ಜೆರುಸಲೇಂ: ಆಕ್ರಮಿತ ಪಶ್ಚಿಮದಂಡೆಯ ಮೇಲೆ ಇಸ್ರೇಲ್‍ನ ನಿಯಂತ್ರಣವನ್ನು ಪ್ರಬಲಗೊಳಿಸುವ ಸರಣಿ ಕ್ರಮಗಳನ್ನು ಇಸ್ರೇಲ್‍ನ ಕ್ಯಾಬಿನೆಟ್ ಅನುಮೋದಿಸಿದ್ದು ಫೆಲೆಸ್ತೀನಿಯನ್ ಪ್ರದೇಶದಲ್ಲಿ ಮತ್ತಷ್ಟು ವಸಾಹತು ವಿಸ್ತರಣೆಗೆ ದಾರಿ ಮಾಡಿಕೊಟ್ಟಿದೆ.
ಭದ್ರತಾ ಕ್ಯಾಬಿನೆಟ್ ಇವತ್ತು ನಿರ್ಧಾರಗಳ ಸರಣಿಯನ್ನು ಅನುಮೋದಿಸಿದ್ದು ಪಶ್ಚಿಮದಂಡೆಯಲ್ಲಿ ಕಾನೂನು ಮತ್ತು ನಾಗರಿಕ ವಾಸ್ತವತೆಯನ್ನು ಮೂಲಭೂತವಾಗಿ ಬದಲಾಯಿಸುತ್ತದೆ.
ಮತ್ತು ಪಶ್ಚಿಮದಂಡೆಯಲ್ಲಿ ಯಹೂದಿ ನಾಗರಿಕರು ಭೂಮಿಯನ್ನು ಖರೀದಿಸುವುದನ್ನು ತಡೆಯುವ ದಶಕಗಳ ಹಳೆಯ ನಿಯಮವನ್ನು ತೆಗೆದುಹಾಕಿದೆ ಎಂದು ವಿತ್ತ ಸಚಿವ ಬೆಝಲೆಲ್ ಸ್ಮೊಟ್ರಿಚ್ ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಜಂಟಿಯಾಗಿ ಘೋಷಿಸಿದ್ದಾರೆ.
ಈ ಕ್ರಮವು ಇಸ್ರೇಲ್‍ನ ಭೂಮಿಯ ಎಲ್ಲಾ ಪ್ರದೇಶಗಳಲ್ಲೂ ನಮ್ಮ ಬೇರುಗಳನ್ನು ಆಳವಾಗಿಸುವ ಮತ್ತು ಫೆಲೆಸ್ತೀನಿಯನ್ ರಾಷ್ಟ್ರದ ಪರಿಕಲ್ಪನೆಯನ್ನು ಸಮಾಧಿ ಮಾಡುವ ಉದ್ದೇಶವನ್ನು ಹೊಂದಿದೆ . ಪಶ್ಚಿಮದಂಡೆಯು ದೇಶದ ಹೃದಯಭಾಗವಾಗಿದೆ ಮತ್ತು ಅದನ್ನು ಬಲಪಡಿಸುವುದು ಅತ್ಯುನ್ನತ ಭದ್ರತಾ, ರಾಷ್ಟ್ರೀಯ ಮತ್ತು ಯಹೂದಿ ರಾಷ್ಟ್ರೀಯತಾವಾದ ಹಿತಾಸಕ್ತಿಯ ಕ್ರಮವಾಗಿದೆ ಎಂದು ಹೇಳಿಕೆ ಪ್ರತಿಪಾದಿಸಿದೆ.
ಹೆಬ್ರಾನ್ ಸೇರಿದಂತೆ ಫೆಲೆಸ್ತೀನಿಯನ್ ನಗರಗಳ ಕೆಲವು ಭಾಗಗಳಲ್ಲಿ ವಸಾಹತುಗಳಿಗೆ ಕಟ್ಟಡ ಪರವಾನಗಿಗಳ ಮೇಲಿನ ಅಧಿಕಾರವನ್ನು ಫೆಲೆಸ್ತೀನಿಯನ್ ಪ್ರಾಧಿಕಾರದ ಮುನ್ಸಿಪಲ್ ಸಂಸ್ಥೆಗಳಿಂದ ಇಸ್ರೇಲ್‍ಗೆ ವರ್ಗಾಯಿಸುವುದಕ್ಕೆ ಈ ಕ್ರಮಗಳು ಅವಕಾಶ ನೀಡುತ್ತವೆ. ಇದುವರೆಗೆ, ನಗರದ ಯಹೂದಿ ಸಮುದಾಯದವರು ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ಸ್ಥಳೀಯ ಮುನ್ಸಿಪಾಲಿಟಿ ಹಾಗೂ ಇಸ್ರೇಲ್ ಅಧಿಕಾರಿಗಳು ಇಬ್ಬರಿಂದಲೂ ಲೈಸೆನ್ಸ್ ಪಡೆಯಬೇಕಿತ್ತು. ಹೊಸ ಕ್ರಮದಡಿ ಇಸ್ರೇಲ್ ಅಧಿಕಾರಿಗಳಿಂದ ಮಾತ್ರ ಲೈಸೆನ್ಸ್ ಪಡೆದರೆ ಸಾಕು ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ. ಈ ಕ್ರಮಗಳು ಇಸ್ರೇಲಿ ಅಧಿಕಾರಿಗಳಿಗೆ ಕೆಲವು ಧಾರ್ಮಿಕ ಸ್ಥಳಗಳನ್ನು (ಫೆಲೆಸ್ತೀನಿಯನ್ ನಿಯಂತ್ರಣದ ಪ್ರದೇಶದಲ್ಲಿ ಇದ್ದರೂ ಕೂಡಾ) ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
1967ರಿಂದ ಇಸ್ರೇಲ್ ವಶಪಡಿಸಿಕೊಂಡಿರುವ ಪ್ರದೇಶವು ಭವಿಷ್ಯದ ಯಾವುದೇ ಫೆಲೆಸ್ತೀನಿಯನ್ ರಾಷ್ಟ್ರದ ಅತಿದೊಡ್ಡ ಭಾಗವನ್ನು ರೂಪಿಸುತ್ತದೆ. ಆದರೆ ಧಾರ್ಮಿಕ ಹಕ್ಕಿನ ಮೇಲೆ ಇದು ಇಸ್ರೇಲ್‍ನ ಪ್ರದೇಶವೆಂದೂ ಹಲವರು ವಾದಿಸುತ್ತಾರೆ.
ಫೆಲೆಸ್ತೀನಿಯನ್ ಆಡಳಿತದ ಖಂಡನೆ
ಈ ನಿರ್ಧಾರವು ಆಕ್ರಮಿತ ಪಶ್ಚಿಮದಂಡೆಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಗಳನ್ನು ಆಳವಾಗಿಸುವ ಗುರಿಯನ್ನು ಹೊಂದಿದೆ ಎಂದು ರಮಲ್ಲಾದಲ್ಲಿನ ಫೆಲೆಸ್ತೀನಿಯನ್ ಆಡಳಿತ ಖಂಡಿಸಿದೆ.
ಈ ನಿರ್ಧಾರಗಳು ಫೆಲೆಸ್ತೀನಿಯನ್ ಸಾರ್ವಭೌಮತ್ವದ ಅಡಿಯಲ್ಲಿರುವ ಪ್ರದೇಶಗಳಲ್ಲಿಯೂ ಸಹ ವಸಾಹತು ವಿಸ್ತರಣೆ, ಭೂಮಿ ವಶಪಡಿಸಿಕೊಳ್ಳುವಿಕೆ ಮತ್ತು ಫೆಲೆಸ್ತೀನಿಯನ್ ಆಸ್ತಿಗಳನ್ನು ನೆಲಸಮಗೊಳಿಸುವುದನ್ನು ಕಾನೂನುಬದ್ಧಗೊಳಿಸುವ ಇಸ್ರೇಲ್‍ನ ಮುಕ್ತ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

