ಫರಿದಾಬಾದ್: ವಾರಕ್ಕೊಮ್ಮೆ ಮನೆಗೆ ಫೋನ್ ಕರೆ ಮಾಡಲು ನೀಡಲಾಗುತ್ತಿದ್ದ ಅವಕಾಶವನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಇಲ್ಲಿನ ನೀಮ್ಕಾ ಕೇಂದ್ರ ಕಾರಾಗೃಹದಲ್ಲಿ 40ಕ್ಕೂ ಹೆಚ್ಚು ಕೈದಿಗಳು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಭಟನಾ ನಿರತರಿಗೆ ಜೈಲು ಅಧಿಕಾರಿಗಳು ನಿಂದಿಸುತ್ತಿದ್ದಾರೆ ಹಾಗೂ ಶಿಕ್ಷೆಯ ಬೆದರಿಕೆ ಹಾಕುತ್ತಿದ್ದಾರೆ ಎಂದು ಕೈದಿಗಳು ಆರೋಪಿಸಿದ್ದಾರೆ.
ಶನಿವಾರ ಆನ್‌ಲೈನ್‌ನಲ್ಲಿ ಹರಿದಾಡಿದ ಟಿಪ್ಪಣಿಯೊಂದರಲ್ಲಿ ಕೈದಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹಿಂದೆ ವಾರಕ್ಕೆ ಮೂರು ದಿನ ಮನೆಗೆ ಫೋನ್ ಕರೆ ಮಾಡಲು ಅವಕಾಶವಿದ್ದರೆ, ಅದನ್ನು ಇತ್ತೀಚೆಗೆ ಎರಡು ದಿನಗಳಿಗೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ. ಬದಲಾವಣೆಯ ಕಾರಣ ವಿಚಾರಿಸಲು ಮುಂದಾದ ಕೆಲ ಕೈದಿಗಳೊಂದಿಗೆ ಅಧಿಕಾರಿಗಳು ಕಟ್ಟದಾಗಿ ವರ್ತನೆ ತೋರಿದ್ದಾರೆ ಎಂಬ ದೂರು ಟಿಪ್ಪಣಿಯಲ್ಲಿ ಉಲ್ಲೇಖವಾಗಿದೆ.
ಜೈಲು ಆಡಳಿತದ ವಿರುದ್ಧ ಧ್ವನಿ ಎತ್ತಿದರೆ ಹೊರಗೆ ಬಿಡುವುದಿಲ್ಲ ಹಾಗೂ ಬ್ಯಾರಕ್‌ಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಕೈದಿಗಳು ಆರೋಪಿಸಿದ್ದಾರೆ. "ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ ಜೀವ ಬೆದರಿಕೆ ಹಾಕಲಾಗಿದೆ. ನಮಗೆ ಏನಾದರೂ ಅನಾಹುತವಾದರೆ ಜೈಲು ಆಡಳಿತವೇ ಹೊಣೆ. ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿದ ನಂತರ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ" ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.

