ಇಸ್ಲಾಮಾಬಾದ್: ಪಾಕಿಸ್ತಾನ ಶುಕ್ರವಾರ ಮುಂಜಾನೆ ಕಾಬೂಲ್ ಮತ್ತು ಇತರ ಎರಡು ಅಫ್ಘಾನಿಸ್ತಾನದ ಪ್ರಾಂತ್ಯಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಪಾಕಿಸ್ತಾನದ ರಕ್ಷಣಾ ಸಚಿವರು ಅಫ್ಘಾನಿಸ್ತಾನದೊಂದಿಗೆ 'ಮುಕ್ತ ಯುದ್ಧ' ವನ್ನು ಆರಂಭಿಸಿರುವುದಾಗಿ ಹೇಳಿದ್ದಾರೆ.
ಪಾಕಿಸ್ತಾನ ಈ ಮೊದಲು ಮಾಡಿದ್ದ ವಾಯುದಾಳಿಗೆ ಪ್ರತಿಕ್ರಿಯೆಯಾಗಿ ಅಫ್ಘಾನ್ ಪಡೆಗಳು ಪಾಕಿಸ್ತಾನದ ಗಡಿಯಲ್ಲಿ ದಾಳಿ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.
ಅಫ್ಘಾನ್ ದಾಳಿಗೆ ಪ್ರತಿಯಾಗಿ ಆಪರೇಷನ್ 'ಘಜಾಬ್ ಲಿಲ್ ಹಕ್' ಆರಂಭಿಸಿರುವುದಾಗಿ ಪಾಕಿಸ್ತಾನದ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ "ಮುಕ್ತ ಯುದ್ಧ" ಆರಂಭವಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಚಿವ ಖವಾಜಾ ಆಸಿಫ್, ಅಫ್ಘಾನಿಸ್ತಾನದ ತಾಲಿಬಾನ್ ಸರಕಾರ ಭಯೋತ್ಪಾದಕರನ್ನು ಒಟ್ಟುಗೂಡಿಸುತ್ತಿದೆ ಮತ್ತು ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂದು ಆರೋಪಿಸಿದರು. ಅಫ್ಘಾನಿಸ್ತಾನದವರನ್ನು ವಿಶೇಷವಾಗಿ ಮಹಿಳೆಯರನ್ನು ಮಾನವ ಹಕ್ಕುಗಳಿಂದ ವಂಚಿತಗೊಳಿಸುತ್ತಿದ್ದಾರೆ ಮತ್ತು ಭಾರತದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
"ಈಗ ನಮ್ಮ ಮತ್ತು ನಿಮ್ಮ ನಡುವೆ ಮುಕ್ತ ಯುದ್ಧ ಆರಂಭವಾಗಿದೆ. ಪಾಕಿಸ್ತಾನದ ಸೈನ್ಯವು ಸಮುದ್ರದಾಚೆಯಿಂದ ಬಂದಿಲ್ಲ. ನಾವು ನಿಮ್ಮ ನೆರೆಹೊರೆಯವರು, ನಿಮ್ಮ ಒಳ ಮತ್ತು ಹೊರಗನ್ನು ನಾವು ತಿಳಿದಿದ್ದೇವೆ" ಎಂದು ಖವಾಜಾ ಆಸಿಫ್ ಹೇಳಿದ್ದಾರೆ.

