ಕಾಸರಗೋಡು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ಪಡೆದ ಕೇರಳದ ಆಯ್ದ ನೂರು ಮಂದಿ ಜನಪ್ರತಿನಿಧಿಗಳ ತಂಡದಲ್ಲಿರುವ ಕಾಸರಗೋಡಿನ ಮೂರು ಮಂದಿ ಒಳಗೊಂಡಿದ್ದಾರೆ. ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜ್ಞಾನಿ ಶಾನ್‍ಭಾಗ್, ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಶಂಕರ ಮತ್ತು ಮೀಂಜ ಗ್ರಾಮ ಪಂಚಾಯಿತಿ ಸದಸ್ಯೆ ಆಶಾಲತಾ ಬಿ.ಎಂ. ಅವರು ಪ್ರಧಾನಿ ಭೇಟಿ ತಂಡದಲ್ಲಿ ಅವಕಸ ಪಡೆದುಕೊಂಡವರು. ಕಾಸರಗೋಡಿನಿಂದ ಇಂಟರ್‍ಸಿಟಿ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ಮೂಲಕ ದೆಹಲಿ ಪ್ರಯಾಣ ಕೈಗೊಂಡ ತಂಡಕ್ಕೆ ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಬಿಜೆಪಿ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಬಿಜೆಪಿ ಕೋಯಿಕ್ಕೋಡ್ ವಲಯ ಅಧ್ಯಕ್ಷ, ವಕೀಲ ಕೆ. ಶ್ರೀಕಾಂತ್, ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ಬದಿಯಡ್ಕ ಮತ್ತು ಮಧೂರು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಕೇರಳ ತಂಡದ ನೇತೃತ್ವ ವಹಿಸಿದ್ದಾರೆ. ನರೇಂದ್ರ ಮೋದಿ ಹಾಗೂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರ ಅಧಿಕೃತ ನಿವಾಸದಲ್ಲಿ ಇವರಿಗೆ ಪ್ರತ್ಯೇಕ ಔತಣಕೂಟ ಏರ್ಪಡಿಸಲಾಗಿದೆ. ಸಂಸತ್ ಭವನ ಮತ್ತು ಬಿಜೆಪಿ ರಾಷ್ಟ್ರೀಯ ಕೇಂದ್ರ ಕಚೇರಿಗೆ ಭೇಟಿ ನೀಡುವುದರ ಜತೆಗೆ, ಕೇರಳದ ಅಭಿವೃದ್ಧಿ ವಿಷಯಗಳ ಕುರಿತು ಪ್ರಧಾನಿಯವರೊಂದಿಗೆ ಚರ್ಚಿಸಲು ಪ್ರತಿನಿಧಿ ತಂಡಕ್ಕೆ ಅವಕಾಶ ಕಲ್ಪಿಸಲಾಗಿದೆ.


