►ದೀಪಕ್ ಚೋಪ್ರಾ ಯಾರು?
ಭಾರತೀಯ ಸಂಜಾತ ಅಮೆರಿಕನ್ ಪ್ರಜೆಯಾಗಿರುವ ದೀಪಕ್ ಚೋಪ್ರಾ ಪರ್ಯಾಯ ಔಷಧಿಗಳನ್ನು ಸೂಚಿಸುವುದರಲ್ಲಿ ಪರಿಣತರು ಮತ್ತು ಅನೇಕ ಜನಪ್ರಿಯ ಪುಸ್ತಕಗಳನ್ನು ಬರೆದಿದ್ದಾರೆ. ಅವರು ವೈದ್ಯ ಮತ್ತು ಲೇಖಕರಾಗಿದ್ದು 'ನವಯುಗ' ಚಳವಳಿಯಲ್ಲಿ (ಅಂದರೆ ಯೋಗ, ಧ್ಯಾನ, ಜ್ಯೋತಿಷ್ಯದಂತಹ ವಿಚಾರಗಳ ಅಧ್ಯಯನ ಮಾಡಿದ ವಿದ್ವಾಂಸರು) ಪ್ರಮುಖ ವ್ಯಕ್ತಿ. ಲಕ್ಷಾಂತರ ಜನರನ್ನು ಧ್ಯಾನ ಮತ್ತು ಸಮಗ್ರ ಜೀವನಕ್ಕೆ ಕರೆತಂದ ದಾರ್ಶನಿಕ ಎಂದು ಅವರನ್ನು ನೋಡಲಾಗುತ್ತಿದೆ. ಪ್ರಸಿದ್ಧ ಭಾಷಣಕಾರರೂ ಆಗಿರುವ ದೀಪಕ್ ಅವರ ಹೆಸರು ಎಪ್ಸ್ಟೀನ್ ಫೈಲ್ ಗಳಲ್ಲಿ ಉಲ್ಲೇಖಗೊಂಡಿದೆ.
ದೀಪಕ್ ಚೋಪ್ರಾ ಮತ್ತು ಎಪ್ಸ್ಟೀನ್ ಅವರು ಡೊನಾಲ್ಡ್ ಟ್ರಂಪ್ ಅವರ ಎರಡನೇ ಪತ್ನಿ ಮಾರ್ಲಾ ಮೇಪಲ್ಸ್ ಕುರಿತಂತೆ ಮತ್ತು ಅಪ್ರಾಪ್ತ ವಯಸ್ಕರ ಲೈಂಗಿಕ ದೌರ್ಜನ್ಯ ಮೊಕದ್ದಮೆ ಕುರಿತಂತೆ ಇಮೇಲ್ ಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಕಡತಗಳ ಪ್ರಕಾರ ಎಪಿಸ್ಟೀನ್ 2016ರಲ್ಲಿ ದೀಪಕ್ ಚೋಪ್ರಾರನ್ನು ಸಂಪರ್ಕಿಸಿದ್ದಾರೆ. ಆಗಷ್ಟೇ ಹಿಂತೆಗೆದುಕೊಳ್ಳಲಾದ ಸಿವಿಲ್ ಮೊಕದ್ದಮೆಯೊಂದರ ಸುದ್ದಿಯ ಲಿಂಕ್ ಅನ್ನು ದೀಪಕ್ ಚೋಪ್ರಾಗೆ ಕಳುಹಿಸಿದ್ದಾರೆ.
ಜಾಗತಿಕವಾಗಿ ಪ್ರಸಿದ್ಧಿ ಪಡೆದ ಪರ್ಯಾಯ ಔಷಧಿಯ ಪರವಾಗಿ ಮಾತನಾಡುವ ದೀಪಕ್ ಚೋಪ್ರಾ 1990ರಲ್ಲಿ ಪ್ರಸಿದ್ಧಿಗೆ ಬಂದಿದ್ದರು. ಮೊದಲು ಅವರು ಸೇಂಟ್ ಕೊಲುಂಬಾದಲ್ಲಿ ಶಾಲಾ ಶಿಕ್ಷಣ ಪಡೆದಮೇಲೆ 1969ರಲ್ಲಿ ದಿಲ್ಲಿಯಲ್ಲಿ ಏಮ್ಸ್ನಲ್ಲಿ ಪದವಿ ಪಡೆದರು.
ಹೊಸದಿಲ್ಲಿಯಲ್ಲಿ ಜನಿಸಿದ ಅವರು ನಂತರ 1970ರಲ್ಲಿ ಅಮೆರಿಕಕ್ಕೆ ತೆರಳಿದರು. ಅಲ್ಲಿ ಇಂಟರ್ನಲ್ ಮೆಡಿಸಿನ್ ಮತ್ತು ಎಂಡೊಕ್ರೈನೊಲಜಿಯಲ್ಲಿ ವೃತ್ತಿ ಆರಂಭಿಸಿದ್ದರು. ಆಗ ಭಾರತ ಸರ್ಕಾರ ಭಾರತೀಯ ವೈದ್ಯರು ಅಮೆರಿಕದ ಲೈಸೆನ್ಸಿಂಗ್ ಎಕ್ಸಾಮ್ ಬರೆಯುವುದನ್ನು ನಿಷೇಧಿಸಿತ್ತು. ಹೀಗಾಗಿ ಅವರು ಶ್ರೀಲಂಕಾಗೆ ಹೋಗಿ ಪರೀಕ್ಷೆ ಬರೆದು ನ್ಯೂಜೆರ್ಸಿಗೆ ತೆರಳಿದ್ದರು.
ಕಾಲಾನುಸಾರ ದೀಪಕ್ ಅವರು ಅಲೋಪತಿಯ ಬದಲಾಗಿ 'ಇಂಟೆಗ್ರೇಟಿವ್ ಮೆಡಿಸಿನ್' ಎಂದು ಆರೋಗ್ಯ ಮತ್ತು ಆಧ್ಯಾತ್ಮವನ್ನು ಜೊತೆಗೂಡಿಸಿದ ವೈದ್ಯಪದ್ಧತಿಯನ್ನು ಪ್ರಚಾರ ಮಾಡಲಾರಂಭಿಸಿದರು. ಈ ಕುರಿತಾಗಿ ಅವರು 90 ಪುಸ್ತಕಗಳನ್ನು ಬರೆದಿದ್ದಾರೆ. ಬಹಳಷ್ಟು ಪುಸ್ತಕಗಳು ನ್ಯೂಯಾರ್ಕ್ ಟೈಮ್ಸ್ನ ಅತ್ಯುತ್ತಮ ಮಾರಾಟವಾಗುವ ಪುಸ್ತಕಗಳಾಗಿದ್ದವು. ಓಫ್ರಾ ವಿನ್ಫ್ರೇ ಮೊದಲಾದ ತಾರೆಯರು ಅವರ ವೈದ್ಯಕ್ರಮವನ್ನು ಪ್ರಚಾರ ಮಾಡಿದ ನಂತರ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿತ್ತು.
ಮನಸ್ಸು-ದೇಹದ ಮೇಲೆ ಪ್ರಭಾವ ಬೀರಿ ಗುಣಪಡಿಸುವ ಕಲ್ಪನೆಯನ್ನು ಅವರು ಪಾಶ್ಚಾತ್ಯ ಮುಖ್ಯವಾಹಿನಿಗೆ ಚರ್ಚೆಗೆ ತಂದರು. ಮಾತ್ರವಲ್ಲದೆ, ಧಾನ್ಯ, ಆಯುರ್ವೇದ ಮತ್ತು ಸಮಗ್ರ ಆರೋಗ್ಯ ಅಭ್ಯಾಸಗಳನ್ನು ಉತ್ತೇಜಿಸುವ ಸೆಂಟರ್ ಫಾರ್ ವೆಲ್ಬೀಯಿಂಗ್ ಅನ್ನು ಸ್ಥಾಪಿದರು. ನಂತರ ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದರು.
ದೀಪಕ್ ಚೋಪ್ರಾ ನ್ಯೂ ಇಂಗ್ಲಂಡ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅದು ಅವರ ವೈದ್ಯಕೀಯ ವೃತ್ತಿಜೀವನದ ಉತ್ತುಂಗದ ದಿನಗಳಾಗಿದ್ದವು.
ಎಪ್‌ಸ್ಟೀನ್ ಕಡತಗಳಲ್ಲಿ ದೀಪಕ್ ಚೋಪ್ರಾ ಏಕಿದ್ದಾರೆ?
"ವುಡಿ ಜೊತೆಗೆ ಭೋಜನ ಕೂಟದಲ್ಲಿ ಭಾಗವಹಿಸಲು ಬಯಸುವಿರಾ?" ಎಂದು ಎಪ್ಸ್ಟೀನ್ ಅವರು ದೀಪಕ್ ಅವರಿಗೆ ಇಮೇಲ್ ಹಾಕಿದ್ದಾರೆ. "ಖಂಡಿತಾ ಬಯಸುತ್ತೇನೆ, ಆವರು ಸಮೀಪದಲ್ಲಿದ್ದಾರೆಯೆ?" ಎಂದು ದೀಪಕ್ ಉತ್ತರಿಸಿದ್ದಾರೆ. ನಂತರ ಅವರು ಭೇಟಿಯಾಗಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಹೊಸದಾಗಿ ಬಿಡುಗಡೆಯಾದ ಎಪ್‌ಸ್ಟೀನ್ ಕಡತಗಳಲ್ಲಿ ದೀಪಕ್ ಹೆಸರು ಬಂದಿರುವುದು ಎಲ್ಲರ ಹುಬ್ಬೇರಿಸಿದೆ. ಎಪ್‌ಸ್ಟೀನ್ ತಮ್ಮ ಕಡತಗಳಲ್ಲಿ ಅನೇಕ ಪ್ರಭಾವೀ ಸ್ನೇಹಿತರ ಅಂತರಂಗದ ಜೀವನವನ್ನು ಬಹಿರಂಗಪಡಿಸಿದ್ದಾರೆ. ಅವರಲ್ಲಿ ದೀಪಕ್ ಚೋಪ್ರಾ ಹೆಸರೂ ಇದೆ. 2016ರಿಂದ 2018ರ ನಡುವೆ ಇಬ್ಬರ ನಡುವೆ ಗಂಭೀರ ಮಾತುಕತೆಗಳು ನಡೆದಿರುವುದಾಗಿ ದಾಖಲೆಗಳು ಉಲ್ಲೇಖಿಸಿವೆ.
ಅವರ ಮಾತುಕತೆಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಎರಡನೇ ಪತ್ನಿ ಮಾರ್ಲಾ ಮೇಪಲ್ಸ್ ಗರ್ಭಿಣಿಯಾಗಿರುವ ತಮಾಷೆ ಮಾತುಕತೆಯೂ ಇತ್ತು. "ಟ್ರಂಪ್ ಜೊತೆಗೆ 10,000 ಡಾಲರ್ ಬೆಟ್ ಸೋತಿದ್ದೇನೆ. ಅದಕ್ಕಾಗಿ ಟ್ರಕ್ ತುಂಬಾ ಮಗುವಿನ ಆಹಾರ ಕಳುಹಿಸಿದ್ದೇನೆ" ಎಂದೂ ಇಬ್ಬರ ನಡುವಿನ ಮಾತುಕತೆಯ ವಿವರಗಳಲ್ಲಿ ಉಲ್ಲೇಖಗೊಂಡಿವೆ. ಬದಲಿಗೆ ಚೋಪ್ರಾ, "ನಾವು ಹಂಚಿಕೊಂಡ ಮಾಹಿತಿ ನಮ್ಮೊಳಗೇ ಇರುತ್ತದೆ. ನಾನು ಬೇರೆಯವರೊಂದಿಗೆ ಏನೂ ಹಂಚಿಕೊಳ್ಳುವುದಿಲ್ಲ, ಆದರೆ ನಿನ್ನ ಮೇಲೆ ನಂಬಿಕೆ ಇದೆ" ಎಂದು ಬರೆದಿದ್ದಾರೆ.
2016ರಲ್ಲಿ ನಡೆದ ಸಂಭಾಷಣೆಯೊಂದರಲ್ಲಿ ಟ್ರಂಪ್ ವಿರುದ್ಧ ಲೈಂಗಿಕ ಹಲ್ಲೆಯ ಸಿವಿಲ್ ಮೊಕದ್ದಮೆಯನ್ನು ಮಹಿಳೆ ಹಿಂತೆಗೆದುಕೊಂಡಿರುವ ಸುದ್ದಿಯ ಲಿಂಕ್ ಕಳುಹಿಸಲಾಗಿತ್ತು. ಅದಕ್ಕೆ ಉತ್ತರವಾಗಿ ದೀಪಕ್, "ನಿಮ್ಮ ವಿರುದ್ಧವೂ ಸಿವಿಲ್ ಕೇಸ್ ಹಿಂತೆಗೆದುಕೊಂಡಿದ್ದಾರೆಯೆ?" ಎಂದು ಪ್ರಶ್ನಿಸಿದ್ದಾರೆ. "ಹೌದು" ಎಂದು ಎಪ್‌ಸ್ಟೀನ್ ಉತ್ತರಿಸಿದಾಗ ದೀಪಕ್, "ಗುಡ್" ಎಂದು ಉತ್ತರಿಸಿದ್ದಾರೆ.

