ನವದೆಹಲಿ: ಪೊಲೀಸರು ಅಥವಾ ತನಿಖಾ ಸಂಸ್ಥೆಯು ಸಂಬಂಧಪಟ್ಟ ನ್ಯಾಯಾಲಯದ ಅನುಮತಿ ಪಡೆಯದೆ ಕ್ರಿಮಿನಲ್ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಯಾವುದೇ ನಿರ್ದಿಷ್ಟ ಪ್ರಕರಣದ ಸಂಪೂರ್ಣ ಸತ್ಯವನ್ನು ಹೊರಹಾಕಲು ಹೆಚ್ಚಿನ ತನಿಖೆ ಅಗತ್ಯ ಎಂದು ಪೊಲೀಸರು ಅಥವಾ ತನಿಖಾ ಸಂಸ್ಥೆ ಅಭಿಪ್ರಾಯಪಟ್ಟರೆ, ಆ ಸಂಬಂಧ ಸ್ವತಃ ಆದೇಶ ನೀಡದೆ, ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಾಲಯಕ್ಕೆ ಸೂಕ್ತ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಲ್ ಮತ್ತು ವಿಜಯ್ ಬಿಷ್ಣೋಯಿ ಅವರ ಪೀಠ ಹೇಳಿದೆ.
'ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ನಿರ್ದೇಶಿಸುವ ಅಧಿಕಾರವು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್/ನ್ಯಾಯಾಲಯಕ್ಕೆ ಮಾತ್ರ ಇದೆ. ಈ ಸಂಬಂಧ ಪೊಲೀಸರು ಅಥವಾ ತನಿಖಾ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುವಂತಿಲ್ಲ' ಎಂದಿದೆ.
ಅಲಹಾಬಾದ್ ಹೈಕೋರ್ಟ್ 2023ರ ನವೆಂಬರ್ 20ರಂದು ನೀಡಿದ್ದ ತೀರ್ಪಿನ ವಿರುದ್ದ ಪ್ರಮೋದ್ ಕುಮಾರ್ ಹಾಗೂ ಇತರರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಪೀಠವು ಹೀಗೆ ಹೇಳಿದೆ.
ಸಿಆರ್‌ಪಿಸಿ ಸೆಕ್ಷನ್ 173(2)ರ ಅಡಿಯಲ್ಲಿ (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 193(3)ರ ಅಡಿ) ಅಂತಿಮ ವರದಿ ಸಲ್ಲಿಸಿದ ನಂತರ ಪೊಲೀಸರು ಅಥವಾ ತನಿಖಾಧಿಕಾರಿಗಳು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್/ ನ್ಯಾಯಾಲಯದ ಅನುಮತಿ ಪಡೆಯದೆ ಸಿಆರ್‌ಪಿಸಿಯ ಸೆಕ್ಷನ್ 173(8)ರ ಅಡಿಯಲ್ಲಿ ಹೆಚ್ಚಿನ ತನಿಖೆ ನಡೆಸಬಹುದೇ ಎಂಬುದನ್ನು ಪೀಠವು ಪರಿಶೀಲಿಸಿತು.
ವಿನಯ್ ತ್ಯಾಗಿ ವರ್ಸಸ್ ಇರ್ಷಾದ್ ಅಲಿ (2013) ಪ್ರಕರಣವನ್ನು ಉಲ್ಲೇಖಿಸಿದ ಪೀಠ, ಹೆಚ್ಚಿನ ತನಿಖೆ ನಡೆಸುವ ಮೊದಲು ನ್ಯಾಯಾಲಯದ ಅನುಮತಿಯನ್ನು ಪಡೆಯಲು ಸಿಆರ್‌ಪಿಸಿಯ ಸೆಕ್ಷನ್ 173(8) ಅಡಿಯಲ್ಲಿ ಯಾವುದೇ ಸ್ಪಷ್ಟ ಆದೇಶವಿಲ್ಲ. ಆದರೂ, ನ್ಯಾಯಾಲಯದ ಅನುಮತಿ ಪಡೆಯುವ ಅಭ್ಯಾಸ ರೂಢಿಯಲ್ಲಿದೆ ಎಂದು ಹೇಳಿತು.

