ನವದೆಹಲಿ: ಯಾವುದೇ ಅಪರಾಧ ಕೃತ್ಯದ ಸಂತ್ರಸ್ತರನ್ನು ಅವರ ಜಾತಿ, ಪ್ರದೇಶ, ಲಿಂಗ ಮತ್ತು ಜನಾಂಗದ ಆಧಾರದಲ್ಲಿ ಗುರುತಿಸುವುದು ಸಲ್ಲ. ಇದು ಪ್ರತಿಗಾಮಿ ನಡೆಯಾಗಲಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ತ್ರಿಪುರಾದ ಅಂಜೆಲ್ ಚಕ್ಮಾ ಅವರನ್ನು ಕಳೆದ ವರ್ಷ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಹತ್ಯೆ ಮಾಡಿರುವುದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ಜನಾಂಗೀಯ ವಿಚಾರವಾಗಿ ಚಕ್ಮಾ ಅವರನ್ನು ಹತ್ಯೆ ಮಾಡಲಾಗಿದ ಎಂದು ಆರೋಪಿಸಲಾಗಿದೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಎಂ.ಪಾಂಚೋಲಿ ಅವರು ಇದ್ದ ಪೀಠವು, ಈ ವಿಚಾರವನ್ನು ಅಟಾರ್ನಿ ಜನರಲ್ ಮೂಲಕ ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಪ್ರಸ್ತಾಪಿಸುವಂತೆ ಅರ್ಜಿದಾರರಿಗೆ ಸೂಚಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರ ಹಾಗೂ ವಕೀಲ ಅನೂಪ್ ಪ್ರಕಾಶ್ ಅವಸ್ಥಿ,'ಈ ವಿಚಾರವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಜಾತಿ, ಪ್ರದೇಶ ಮತ್ತು ಜನಾಂಗದ ಆಧಾರದಲ್ಲಿ ಸಂತ್ರಸ್ತರನ್ನು ಗುರುತಿಸುವುದನ್ನು ತಡೆಯುವುದಕ್ಕೆ ಸೂಕ್ತ ವ್ಯವಸ್ಥೆ ರೂಪಿಸಲು ಸಂಸದರು ಒಲವು ತೋರಲಿಲ್ಲ' ಎಂದು ಪೀಠಕ್ಕೆ ತಿಳಿಸಿದರು.
'ಸಂತ್ರಸ್ತರ ಗುರುತಿನ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ತಡೆಯಲು ಹಾಗೂ ಈ ಕುರಿತ ದೂರುಗಳನ್ನು ನಿವಾರಿಸುವ ಸಂಬಂಧ ಎಲ್ಲ ರಾಜ್ಯಗಳಲ್ಲಿ ನೋಡಲ್ ಏಜೆನ್ಸಿ ಸ್ಥಾಪಿಸುವಂತೆ ನಿರ್ದೇಶನ ನೀಡಬೇಕು' ಎಂದು ಅವಸ್ಥಿ ಅವರು ಪೀಠಕ್ಕೆ ಮನವಿ ಮಾಡಿದರು.
'ಇಂತಹ ಏಜೆನ್ಸಿ ಅಥವಾ ವ್ಯವಸ್ಥೆಯನ್ನು ಸ್ಥಾಪಿಸುವುದು ಪರಿಹಾರವಾಗದು. ಪ್ರಾದೇಶಿಕ ಗುರುತಿನ ಆಧಾರದ ಮೇಲೆ ಮತ್ತಷ್ಟು ತಾರತಮ್ಯಗಳಿಗೆ ಇದು ದಾರಿ ಮಾಡಿಕೊಡಲಿದೆ. ಯಾವುದೇ ಅಪರಾಧ ಕೃತ್ಯವಿರಲಿ, ಅದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು' ಎಂದು ಪೀಠ ಹೇಳಿತು.
'ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ತಮ್ಮ ಅಹವಾಲನ್ನು ಅಟಾರ್ನಿ ಜನರಲ್ ಅವರಿಗೆ ಸಲ್ಲಿಸುವುದಕ್ಕೆ ಅರ್ಜಿದಾರರು ಸ್ವತಂತ್ರರು' ಎಂದು ಹೇಳಿದ ಪೀಠ, ಅರ್ಜಿಯನ್ನು ವಿಲೇವಾರಿ ಮಾಡಿತು.

