ವಾಶಿಂಗ್ಟನ್: ಅಮೆರಿಕದ ಮಾನವಹಕ್ಕುಗಳ ಹಿರಿಯ ಹೋರಾಟಗಾರ ಜೆಸ್ಸಿಜಾಕ್ಸನ್ ಸೋಮವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ವರ್ಣಭೇದ ನೀತಿಯ ವಿರುದ್ಧ ಸುದೀರ್ಘ ಹೋರಾಟ ನಡೆಸಿದ ಮಾರ್ಟಿನ್ ಲೂಥರ್ ಕಿಂಗ್ ಅವರ ಒಡನಾಡಿಯಾಗಿದ್ದ ಜೆಸ್ಸೆ ಜಾಕ್ಸನ್ ಅವರು ಎರಡು ಬಾರಿ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಿದ್ದರು.
ಪಾರ್ಕಿನ್‌ಸನ್ ರೋಗದಿಂದ ಅವರು ಬಳಲುತ್ತಿದ್ದರು.
ದಕ್ಷಿಣ ಕರೋಲಿನಾದ ಗ್ರೀನ್‌ವಿಲ್ಲೆಯಲ್ಲಿ ಜನಿಸಿದ ಜೆಸ್ಸಿ ಜಾಕ್ಸನ್ ಅವರು 1960ರ ದಶಕದಲ್ಲಿ ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟದಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದರು ಮತ್ತು 1968ರಲ್ಲಿ ಮಾರ್ಟಿನ್ ಲೂಥರ್‌ಕಿಂಗ್ ಅವರು ಮೆಂಫಿಸ್‌ನಲ್ಲಿ ಹತ್ಯೆಯಾದಾಗ, ಜೆಸ್ಸಿ ಜಾಕ್ಸನ್ ಜೊತೆಯಲ್ಲಿದ್ದರು. ಕೆಲವು ವರ್ಷಗಳ ಬಳಿಕ ಜಾಕ್ಸನ್ ಅವರು ಆಫ್ರಿಕನ್ ಅಮೆರಿಕನ್ನರು ಮತ್ತಿತರ ದುರ್ಬಲ ಸಮುದಾಯಗಳಿಗೆಜನಾಂಗೀಯ ಸಮಾನತೆ, ಆರ್ಥಿಕ ನ್ಯಾಯ ಮತ್ತು ರಾಜಕೀಯ ಸಬಲೀಕರಣವನ್ನು ಪ್ರತಿಪಾದಿಸುವ ' 'ರೈನ್‌ಬೋ ಪುಶ್ ಮೈತ್ರಿಕೂಟ'ವನ್ನು ಸ್ಥಾಪಿಸಿದ್ದರು.
ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅವರು 1984 ಮತ್ತು 1988ರಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ ಅವರು ಪ್ರಚಾರ ಭಾಷಣದಲ್ಲಿ ಕರಿಯ ಜನಾಂಗೀಯರ ಸಮಸ್ಯೆಗಳು, ಅಸಮಾನತೆಯ ವಿಷಯಗಳನ್ನು ರಾಜಕೀಯ ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾದರು.
ಜಾಕ್ಸನ್ ನಿಧನಕ್ಕೆ ಅಮೆರಿಕ ಮತ್ತು ವಿಶ್ವದ ಹಲವಾರು ರಾಜಕೀಯ ನಾಯಕರು, ಸಾಮಾಜಿಕ ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರರು ಕಂಬನಿ ಮಿಡಿದಿದ್ದಾರೆ. ಜೆಸ್ಸಿ ಜಾಕ್ಸನ್ ಅವರು ಪತ್ನಿ ಜಾಕ್ವೆಲಿನ್ ಜಾಕ್ಸನ್ ಅವರನ್ನು ಅಗಲಿದ್ದಾರೆ.

