ಕೋಝಿಕ್ಕೋಡ್: ಪಾದಚಾರಿ ಮಾರ್ಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಸ್ಕೂಟರ್ ಚಲಾಯಿಸಲು ಯತ್ನಿಸಿದ ಸವಾರನನ್ನು ವೃದ್ಧ ಮಹಿಳೆಯೊಬ್ಬರು ತಡೆದು ರಸ್ತೆಗೆ ವಾಪಾಸ್ ಕಳುಹಿಸಿದ ಘಟನೆ ಕೇರಳದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನಾಗರಿಕರ ಜವಾಬ್ದಾರಿಯ ದೃಢ ಉದಾಹರಣೆಯೆಂದು ಹಲವರು ಕೊಂಡಾಡಿದ್ದಾರೆ.
ಎರಾನ್ಹಿಪಾಲಂ ಸಿಗ್ನಲ್ ಸಮೀಪ ನಡೆದ ಘಟನೆಯ ವಿಡಿಯೋದಲ್ಲಿ, ಸಂಚಾರ ದಟ್ಟಣೆಯನ್ನು ತಪ್ಪಿಸಲು ಸ್ಕೂಟರ್ ಸವಾರ ಫುಟ್ಪಾತ್ ಮೇಲೇರಿ ಹೋಗಲು ಯತ್ನಿಸುವುದು ಕಾಣಿಸುತ್ತದೆ. ಈ ವೇಳೆ ವೃದ್ಧ ಮಹಿಳೆಯು ಸವಾರನ ಮುಂದೆ ದಾರಿಗೆ ಅಡ್ಡಲಾಗಿ ನಿಂತು, ತಡೆದಿದ್ದಾರೆ. ಸವಾರನು ಪಕ್ಕದ ಕಿರಿದಾದ ಜಾಗದಿಂದ ಹಾದುಹೋಗಲು ಹಲವಾರು ಬಾರಿ ಪ್ರಯತ್ನಿಸಿದರೂ, ಮಹಿಳೆ ಸರಿಯದೆ ನಿಂತು ಮುಂದಕ್ಕೆ ಸಾಗಲು ಬಿಡಲಿಲ್ಲ.
ಒಂದು ಹಂತದಲ್ಲಿ ಮಹಿಳೆ ತಮ್ಮ ಮೊಬೈಲ್ ಫೋನ್ ಹೊರತೆಗೆದು ದೃಶ್ಯವನ್ನು ದಾಖಲಿಸುತ್ತಿರುವಂತೆ ಕಂಡುಬಂದಿದ್ದು, ಇದರಿಂದ ಸವಾರ ಹಿಂಜರಿದಿರುವುದು ಕಂಡು ಬಂದಿದೆ. ಕೊನೆಗೆ ಆತ ಬೇರೆ ದಾರಿಯಿಲ್ಲದೇ ಫುಟ್ಪಾತ್ ನಿಂದ ಇಳಿದು ರಸ್ತೆಗೆ ಮರಳಿರುವುದು ಸೆರೆಯಾಗಿದೆ. ವಿಡಿಯೋ ಅಂತ್ಯದಲ್ಲಿ ಮಹಿಳೆಯು ತಂಬ್ಸ್ ಅಪ್ ಮಾಡಿ ನಗುಮುಖ ತೋರಿಸಿರುವುದು ಗಮನಸೆಳೆಯಿತು.
ಈ ವಿಡಿಯೋವನ್ನು ಕೇರಳ ಮೋಟಾರು ವಾಹನ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಹಿಳೆಯನ್ನು ಗುರುತಿಸಲು ಸಾರ್ವಜನಿಕರ ಸಹಕಾರ ಕೋರಿದೆ. ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಕ್ಲಿಪ್ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ಕಮೆಂಟ್ ವಿಭಾಗದಲ್ಲಿ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಬಳಕೆದಾರರು ʼಅಮ್ಮಚ್ಚಿʼಯ ಧೈರ್ಯವನ್ನು ಶ್ಲಾಘಿಸಿ "ಇಂತಹ ನಾಗರಿಕ ಜಾಗೃತಿ ಅಗತ್ಯ," "ಸರಿಯಾದ ಕೆಲಸ ಮಾಡಿದ್ದಾರೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಇಂತಹ ಸಂದರ್ಭಗಳಲ್ಲಿ ವಾಗ್ವಾದ ಹೆಚ್ಚಾದರೆ ಅಪಾಯ ಉಂಟಾಗುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಿದ್ದಾರೆ. ಒಬ್ಬರು When Ammachi says enough is enough… ಎಂದು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
1989ರ ಕೇರಳ ಮೋಟಾರು ವಾಹನ ನಿಯಮಗಳ ಪ್ರಕಾರ ಪಾದಚಾರಿ ಮಾರ್ಗದಲ್ಲಿ ಮೋಟಾರು ವಾಹನ ಚಲಾಯಿಸುವುದು ಕಾನೂನುಬಾಹಿರ. ಪಾದಚಾರಿಗಳ ಸುರಕ್ಷತೆಗೆ ಮೀಸಲಾದ ಹಾದಿಯನ್ನು ಯಾವುದೇ ವಾಹನ ಬಳಸಬಾರದು ಎಂದು ನಿಯಮ ಸ್ಪಷ್ಟಪಡಿಸುತ್ತದೆ.

