ನವದೆಹಲಿ: ಭಾರತ-ಅಮೆರಿಕ ವ್ಯಾಪರ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿ ಅವರು, ಇದೀಗ ಮತ್ತೊಮ್ಮೆ ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಲು ಸಾಲು ಪ್ರಶ್ನೆ ಕೇಳಿರುವ ಅವರು, ಭಾರತೀಯ ರೈತರಿಗೆ ದ್ರೋಹ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, 'ಅಮೆರಿಕದ ಜೊತೆ ವ್ಯಾಪಾರ ಒಪ್ಪಂದದ ಹೆಸರಿನಲ್ಲಿ ಭಾರತೀಯ ರೈತರಿಗೆ ದ್ರೋಹ ಬಗೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
'ಡ್ರೈ ಡಿಸ್ಟಿಲರ್ಸ್ ಧಾನ್ಯಗಳನ್ನು (DDG) ಆಮದು ಮಾಡಿಕೊಳ್ಳುವುದರ ಅರ್ಥವೇನು? ಭಾರತೀಯ ಜಾನುವಾರುಗಳಿಗೆ ಅಮೆರಿಕದ ಮೆಕ್ಕೆಜೋಳದಿಂದ ತಯಾರಿಸಿದ ಡಿಸ್ಟಿಲರ್‌ಗಳ ಧಾನ್ಯಗಳನ್ನು ನೀಡಲಾಗುತ್ತದೆಯೇ? ಹೀಗೆ ಮಾಡುವುದರಿಂದ ನಮ್ಮ ಹಾಲಿನ ಉತ್ಪನ್ನಗಳು ಅಮೆರಿಕದ ಕೃಷಿ ಉದ್ಯಮದ ಮೇಲೆ ಅವಲಂಬಿತವಾಗುವಂತೆ ಮಾಡುವುದಿಲ್ಲವೇ?' ಎಂದು ಪ್ರಶ್ನಿಸಿದ್ದಾರೆ.
ಭಾರತವು ಅಮೆರಿಕದಿಂದ ಸೋಯಾ ಎಣ್ಣೆಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದರೆ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ದೇಶದಾದ್ಯಂತದ ಸೋಯಾ ಬೆಳೆಯುವ ರೈತರ ಮೇಲೆ ನೇರ ಪರಿಣಾಮ ಬೀರಲಿದೆ. ಮಾತ್ರವಲ್ಲ, ತೀವ್ರ ಬೆಲೆ ನಷ್ಟ ಉಂಟಾಗಲಿದೆ. ಇದನ್ನು ಭಾರತದ ರೈತರು ಹೇಗೆ ತಡೆದುಕೊಳ್ಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಹೆಚ್ಚುವರಿ ಪದಾರ್ಥಗಳು ಎಂದರೆ ಏನು? ಅದು ಏನನ್ನು ಒಳಗೊಂಡಿದೆ? ಇದರಿಂದ ಮುಂದಿನ ದಿನಗಳಲ್ಲಿ ಅಮೆರಿಕದ ದ್ವಿದಳ ಧಾನ್ಯಗಳು ಹಾಗೂ ಇತರೆ ಬೆಳಗಳ ಆಮದಿಗೆ ಅಡಿಪಾಯ ಹಾಕುವುದಿಲ್ಲವೇ? ಎಂದು ಕೇಳಿದ್ದಾರೆ.
'ವ್ಯಾಪಾರೇತರ ಅಡೆತಡೆಗಳನ್ನು ತೆಗೆದುಹಾಕುವುದರ ಅರ್ಥವೇನು? ಮುಂದಿನ ದಿನಗಳಲ್ಲಿ ಮಾರ್ಪಡಿಸಿದ ತಳಿಗಳ (Genetically modified) ಮೇಲಿನ ತಮ್ಮ ನಿಲುವನ್ನು ಸಡಿಲಗೊಳಿಸಿ, ಸಂಗ್ರಹಣೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಮತ್ತು ಬೋನಸ್ ಅನ್ನು ಕಡಿಮೆ ಮಾಡಲು ಭಾರತದ ರೈತರ ಮೇಲೆ ಒತ್ತಡ ಹೇರಲಾಗುವುದಿಲ್ಲವೇ? ಎಂದು ಅವರು ಕೇಳಿದರು.
ಅಮೆರಿಕ ಹಾಗೂ ಭಾರತ ನಡುವಿನ ಈ ವ್ಯಾಪಾರ ಒಮ್ಮೆ ಆರಂಭವಾದರೆ, ಇದು ಪ್ರತೀ ವರ್ಷವೂ ದೊಡ್ಡದಾಗುತ್ತದೆ. ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
'ಉಭಯ ದೇಶಗಳ ನಡುವೆ ಈ ವ್ಯಾಪಾರ ಒಪ್ಪಂದ ಆರಂಭವಾದೆ, ಮುಂದಿನ ದಿನಗಳಲ್ಲಿ ಇದನ್ನು ತಡೆಯಲು ಸಾಧ್ಯವಾಗುತ್ತದೆಯೇ? ಇದು ವರ್ಷದಿಂದ ವರ್ಷಕ್ಕೆ ಹಚ್ಚಾಗುತ್ತಾ ಹೋಗುತ್ತದೆ. ಈ ಬಗ್ಗೆ ರೈತರು ಸ್ಪಷ್ಟತೆ ಪಡೆಯಬೇಕು' ಎಂದು ಹೇಳಿದರು.
ಇದು ಕೇವಲ ಇಂದಿನ ಸಮಸ್ಯೆಯಲ್ಲ, ಭವಿಷ್ಯದ ದೃಷ್ಟಿಯಿಂದ ಗಂಭೀರವಾಗಿ ಯೋಚಿಸಬೇಕಾಗಿದೆ. ಭಾರತದ ಕೃಷಿ ಉದ್ಯಮದ ಮೇಲೆ ದೀರ್ಘಕಾಲದ ಹಿಡಿತ ಸಾಧಿಸಲು ಇನ್ನೊಂದು ದೇಶಕ್ಕೆ ಅವಕಾಶ ನೀಡುತ್ತಿದ್ದೇವೆಯೇ? ಎಂದು ಪ್ರಶ್ನಿಸಿದ್ದಾರೆ.

