದ್ದು , ಗೋ- ಕುಟೀರದ ಆವರಣದಲ್ಲಿ ಸಾವಯವ ಕೃಷಿ, ಗ್ರಾಮೀಣ ಸ್ವಉದ್ಯೋಗ ಕೇಂದ್ರ, ವಿದ್ಯಾರ್ಥಿಗಳು ,ಯುವಜನರು, ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರ,ವಸ್ತ್ರ ವಿನ್ಯಾಸ, ಕಂಪ್ಯೂಟರ್ ಡಿಜಿಟಲ್ ಮಾಧ್ಯಮ ಕೇಂದ್ರ, ಗ್ರಂಥಾಲಯ, ಹಿರಿಯ ನಾಗರಿಕರಿಗಾಗಿ ಗ್ರಾಮೀಣ ಕ್ಲಿನಿಕ್ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು.
ವಾರ್ಡ್ ಸಭೆಯಲ್ಲಿ ನಗರಸಭೆಯ ಆರೋಗ್ಯ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷೆ ಮೆಹರುನ್ನೀಸ ಹಮೀದ್ ಅವರು ನಗರ ಸಭೆಯ 2025- 26 ನೇ ವಾರ್ಷಿಕ ಯೋಜನೆ ಅವಲೋಕನ, 2026- 27ನೇ ವಾರ್ಷಿಕ ಯೋಜನೆ ರಚನೆ, 2026- 27ನೇ ವರ್ಷದ ಅಯ್ಯಂಗಾಳಿ ನಗರ ಉದ್ಯೋಗ ಖಾತ್ರಿ ಆಕ್ಷನ್ ಪ್ಲಾನ್ ಅಂಗೀಕಾರ, ಅಯ್ಯಂಗಾಳಿ ನಗರ ಉದ್ಯೋಗ ಖಾತ್ರಿ ಮಾನಿಟರಿಂಗ್ ಸಮಿತಿ ಸದಸ್ಯರ ಆಯ್ಕೆ, ಅಯ್ಯಂಗಾಳಿ ಉದ್ಯೋಗ ಖಾತ್ರಿ ಸೋಶಿಯಲ್ ಆಡಿಟ್ ಟೀಂ ಸದಸ್ಯರ ಆಯ್ಕೆ ಪ್ರಕ್ರಿಯೆಯ ಮಾಹಿತಿ ಸಭೆಯ ಮುಂದಿರಿಸಿದರು. ಸುಚಿತ್ರಾ ಸ್ವಾಗತಿಸಿದರು. ಶಾಂತಾ ವಂದಿಸಿದರು.


