HEALTH TIPS

Union Budget 2026: ಅನ್ನದಾತರ ಆದಾಯ ಹೆಚ್ಚಿಸಲು ಕಸರತ್ತು

ನವದೆಹಲಿ: ಸಾಂಪ್ರದಾಯಿಕ ಬೆಳೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಉತ್ತೇಜನ ನೀಡುವ ಯೋಜನೆಗಳ ಮೂಲಕ ಅನ್ನದಾತರ ಆದಾಯ ಹೆಚ್ಚಿಸುವ ಆಶಯವನ್ನು ಈ ಬಾರಿಯ ಬಜೆಟ್‌ ಒಳಗೊಂಡಿದೆ.

ಕೃಷಿ ಕ್ಷೇತ್ರದಲ್ಲಿ ಬಹು ಆಯಾಮದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ.

ಅನ್ನದಾತರ ನಿರೀಕ್ಷೆಗಳ ಭಾರ ಕಡಿಮೆಗೊಳಿಸುವ ಪ್ರಯತ್ನ ಕೈಗೊಂಡಿದ್ದರೂ ಕೃಷಿ ವಲಯ ನಿರಂತರವಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ಪತ ಪರಿಹಾರದ ಮಾರ್ಗ ತೋರಿಸಿಲ್ಲ ಎನ್ನುವುದು ತಜ್ಞರ ವಿಶ್ಲೇಷಣೆ.

ಕೃಷಿ ಮತ್ತು ಸಂಬಂಧಿತ ವಲಯಕ್ಕೆ ಈ ಬಾರಿ ₹1.62 ಲಕ್ಷ ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ 7.12ರಷ್ಟು ಹೆಚ್ಚಳವಾಗಿದೆ. 2025-26ರಲ್ಲಿ 1.51 ಲಕ್ಷ ಕೋಟಿ ನಿಗದಿಪಡಿಸಲಾಗಿತ್ತು.

ಶ್ರೀಗಂಧ ಮತ್ತು ತೆಂಗು ಬೆಳೆಗೆ ಉತ್ತೇಜನ, ಕೃತಕ ಬುದ್ಧಿಮತೆ ಬಳಕೆಗೆ ಆದ್ಯತೆ ನೀಡುವುದನ್ನು ಸಹ ಪ್ರಸ್ತಾಪಿಸಲಾಗಿದೆ. ಜತೆಗೆ, ಕೃಷಿಕರನ್ನು ಉದ್ಯಮಶೀಲರನ್ನಾಗಿ ಪರಿವರ್ತಿಸುವ ಅಂಶಗಳನ್ನು ಉಲ್ಲೇಖಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗಮನದಲ್ಲಿರಿಸಿಕೊಂಡು ಈ ಅಂಶಗಳನ್ನು ಪ್ರಸ್ತಾಪಿಸಲಾಗಿದೆ.

ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪಶು ಸಂಗೋಪನಾ ವಲಯದಲ್ಲಿ ಉದ್ಯಮಶೀಲತೆ ಅಭಿವೃದ್ಧಿಗೆ ಬೆಂಬಲ ನೀಡುವುದಾಗಿ ಘೋಷಿಸಲಾಗಿದೆ.

ಸಾಲ ಆಧಾರಿತ ಸಬ್ಸಿಡಿ ಯೋಜನೆ, ಜಾನುವಾರುಗಳ ಸಾಕಾಣಿಕೆಗೆ ಆಧುನಿಕತೆಯ ಸ್ಪರ್ಶ, ಜಾನುವಾರುಗಳು, ಡೇರಿ ಮತ್ತು ಪೌಲ್ಟ್ರಿ ವಲಯವನ್ನು ಗಮನದಲ್ಲಿರಿಸಿಕೊಂಡು ಸರಪಳಿಯ ರೀತಿಯ ವ್ಯವಸ್ಥೆಯನ್ನು ರೂಪಿಸುವುದು ಹಾಗೂ ಜಾನುವಾರು ಕೃಷಿಕರ ಉತ್ಪಾದಕರ ಸಂಘಟನೆಗಳನ್ನು ಆರಂಭಿಸುವ ಮೂಲಕ ಈ ವಲಯಕ್ಕೆ ಹೊಸ ಸ್ಪರ್ಶ ನೀಡುವುದನ್ನು ಉಲ್ಲೇಖಿಸಲಾಗಿದೆ.

ತೆಂಗು, ಶ್ರೀಗಂಧ, ಕೊಕ್ಕೋ ಮತ್ತು ಗೊಡಂಬಿಗೆ ಉತ್ತೇಜನ ಮತ್ತು ಈಶಾನ್ಯ ರಾಜ್ಯಗಳಲ್ಲಿ 'ಅಗರ್‌' ಮರಗಳು, ಅಲ್ಮಂಡ್ಸ್‌, ವಾಲ್ನಟ್ಸ್‌ಗಳಿಗೂ ಬೆಂಬಲ ನೀಡುವುದಾಗಿ ತಿಳಿಸಲಾಗಿದೆ.

ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ತೆಂಗು ಬೆಳೆಯುವ ರಾಷ್ಟ್ರ. ಒಂದು ಕೋಟಿ ರೈತರು ಸೇರಿದಂತೆ ಸುಮಾರು ಮೂರು ಕೋಟಿ ಮಂದಿ ತೆಂಗು ಬೆಳೆ ಮೇಲೆ ಅವಲಂಬಿತರಾಗಿದ್ದಾರೆ. ತೆಂಗು ಉತ್ಪಾದನೆ ವಲಯದಲ್ಲಿ ಸ್ಪರ್ಧೆ ಹೆಚ್ಚಿಸುವ ಉದ್ದೇಶದಿಂದ ತೆಂಗು ಉತ್ತೇಜನ ಯೋಜನೆಯನ್ನು ಘೋಷಿಸಲಾಗಿದೆ. ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯಗಳಲ್ಲಿ ಹಳೆಯ ತೆಂಗಿನ ಗಿಡಗಳನ್ನು ಬದಲು ಹೊಸ ಸಸಿಗಳು ಅಥವಾ ಉತ್ತಮ ತಳಿಗಳನ್ನು ನೆಡುವುದು ಈ ಯೋಜನೆಯ ಆಶಯವಾಗಿದೆ. ಈ ಮೂಲಕ ಉತ್ಪಾದನೆ ಹೆಚ್ಚಿಸುವುದು ಮತ್ತು ಮೌಲ್ಯವರ್ಧನೆ ಹೆಚ್ಚಿಸುವ ಉದ್ದೇಶವನ್ನು ಹೊಂದಲಾಗಿದೆ.

ಗೊಡಂಬಿ ಮತ್ತು ಕೊಕ್ಕೋ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಸ್ವಾವಲಂಬನೆ ಸಾಧಿಸಿ ರಫ್ತಿಗೆ ಉತ್ತೇಜನ ನೀಡಲಾಗುವುದು. ಈ ಮೂಲಕ 2030ರ ವೇಳೆಗೆ ಈ ಉತ್ಪನ್ನಗಳನ್ನು ಜಾಗತಿಕ ಪ್ರಿಮಿಯಂ ಬ್ರ್ಯಾಂಡ್‌ಗಳನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ.

ವಾಲ್ನಟ್ಸ್‌, ಆಲ್ಮಂಡ್ಸ್‌ ಮತ್ತು ಪೈನ್‌ನಟ್ಸ್‌ಗಳ ಬೆಳೆಯಲು ಪ್ರತ್ಯೇಕವಾದ ವಿಶೇಷ ಯೋಜನೆಗಳನ್ನು ಕೈಗೊಂಡು ರೈತರ ಆದಾಯ ಹೆಚ್ಚಿಸಲಾಗುವುದು. ಈ ಯೋಜನೆಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು ಎಂದು ಘೋಷಿಸಲಾಗಿದೆ.

ಕೃಷಿಗೆ ಎಐ: ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಮತ್ತಷ್ಟು ಹೆಚ್ಚಿಸಲು ಕೃತಕ ಬುದ್ಧಿಮತ್ತೆ (ಎಐ) ಸಾಧನ ಬಳಸಿಕೊಳ್ಳುವಂತೆ ಪ್ರೋತ್ಸಾಹಿಸುವ ಕ್ರಮಗಳನ್ನು ಘೋಷಿಸಲಾಗಿದೆ.

ಕೃಷಿಕರ ಸಹಾಯ- ಸಲಹೆಗಾಗಿ 'ಭಾರತ್ ವಿಸ್ತಾರ್' (ವರ್ಚುವಲ್‌ ಇಂಟಿಗ್ರೇಟೆಡ್ ಸಿಸ್ಟಮ್ ಟು ಆಕ್ಸೆಸ್ ಅಗ್ರಿಕಲ್ಚರಲ್ ರಿಸೋರ್ಸಸ್) ಎಂಬ ಬಹುಭಾಷಾ ಎಐ ಸಾಧನ ಪರಿಚಯಿಸುವುದಾಗಿ ತಿಳಿಸಿದೆ.

ರೈತರು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಮತ್ತು ಸಲಹೆಗಳನ್ನು ಕೈಗೊಳ್ಳಲು ಇದರಿಂದ ಅನುಕೂಲವಾಗಲಿದೆ. ಇದು ಕೃಷಿ-ಸ್ಟ್ಯಾಕ್ ಪೋರ್ಟಲ್ ಮತ್ತು ಐಸಿಎಆರ್‌ ಅನುಮೋದಿತ ಕೃಷಿ ಪದ್ಧತಿಗಳನ್ನು ಎಐ ವ್ಯವಸ್ಥೆಗಳೊಂದಿಗೆ ಸಂಯೋಜಿಸುತ್ತದೆ. ರೈತರಿಗೆ ಒಂದೇ ಕಡೆ ವಿಶ್ವಾಸಾರ್ಹ, ವೈಜ್ಞಾನಿಕ ಸಲಹೆಯನ್ನು ಒದಗಿಸುವುದು ಇದರ ಗುರಿಯಾಗಿದೆ. ಇದು ಡೇಟಾ ಮತ್ತು ಸಂಶೋಧನೆಯ ಆಧಾರದ ಮೇಲೆ ಕೃಷಿ ಚಟುವಟಿಕೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ಕೃಷಿ ಚಟುವಟಿಕೆಗಳಲ್ಲಿನ ನಷ್ಟವನ್ನು ಕಡಿಮೆ ಮಾಡುವುದು ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಸರಿಯಾದ ಸಮಯದಲ್ಲಿ ನಿಖರವಾದ ಮಾಹಿತಿಯನ್ನು ಒದಗಿಸುವುದು, ವೆಚ್ಚಗಳನ್ನು ನಿಯಂತ್ರಿಸಲು ಮತ್ತು ಉತ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

500 ಜಲಾಶಯಗಳು ಮತ್ತು ಅಮೃತ ಸರೋವರಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಮೀನುಗಾರಿಕೆಗೆ ಉತ್ತೇಜನ ನೀಡುವ ಕ್ರಮಗಳನ್ನು ಸಹ ಪ್ರಸ್ತಾಪಿಸಲಾಗಿದೆ.

ಬಜೆಟ್‌ನಲ್ಲಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಬಗ್ಗೆ ಪ್ರಸ್ತಾಪಿಸಿಲ್ಲ. ಅತಿವೃಷ್ಟಿ, ಮಳೆ ಹಾನಿ ಪರಿಹಾರ ನೀಡುವಾಗ ಎನ್‌ಡಿಆರ್‌ಎಫ್‌ ಮಾನದಂಡವನ್ನು ವೈಜ್ಞಾನಿಕವಾಗಿ ಬದಲಾಯಿಸಬೇಕು ಎನ್ನುವ ರೈತರ ಕೂಗಿನ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries