ನವದೆಹಲಿ: 'ವೈಟ್ ಕಾಲರ್' ಭಯೋತ್ಪಾದನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವೈದ್ಯರು, ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದಾದ್ಯಂತ ಉಗ್ರ ಕೃತ್ಯಗಳನ್ನು ಸಂಘಟಿಸಲು ಹೊಸ ಗುಂಪು ರಚಿಸಿಕೊಂಡಿದ್ದರು ಎಂಬುದು ತಿಳಿದು ಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ 'ವೈಟ್ ಕಾಲರ್' ಭಯೋತ್ಪಾದನೆ ಜಾಲವನ್ನು ಅಲ್ಲಿನ ಪೊಲೀಸರು ಇತ್ತೀಚೆಗೆ ಭೇದಿಸಿದ್ದರು.
ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ನಬಿ ಎಂಬಾತ 2025ರ ನವೆಂಬರ್ 10ರಂದು ಚಲಾಯಿಸುತ್ತಿದ್ದ ಹುಂಡೈ ಐ20 ಕಾರು, ಕೆಂಪು ಕೋಟೆ ಬಳಿ ಸ್ಫೋಟಗೊಂಡು 15 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ಈ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೈಗೆತ್ತಿಕೊಂಡಿದೆ.
ದೆಹಲಿ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಏಳು ಆರೋಪಿಗಳಾದ ಅಮಿರ್ ರಶೀದ್ ಮಿರ್, ಜಸೀರ್ ಬಿಲಾಲ್ ವಾನಿ, ಮೌಲ್ವಿ ಇರ್ಫಾನ್ ಅಹ್ಮದ್ ವಾಘೇ, ಡಾ. ಮುಝಾಮಿಲ್ ಶಕೀಲ್ ಘನೀ, ಡಾ. ಆದೀಲ್ ಅಹ್ಮದ್ ರಾಥಾರ್, ಡಾ. ಶಾಹೀನ್ ಸಯೀದ್ ಮತ್ತು ಸೋಯಬ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನೂ ಮಾರ್ಚ್ 13ರ ವರೆಗೆ ವಿಸ್ತರಿಸಲಾಗಿದೆ. ಪ್ರಕರಣದ ತನಿಖೆ ಪೂರ್ಣಗೊಳಿಸಲು ಎನ್‌ಐಎಗೆ ದೆಹಲಿ ನ್ಯಾಯಾಲಯವು 45 ದಿನಗಳ ಕಾಲಾವಕಾಶ ನೀಡಿದೆ.
ನವೆಂಬರ್ 10ರಂದು ಸ್ಫೋಟಗೊಂಡ ಕಾರನ್ನು ಚಾಲನೆ ಮಾಡುತ್ತಿದ್ದ ಡಾ. ಉಮರ್ ಉನ್ ನಬಿ, ಭಯೋತ್ಪಾದಕ ಸಂಘಟನೆಗಳನ್ನು ಸೇರಲು 2016 ಹಾಗೂ 2018ರಲ್ಲಿ ಪ್ರಯತ್ನ ನಡೆಸಿದ್ದ ಎಂಬುದು ಬೆಳಕಿಗೆ ಬಂದಿರುವುದಾಗಿ ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಈವರೆಗೆ ಲಭ್ಯವಾಗಿರುವ ಎಲ್ಲ ಸಾಕ್ಷ್ಯಗಳನ್ನು ಒಟ್ಟುಗೂಡಿಸಿರುವ ಅಧಿಕಾರಿಗಳು, ಆರೋಪಿಗಳಾದ ಡಾ. ಮುಝಾಮಿಲ್ ಶಕೀಲ್ ಘನೀ ಮತ್ತು ಡಾ. ಉಮರ್ ನಬಿ (ಮೃತ) ಹಾಗೂ ಡಾ. ಆದೀಲ್ ಅಹ್ಮದ್ ರಾಥಾರ್, ಪರಾರಿಯಾಗಿರುವ ಅವನ ಸಹೋದರ ಮುಝಾಫರ್ ರಾಥಾರ್ ಹಾಗೂ ಮೌಲ್ವಿ ಇರ್ಫಾನ್, ಖಾರಿ ಆಮಿರ್ ಮತ್ತು ತುಫೈಲ್ ಘಾಜಿ ಶ್ರೀನಗರದ ಡೌನ್‌ಟೌನ್‌ನಲ್ಲಿರುವ ಈದ್ಗಾದಲ್ಲಿ 2022ರ ಏಪ್ರಿಲ್‌ನಲ್ಲಿ ಭೇಟಿಯಾಗಿ ಸಭೆ ನಡೆಸಿದ್ದರು. ಆ ವೇಳೆ, 'ಅನ್ಸಾರ್ ಇಂಟರ್ಮ್' ಹೆಸರಿನ ಸಂಘಟನೆ ಸ್ಥಾಪಿಸಲು ತೀರ್ಮಾನಿಸಿದ್ದರು. ಸಂಘಟನೆಗೆ ಆದೀಲ್‌ನನ್ನು ಅಮೀರನನ್ನಾಗಿ (ಮುಖ್ಯಸ್ಥನನ್ನಾಗಿ), ಮೌಲ್ವಿಯನ್ನು ಉಪ ನಾಯಕನನ್ನಾಗಿ ಮತ್ತು ಮುಝಾಮಿಲ್‌ನನ್ನು ಖಜಾಂಚಿಯನ್ನಾಗಿ ನೇಮಿಸಲು ಮಾತುಕತೆಯಾಗಿತ್ತು. ಇದು (ಅನ್ಸಾರ್ ಇಂಟರ್ಮ್), ಜಾಗತಿಕ ನಿಷೇದಿತ ಸಂಘಟನೆ ಅಲ್-ಖೈದಾದೊಂದಿಗೆ ನಂಟು ಹೊಂದಿದೆ ಎಂದೂ ಮಾಹಿತಿ ನೀಡಿದ್ದಾರೆ.
ಕೆಂಪುಕೋಟೆ ಪ್ರಕರಣದ ಬಂಧಿತ ವೈದ್ಯರು ಹಾಗೂ ಧರ್ಮ ಪ್ರಚಾರಕರು, ಸಕ್ರಿಯ ಉಗ್ರರೊಂದಿಗೆ ಸಂಪರ್ಕ ಕಳೆದುಕೊಂಡ ಕಾರಣ ಹೊಸ ಗುಂಪು ರಚಿಸುವುದು ಅಗತ್ಯವಾಗಿತ್ತು. ಅದರಂತೆ, ಸಭೆಯ ಸಂದರ್ಭದಲ್ಲಿ ಸದಸ್ಯರಿಗೆ ಪಾತ್ರಗಳನ್ನೂ ನಿಯೋಜಿಸಲಾಗಿತ್ತು ಎಂದು ತನಿಖಾಧಿಕಾರಿಗಳೆದುರು ಒಪ್ಪಿಕೊಂಡಿದ್ದಾರೆ.

