HEALTH TIPS

ತಂತ್ರಜ್ಞಾನ ಕಂಪೆನಿಗಳ 'ಡಿಜಿಟಲ್ ಹುಕಿಂಗ್' ಬಗ್ಗೆ ಮನಶ್ಯಾಸ್ತ್ರಜ್ಞರು ಹೇಳುವುದೇನು?

18ರ ವಯಸ್ಸಿನಲ್ಲಿ ಬಾಲಕರ ಮೆದುಳು ಚೆನ್ನಾಗಿ ಬೆಳೆದಿರುವುದಿಲ್ಲ. ಮಕ್ಕಳನ್ನು ಮೊಬೈಲ್‌ಗಳಿಗೆ 'ಹುಕ್' ಮಾಡಲಾಗುತ್ತಿದೆ. ಮಕ್ಕಳನ್ನು ಆಕರ್ಷಿಸಲು ಅಗತ್ಯವಿರುವಂತೆ ಮೊಬೈಲ್‌ಗಳು, ಗೇಮ್‌ಗಳು ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಸಿದ್ಧಪಡಿಸಲಾಗಿರುತ್ತದೆ!

ಇತ್ತೀಚೆಗೆ ಉತ್ತರಪ್ರದೇಶದ ಗಾಝಿಯಾಬಾದ್‌ನಲ್ಲಿ ಹದಿಹರೆಯದ ಮೂವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಬಳಿಕ ಕೊರಿಯನ್ ಸಂಸ್ಕೃತಿ ಭಾರತದಲ್ಲಿ ತೀವ್ರವಾಗಿ ವ್ಯಾಪಿಸುತ್ತಿದೆ ಎನ್ನುವ ಆತಂಕ ಬೆಳೆಯುತ್ತಿದೆ.

ಅದರ ಜೊತೆಗೆ ಮೊಬೈಲ್ ಚಟದ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಮಕ್ಕಳ ಗೇಮಿಂಗ್ ಚಟದ ಬಗ್ಗೆ ರಾಷ್ಟ್ರಾದ್ಯಂತ ಆರೋಗ್ಯ ವಿಶೇಷಜ್ಞರು ಮತ್ತು ಮನೋವೈದ್ಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳ ಮಾನಸಿಕ ಆರೋಗ್ಯ ಮತ್ತು ನಿತ್ಯ ಜೀವನದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಮೊಬೈಲ್ ಫೋನ್ ಬಳಕೆಯನ್ನು ನಿಯಂತ್ರಿಸಬೇಕು ಎನ್ನುವ ಮಾತು ಕೇಳಿ ಬರುತ್ತಿದೆ.

ಈ ನಿಟ್ಟಿನಲ್ಲಿ ವಾರ್ತಾಭಾರತಿ ಜೊತೆಗೆ ಮಾತನಾಡಿದ ಲೇಖಕ ಮತ್ತು ಮನೋಚಿಕಿತ್ಸಕ- ಆಪ್ತಸಮಾಲೋಚಕರಾಗಿರುವ ವಸಂತ ನಡಹಳ್ಳಿ ಅವರು ಪೋಷಕರ ಹೊಣೆಗಾರಿಕೆ, ಮೊಬೈಲ್ ಚಟದ ಅಪಾಯ ಮತ್ತು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ವಸಂತ ನಡಹಳ್ಳಿ ಹೇಳುವ ಪ್ರಕಾರ ಮನಶ್ಶಾಸ್ತ್ರಜ್ಞರು ಮತ್ತು ಶಿಕ್ಷಣ ತಜ್ಞರ ಆತಂಕದ ಕುರಿತಂತೆ ದೇಶಾದ್ಯಂತ ಪೋಷಕರು, ಶಾಲೆಗಳು ಮತ್ತು ಸರ್ಕಾರ ಸೇರಿದಂತೆ ಜಾಗೃತಿ ಮೂಡಿಸುವಲ್ಲಿ ಕ್ರಮ ಕೈಗೊಳ್ಳಬೇಕಿದೆ.

ಉದ್ದೇಶಪೂರ್ವಕ ಮಕ್ಕಳಲ್ಲಿ ಮೊಬೈಲ್ ವ್ಯಸನ ಬೆಳೆಸಲಾಗುತ್ತದೆ!

ವಸಂತ್ ನಡಹಳ್ಳಿ ಹೇಳುವ ಪ್ರಕಾರ, 18ರ ವಯಸ್ಸಿನಲ್ಲಿ ಬಾಲಕರ ಮೆದುಳು ಚೆನ್ನಾಗಿ ಬೆಳೆದಿರುವುದಿಲ್ಲ. ಮಕ್ಕಳನ್ನು ಮೊಬೈಲ್‌ಗಳಿಗೆ 'ಹುಕ್' ಮಾಡಲಾಗುತ್ತಿದೆ. ಅಂದರೆ ಮೀನಿಗೆ ಬಲೆ ಹಾಕುವಾಗ ಕೊಕ್ಕೆಗೆ ಆಹಾರ ಸಿಕ್ಕಿಸುತ್ತೇವಲ್ಲ, ಅದೇ ರೀತಿಯ ಹುಕಿಂಗ್! ಮಕ್ಕಳನ್ನು ಆಕರ್ಷಿಸಲು ಅಗತ್ಯವಿರುವಂತೆ ಮೊಬೈಲ್‌ಗಳು, ಗೇಮ್‌ಗಳು ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಸಿದ್ಧಪಡಿಸಲಾಗಿರುತ್ತದೆ! "ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದರೆ ಈ ಸಾಮಾಜಿಕ ಮಾಧ್ಯಮಗಳ ವ್ಯಸನ ನಮಗೆಲ್ಲಾ ಹೇಗೆ ಅಂಟಿಕೊಂಡಿದೆ ಎನ್ನುವುದರ ಅರಿವಾಗುತ್ತದೆ. ಎಲ್ಲರ ಕೈಯಲ್ಲಿಯೂ ಮೊಬೈಲ್‌ ಮತ್ತು ಎಲ್ಲರೂ ನಿರಂತರವಾಗಿ ಸ್ಕ್ರೋಲಿಂಗ್‌ ಮಾಡುತ್ತಿರುತ್ತಾರೆ!

ಡಿಜಿಟಲ್ ವೇದಿಕೆಯನ್ನು ಕೇವಲ ತಂತ್ರಜ್ಞರು ಸಿದ್ಧಪಡಿಸಿಲ್ಲ!

"ಮೊಬೈಲ್ ಮೇಲೆ ವಯಸ್ಕರಿಗೇ ನಿಯಂತ್ರಣ ಇರುವುದಿಲ್ಲ. ಹೀಗಿರುವಾಗ ಚಟವಾಗುವಂತೆಯೇ ಸಿದ್ಧಪಡಿಸಿದ ಮೊಬೈಲ್, ವೀಡಿಯೋ ಗೇಮ್ಸ್‌ ಅಥವಾ ಡಿಜಿಟಲ್ ವೇದಿಕೆಯ ಮೇಲೆ ಮಕ್ಕಳಿಗೆ ನಿಯಂತ್ರಣ ಹೇರುವುದು ಸುಲಭವಲ್ಲ. ಡಿಜಿಟಲ್ ವೇದಿಕೆಯನ್ನು ಕೇವಲ ತಂತ್ರಜ್ಞರು ಮಾತ್ರ ಸಿದ್ಧಪಡಿಸಿರುವುದು ಎನ್ನುವುದು ಪೂರ್ಣ ಸತ್ಯವಲ್ಲ. ಒಂದು ಡಿಜಿಟಲ್‌ ಸಾಧನವನ್ನು ರೂಪಿಸುವುದರಲ್ಲಿ ನರವಿಜ್ಞಾನಿಗಳು, ಮನಶ್ಯಾಸ್ತ್ರಜ್ಞರು, ಜೀವರಸಾಯನಶಾಸ್ತ್ರಜ್ಞರು, ಮಾರುಕಟ್ಟೆ ತಜ್ಞರು ಹೀಗೆ ಹಲವಾರು ಜನ ಪಾಲುಗೊಂಡಿರುತ್ತಾರೆ. ಈ ಎಲ್ಲರ ಪ್ರಯತ್ನದ ಉದ್ದೇಶ ಕೇವಲ ಮೊಬೈಲ್‌ನ್ನು ಹೆಚ್ಚು ಆಕರ್ಷಕವಾಗಿ ಮಾಡುವುದು ಮಾತ್ರವಲ್ಲ, ಬಳಕೆದಾರನಲ್ಲಿ ಇದನ್ನು ಮತ್ತೆಮತ್ತೆ ಬಳಸುವ ವ್ಯಸನ ಅಂಟಿಕೊಳ್ಳುವಂತೆ ಮಾಡುವುದು ಹೇಗೆ ಎನ್ನುವುದೂ ಆಗಿರುತ್ತದೆ. ನಮ್ಮ ಮಿದುಳಿನಲ್ಲಿ ಸಂತೋಷದ, ಸಾರ್ಥಕತೆಯ ಅನುಭವ ಉಂಟಾದಾಗ ಡೊಪೊಮೈನ್‌ ಎನ್ನುವ ನರರಾಸಾಯನಿಕದ ಸೃಜನೆಯಾಗುತ್ತದೆ. ಮೊಬೈಲ್‌ ಬಳಕೆಯಿಂದ ಡೊಪೊಮೈನ್‌ ಹೆಚ್ಚುಹೆಚ್ಚು ಉತ್ಪತ್ತಿಯಾಗುವಂತೆ ಮಾಡುವುದು ಹೇಗೆ ಎನ್ನುವ ತಂತ್ರ ತಿಳಿದಾಗ ಇದರ ನಶೆಯನ್ನು ಒಬ್ಬ ಮುಗ್ಧ ಬಳಕೆದಾರನಿಗೆ ಅಂಟಿಸುವುದು ಸುಲಭವಾಗುತ್ತದೆ. ಈ ಕಾರ್ಯಕ್ಕೆ ನರವಿಜ್ಞಾನಿಗಳು, ಜೀವರಸಾಯನಶಾಸ್ತ್ರಜ್ಞರು, ಮನಶ್ಯಾಸ್ತ್ರಜ್ಞರು ಹೀಗೆ ಹಲವರು ಸಹಾಯ ಮಾಡುತ್ತಾರೆ" ಎನ್ನುತ್ತಾರೆ ವಸಂತ್ ನಡಹಳ್ಳಿ.

ಮಕ್ಕಳು ಆತ್ಮಹತ್ಯೆಯಂತಹ ಕೃತ್ಯಕ್ಕೆ ಇಳಿಯುವುದೇಕೆ?

ನಡಹಳ್ಳಿ ಪ್ರಕಾರ, ಅಂತರ್ಜಾಲ ಯಾರ ಕೈಯಲ್ಲೂ ಇಲ್ಲ. ಕೈಮೀರಿ ಹೋಗಿದೆ. ಅತಿ ಶಿಸ್ತಿನ ಗಲ್ಫ್ ದೇಶಗಳು ಅಥವಾ ಉತ್ತರ ಕೊರಿಯಾದಂತಹ ನಿಯಂತ್ರಿತ ದೇಶದಲ್ಲೂ ಕಾಮಪ್ರಚೋದಕ ಕಂಟೆಂಟ್‌ಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಮೆದುಳಿನ ಭಾಗಗಳು ಬೆಳೆದಿರುವುದಿಲ್ಲ. ಹೀಗಾಗಿ ಮೂರು ವರ್ಷದ ಮಗುವಿಗೆ ಏನಾದರೂ ಬೇಕು ಅಂದರೆ ತಕ್ಷಣ ಬೇಕು ಎಂದು ರಚ್ಚೆ ಹಿಡಿಯುತ್ತದೆ. ಮೆದುಳಿನ ಫ್ರಂಟಲ್ ಲೋಬ್ (ಮುಮ್ಮೆದುಳು) ನಮಗೆ ತಾರ್ಕಿಕವಾಗಿ ಆಲೋಚನೆ ಮಾಡಲು ನೆರವಾಗುತ್ತದೆ. ಪರಿಸ್ಥಿತಿಗಳನ್ನು ನಿಭಾಯಿಸಲು ಇದು ನೆರವಾಗುತ್ತದೆ, ಒಂದು ಆಕರ್ಷಣೆಯ ಪರಿಣಾಮಗಳನ್ನು ಆಲೋಚನೆ ಮಾಡಿ ಅವುಗಳನ್ನು ಹಿಡಿತದಲ್ಲಿಡಬಹುದು. ಮೆದುಳಿನ ಆ ಭಾಗ ಹಣೆಯ ಹಿಂದುಗಡೆ ಇರುತ್ತದೆ. ಅದನ್ನು ಪ್ರಿ ಫ್ರಂಟಲ್ ಕಾರ್ಟೆಕ್ಸ್ (pre frontal cortex) ಎನ್ನುತ್ತಾರೆ. ಅದು ಮಕ್ಕಳಲ್ಲಿ ಬೆಳೆದಿರುವುದಿಲ್ಲ. ಅಂದರೆ ಮಕ್ಕಳು ದೊಡ್ಡವರಾದಂತೆ ಅದೂ ನಿಧಾನವಾಗಿ ಬೆಳೆಯುತ್ತಾ ಹೋಗುತ್ತದೆ. ಇದು ಪೂರ್ಣ ಬೆಳವಣಿಗೆಯಾಗುವುದು 25ರ ವಯಸ್ಸಿನ ಮೇಲೆ. 25ರಿಂದ 30ರವರೆಗೆ ಇದು ಬೆಳೆಯುತ್ತದೆ."

ಮಕ್ಕಳನ್ನು ತಂತ್ರಜ್ಞಾನದಿಂದ ದೂರವಿಟ್ಟ ಕಾರ್ಪೋರೇಟ್

ಅಮೆರಿಕದ "ಬಿಸಿನಿಸ್‌ ಇನಸೈಡರ್‌" 2019 ಏಪ್ರಿಲ್‌ 25ರಂದು ವರದಿಯೊಂದನ್ನು ಪ್ರಕಟಿಸಿತ್ತು. ಬೃಹತ್ ಕಾರ್ಪೋರೇಟ್‌ ಮುಖ್ಯಸ್ಥರು ತಮ್ಮ ಮಕ್ಕಳನ್ನು "ಪರದೆ ಸಮಯ"ದಿಂದ ಹೇಗೆ ಸುರಕ್ಷಿತವಾಗಿಡುತ್ತಾರೆ ಎನ್ನುವ ಕುರಿತ ವಿವರ ಅದರಲ್ಲಿತ್ತು. ಆಪಲ್‌ನ ಮಾಜಿ ಸಿಇಓ ಸ್ಟೀವ್‌ ಜಾಬ್ಸ್‌ ತಮ್ಮದೇ ಉತ್ಪನ್ನವಾದ ಐಪಾಡ್‌ನ್ನು ತಮ್ಮ ಮಕ್ಕಳಿಗೆ ಬಳಸಲು ಅವಕಾಶಕೊಟ್ಟಿರಲಿಲ್ಲ. ಆದರೆ ಬೇರೆಲ್ಲರ ಮಕ್ಕಳಿಗೆ ಅದರ ವ್ಯಸನವನ್ನು ಅಂಟಿಸಿ ಆಪಲ್‌ ಬಿಲಿಯನ್‌ಗಟ್ಟಲೆ ಲಾಭಗಳಿಸಿತು! ಮೈಕ್ರೋಸಾಫ್ಟ್‌ನ ಸಿಇಓ ಬಿಲ್‌ ಗೇಟ್ಸ್‌ ತಮ್ಮ ಮಕ್ಕಳಿಗೆ 14 ವರ್ಷಗಳಾಗುವವರೆಗೆ ಮೊಬೈಲ್‌ ಬಳಸಲು ಅವಕಾಶ ಕೊಟ್ಟಿರಲಿಲ್ಲ. ಸ್ನಾಪ್‌ಚಾಟ್‌ನ ಸ್ಥಾಪಕ ಇವಾನ್‌ ಸ್ಪೀಗಲ್‌ ತನ್ನ ಮಕ್ಕಳಿಗೆ ವಾರಕ್ಕೆ ಒಂದೂವರೆ ಗಂಟೆ ಪರದೆ ಸಮಯಕ್ಕೆ ಅವಕಾಶ ನೀಡುತ್ತಿದ್ದರು. ಗೂಗಲ್‌ನ ಸುಂದರ್‌ ಪಿಚ್ಚೈ ತಮ್ಮ ಮಕ್ಕಳನ್ನು ಟೀವಿಯಿಂದ ದೂರವಿರಿಸಿದ್ದರು. ಆದರೆ ತಮ್ಮ ಉತ್ಪನ್ನಗಳು ಇಷ್ಟು ವರ್ಷದ ಕೆಳಗಿನ ಮಕ್ಕಳು ಬಳಸುವುದು ಅಪಾಯಕರ ಎನ್ನುವ ಎಚ್ಚರಿಕೆಯನ್ನಾದರೂ ನೀಡುವ ಸಾಮಾಜಿಕ ಜವಾಬ್ದಾರಿಯನ್ನು ಯಾವ ಕಂಪನಿಯೂ ತೋರಿಸಲಿಲ್ಲ.

ಡಿಜಿಟಲ್ ಹುಕಿಂಗ್‌ಗೆ ಕಾರಣವಾಗುತ್ತಿರುವ ಸಾಮಾಜಿಕ ಮಾಧ್ಯಮಗಳು

"ಫೇಸ್‌ಬುಕ್‌ ಇಸ್ಟಾಗ್ರಾಮ್‌ಗಳಲ್ಲಿ ನೀವು ಎಂತಹ ಪೋಸ್ಟ್‌ಗಳನ್ನು ಹೆಚ್ಚುಹೆಚ್ಚು ಗಮನಿಸುತ್ತೀರಿ ಮತ್ತು ಯಾವುದಕ್ಕೆ ಪ್ರತಿಕ್ರಿಯಿಸುತ್ತೀರಿ ಎನ್ನುವುದರ ಆಧಾರದ ಮೇಲೆ ಅವುಗಳನ್ನು ನಿಮ್ಮ ಪುಟದ ಸರತಿಯಲ್ಲಿ ಮುಂದೆ ನಿಲ್ಲಿಸಲಾಗುತ್ತದೆ. ಆಗಾಗ ನೀವು ಗಮನಿಸಬೇಕಾದ ಪೋಸ್ಟ್‌ಗಳ ಕುರಿತು ಸಂದೇಶಗಳು ಬರುತ್ತವೆ. ಹೆಚ್ಚು ಜನ ಸ್ನೇಹಿತರು ಅಥವಾ ಹಿಂಬಾಲಕರಿದ್ದರೆ ನೀವು ದೊಡ್ಡ ಸಾಧಕರು ಎನ್ನುವ ಸಂದೇಶವನ್ನು ಕಳಿಸಿ ನಿಮ್ಮ ಪೋಸ್ಟ್‌ಗಳನ್ನು ಹೆಚ್ಚಿಸಲು ಮತ್ತೆಮತ್ತೆ ಪ್ರಚೋದಿಸಲಾಗುತ್ತದೆ. ನಿಮಗೆ ಬರುವ ಲೈಕ್‌ಗಳು ಹೆಚ್ಚಿದಂತೆಲ್ಲಾ ನೀವು ಅದರ ಬಳಕೆಯ ಆಕರ್ಷಣೆಗೆ ಹೆಚ್ಚು ಒಳಗಾಗುತ್ತೀರಿ. ಯುಟ್ಯೂಬ್‌ ಬಳಸುವ ಎಲ್ಲರಿಗೂ ಅನುಭವಕ್ಕೆ ಬಂದಿರುವ ಅಂಶವೆಂದರೆ ನೀವು ಯಾವ ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹೆಚ್ಚು ಗಮನಿಸುತ್ತೀರೋ ಆ ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ವಿಡಿಯೋಗಳು ನಿಮ್ಮ ಸರತಿಯಲ್ಲಿ ಮುಂದೆ ಬಂದು ಕುಳಿತಿರುತ್ತಿವೆ. ಅಂದರೆ ವಾಸ್ತವವಾಗಿ ನೀವು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿರುವುದಿಲ್ಲ, ಸಾಮಾಜಿಕ ಮಾಧ್ಯಮಗಳೇ ನಿಮ್ಮನ್ನು ಬಳಸಿ ಜಾಹಿರಾತುಗಳ ಮೂಲಕ ಖಜಾನೆ ಭರ್ತಿಮಾಡಿಕೊಳ್ಳುತ್ತಿರುತ್ತವೆ" ಎಂದು ಅವರು ವಿವರಿಸಿದರು.

ಸಾಮಾಜಿಕ ಮಾಧ್ಯಮಗಳಿಂದ ಮಕ್ಕಳ ರಕ್ಷಣೆ ಹೇಗೆ?

ಪಕ್ಕದಲ್ಲಿರುವ ವ್ಯಕ್ತಿಯ ಜೊತೆಗಿನ ಮಾನವೀಯ ಸಂಬಂಧದ ರುಚಿಯನ್ನು ಕಳೆದುಕೊಂಡಿರುವ ಮನುಕುಲ ಯಂತ್ರಗಳೊಂದಿಗೆ ವ್ಯವಹರಿಸುತ್ತಾ ಏಕಾಂಗಿತನದ ಭಯಂಕರ ಆಪಾಯವನ್ನು ಆಹ್ವಾನಿಸಿಕೊಳ್ಳುತ್ತಿದೆ. ಡಿಜಿಟಲ್‌ ವ್ಯಸನ ಮಾನವರ ಮಿದುಳಿನ ರಚನೆಯನ್ನು, ನರಮಂಡಲಗಳ ಕಾರ್ಯವಿಧಾನವನ್ನು, ಮನೋದೈಹಿಕ ಆರೋಗ್ಯವನ್ನು ಮತ್ತು ಒಟ್ಟಾರೆಯಾಗಿ ಮಾನವ ತನ್ನ ವಿಕಾಸದ ಹಂತಗಳಿಂದ ಪಡೆದುಕೊಂಡು ಬಂದಿರುವ ಎಲ್ಲಾ ವಿವೇಚನೆ ವಿವೇಕಗಳನ್ನೇ ಹೇಗೆ ವಿರೂಪಗೊಳಿಸುತ್ತದೆ ಎನ್ನುವುದನ್ನು ಬ್ರಿಟಿಶ್‌ ಮನಶ್ಯಾಸ್ತ್ರಜ್ಞೆ ಮಾರಿ ಕೆ ಸ್ವಿಂಗಲ್‌ ತನ್ನ ಪುಸ್ತಕ "ಐ-ಮೈಂಡ್ಸ್‌"ನಲ್ಲಿ ವಿವರಿಸಿದ್ದಾರೆ.

"ದುರಾದೃಷ್ಟದ ಸಂಗತಿಯೆಂದರೆ ಇದಕ್ಕಾಗಿ ಸ್ಪಷ್ಟವಾದ ಕಾನೂನು ಅಥವಾ ಮಾರ್ಗಸೂಚಿಗಳನ್ನು ರೂಪಿಸುವುದರ ಕುರಿತು ಸರಕಾರಗಳು ಯೋಚಿಸುತ್ತಿಲ್ಲ. ಸರಕಾರಿ ತಜ್ಞರಿಗೆ ಇವುಗಳಿಂದಾಗುತ್ತಿರುವ ಅಪಾಯಗಳ ಅರಿವೂ ಇದ್ದಂತಿಲ್ಲ. ಹಾಗಾಗಿ ಸಾಮಾಜಿಕ ಕಾಳಜಿಯುಳ್ಳವರೆಲ್ಲರೂ ಇದರ ಕುರಿತು ಹೆಚ್ಚುಹೆಚ್ಚು ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ತುರ್ತಾದ ಅಗತ್ಯವಿದೆ. ಹಾಗೆ ಮಾಡದಿದ್ದರೆ ನಮ್ಮ ಮಕ್ಕಳು ಡಿಜಿಟಲ್‌ ವ್ಯಸನಕ್ಕೆ ಅಂಟಿಕೊಳ್ಳುವುದನ್ನು ತಪ್ಪಿಸಲಾಗುವುದಿಲ್ಲ" ಎನ್ನುತ್ತಾರೆ ನಡಹಳ್ಳಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries