ಕಾಸರಗೋಡು: ರಾಜ್ಯ ಎಸ್‍ಸಿ-ಎಸ್‍ಟಿ ಅಭಿವೃದ್ಧಿ ನಿಗಮ ನೀಡುವ ಸಣ್ಣ ಮತ್ತು ದೊಡ್ಡ ಸಾಲಗಳ ಲಾಭವನ್ನು ಪಡೆದುಕೊಂಡು ಸ್ವ ಉದ್ಯೋಗಿಗಳಾಗುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಓ.ಆರ್. ಕೇಳು ತಿಳಿಸಿದ್ದಾರೆ.
ಅವರು ಕಾಸರಗೋಡಿನಲ್ಲಿ ಹೊಸದಾಗಿ ನಿರ್ಮಿಸಲಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿಗಮದ ಉಪಜಿಲ್ಲಾ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಕೆಎಸ್‍ಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಪ್ರತ್ಯೇಕವಾಗಿ ಕಾರ್ಯಾಚರಿಸುವ ಸಂಸ್ಥೆಯಾಗಿದೆ. ಇದು ಈ ಗುಂಪುಗಳಿಗೆ ಯಾವುದೇ ಭದ್ರತೆಗಳಿಲ್ಲದೆ ಸಾಲ ಒದಗಿಸುತ್ತಿದ್ದು, ಈ ಸಾಲ ವ್ಯವಸ್ಥೆಯ ಮೂಲಕ ಆದಾಯ ಗಳಿಸುವುದರ ಜತೆಗೆ ಉದ್ಯಮಗಳಿಗೆ ಬಂಡವಾಳವಾಗಿಯೂ ಪರಿವರ್ತಿಸಬಹುದು. ಭೂಮಿ ಖರೀದಿ, ಮನೆ ದುರಸ್ತಿ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ನಿಗಮವು ಅನೇಕ ಸಾಲಸೌಲಭ್ಯ ಒದಗಿಸುತ್ತದೆ. ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಜನತೆ ಅರಿತಿರಬೇಕು ಎಂದು ತಿಳಿಸಿದರು
ಕಾಸರಗೋಡು ನಗರಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ವಿವಿಧ ರೀತಿಯ ಸಾಲಗಳನ್ನು ವಿತರಿಸಿದರು. ಬಹುಪಯೋಗಿ ಸಣ್ಣ ವ್ಯಾಪಾರ ಸಾಲಗಳು, ಸಮೃದ್ಧಿ ಕೇರಳ ಸಾಲಗಳು, ಸ್ವ-ಉದ್ಯೋಗ, ವಿವಾಹ ಸಾಲಗಳು, ವೈಯಕ್ತಿಕ ಸಾಲಗಳು ಇತ್ಯಾದಿಗಳನ್ನು ಒಳಗೊಂಡಂತೆ ತ್ರಿಕರಿಪುರ ಮತ್ತು ಕಾರಡ್ಕ ಸಿಡಿಎಸ್‍ಗಳಿಗೆ ಒದಗಿಸಲಾದ ಒಟ್ಟು 15324600 ರೂ.ಗಳ ಸಾಲದ ಮೊತ್ತ ವಿತರಿಸಲಾಯಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎಚ್ ಕುಞಂಬು, ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಜಿಲ್ಲಾ ಪಂಚಾಯಿತಿ ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೃಷ್ಣನ್ ಒಕ್ಲಾವ್, ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಉಷಾ ಅರ್ಜುನ್, ಚೆಂಗಳ ಗ್ರಾಪಂ ಅಧ್ಯಕ್ಷ ವಸಂತ ಅಜಕೋಡ್ ಮತ್ತು ಬದಿಯಡ್ಕ ಗ್ರಾಪಂ ಅಧ್ಯಕ್ಷ ಡಿ.ಶಂಕರ, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಓ.ಪಿ.ರಾಧಾಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.


