ಲಂಡನ್: ಮೇ ತಿಂಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ, ಇಂಗ್ಲೆಂಡ್ ನಲ್ಲಿ 1,000ಕ್ಕೂ ಅಧಿಕ ಕೌನ್ಸಿಲರ್ಗಳು ಫೆಲೆಸ್ತೀನೀಯರಿಗೆ ಬೆಂಬಲ ಸೂಚಿಸುವ ಪ್ರತಿಜ್ಞೆಗೆ ಸಹಿ ಹಾಕಿದ್ದಾರೆ.
'ಕೌನ್ಸಿಲರ್ ಪ್ಲೆಜ್ ಫಾರ್ ಫೆಲೆಸ್ತೀನ್' ಎಂಬ ಅಭಿಯಾನವನ್ನು ಫೆಲೆಸ್ತೀನ್ ಸಾಲಿಡಾರಿಟಿ ಕ್ಯಾಂಪೇನ್ ಡಿಸೆಂಬರ್ ನಲ್ಲಿ ಆರಂಭಿಸಿದೆ.
ಅದು ಫೆಲೆಸ್ತೀನೀಯರ ಹಕ್ಕುಗಳನ್ನು ಎತ್ತಿಹಿಡಿಯಲು, ಜನಾಂಗೀಯ ಹತ್ಯೆ ಮತ್ತು ವರ್ಣಭೇದದಲ್ಲಿ ತೊಡಗಿರುವ ಇಸ್ರೇಲ್ ಅನ್ನು ಎದುರಿಸಲು ಹಾಗೂ ತಮ್ಮ ಮುನಿಸಿಪಾಲಿಟಿಗಳು ಇದರಲ್ಲಿ ಶಾಮೀಲಾಗದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜಕಾರಣಿಗಳನ್ನು ಒತ್ತಾಯಿಸುತ್ತದೆ.
ಈ ಪ್ರತಿಜ್ಞೆಗೆ 1,152 ಹಾಲಿ ಕೌನ್ಸಿಲರ್ಗಳು ಸಹಿ ಹಾಕಿದ್ದಾರೆ. ಈ ಪೈಕಿ 387 ಕೌನ್ಸಿಲರ್ಗಳು ಗ್ರೀನ್ ಪಾರ್ಟಿಯವರು, 375 ಆಡಳಿತಾರೂಢ ಲೇಬರ್ ಪಾರ್ಟಿಯವರು ಮತ್ತು 115 ಲಿಬರಲ್ ಡೆಮಾಕ್ರಟ್ ಗಳು ಎಂದು ಕ್ಯಾಂಪೇನ್ ತಿಳಿಸಿದೆ.
ಕನ್ಸರ್ವೇಟಿವ್ ಪಕ್ಷದ ಐವರು ಕೌನ್ಸಿಲರ್ಗಳೂ ಪ್ರತಿಜ್ಞೆಗೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ. ಜೊತೆಗೆ, ಸ್ಕಾಟಿಶ್ ನ್ಯಾಶನಲ್ ಪಾರ್ಟಿ, ಪ್ಲೇಡ್ ಸೈಮ್ರು, ದ ಸ್ಕಾಟಿಶ್ ಗ್ರೀನ್ಸ್ ಹಾಗೂ ಸ್ಥಳೀಯ ಪಕ್ಷಗಳ ನೂರಾರು ಕೌನ್ಸಿಲರ್ಗಳು ಸಹಿ ಹಾಕಿದ್ದಾರೆ.
ಕಡು ಬಲಪಂಥೀಯ ರಿಫಾರ್ಮ್ ಯುಕೆ ಪಕ್ಷದ ಯಾವುದೇ ಕೌನ್ಸಿಲರ್ ಸಹಿ ಹಾಕಿಲ್ಲ.

