HEALTH TIPS

World Radio Day 2026 ರೇಡಿಯೋ, ಶ್ರವಣೇಂದ್ರಿಯ ಮಾಧ್ಯಮಕ್ಕೆ ಎಐ ಸವಾಲು! ಭಾವನಾತ್ಮಕ ಸಂಪರ್ಕಕ್ಕೆ ನಿರೂಪಕನೇ ಬೆಸ್ಟ್‌

ವಿಶ್ವ ಬಾನುಲಿ ದಿನಾಚರಣೆಯನ್ನು ಫೆಬ್ರವರಿ 13ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ರೇಡಿಯೋ ಮಾಧ್ಯಮದ ಮಹತ್ವ ಹಾಗೂ ಬದಲಾಗುತ್ತಿರುವ ಬಾನುಲಿ ತಂತ್ರಜ್ಞಾನಗಳನ್ನು ಕೇಳುಗರಿಗೆ ತಿಳಿಸುವ ಉದ್ದೇಶಗಳನ್ನು ಈ ದಿನಾಚರಣೆ ಹೊಂದಿದೆ. ಈ ದಿನದಂದೇ ವಿಶ್ವಸಂಸ್ಥೆಯು 1946ರಲ್ಲಿ ತನ್ನ ಬಾನುಲಿ ಕೇಂದ್ರವನ್ನು ತೆರೆಯಿತು.

ಅದರ ನೆನಪಿಗೆ ವಿಶ್ವ ಬಾನುಲಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷದ ಅಧಿಕೃತ ಘೋಷವಾಕ್ಯ 'ಕೃತಕ ಬುದ್ಧಿಮತ್ತೆ ಒಂದು ಸಾಧನ, ಧ್ವನಿಯಲ್ಲ' ಎಂಬ ಚಿಂತನದ ಸುತ್ತ ಕೇಂದ್ರೀಕೃತವಾಗಿದೆ. ನೈತಿಕ ಬಳಕೆ ಮತ್ತು ಮಾನವ ಸಂಪರ್ಕವನ್ನು ಒತ್ತಿಹೇಳುವಾಗ ರೇಡಿಯೋ ಕಾರ್ಯಕ್ರಮಗಳ ನಿರ್ಮಾಣ, ವಿತರಣೆ ಮತ್ತು ಸಂಪಾದಕೀಯ ಅಭ್ಯಾಸಗಳನ್ನು ಹೇಗೆ ಮರುರೂಪಗೊಳ್ಳಲಿವೆ ಎಂಬುದನ್ನು ವಿಶ್ಲೇಷಿಸಲು, ಯುನೆಸ್ಕೋ ಈ ವರ್ಷವನ್ನು ಮೀಸಲಿಟ್ಟಿದೆ.

ಏಕಕಾಲದಲ್ಲಿ ಅತಿ ಹೆಚ್ಚು ಶ್ರೋತೃಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ತಲುಪುವ ಮಾಧ್ಯಮವಾಗಿ ರೇಡಿಯೋ ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಮಾಹಿತಿ ಮತ್ತು ಮನರಂಜನೆಯ ಜತೆಗೆ ಅಭಿವೃದ್ಧಿ ಕಾರ್ಯಗಳಲ್ಲಿ ಜನತೆಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಬಾನುಲಿ ಸದಾ ಶ್ರಮಿಸುತ್ತಿದೆ. ವಿವಿಧ ಭೂಪ್ರದೇಶಗಳಲ್ಲಿ ಹರಡಿರುವ ಜನರನ್ನು ಒಗ್ಗೂಡಿಸುವಲ್ಲಿ ಈ ಮಾಧ್ಯಮ ಬಹಳ ಪರಿಣಾಮಕಾರಿಯಾಗಿದೆ. ಈ ದಿನದಂದು ಬಾನುಲಿ ಮಾಧ್ಯಮದ ಸಾಧನೆಗಳನ್ನು ಉದಾಹರಣೆಗಳ ಸಹಿತ ಶೋತೃಗಳಿಗೆ ಪರಿಚಯಿಸಲಾಗುತ್ತದೆ. ಇದಲ್ಲದೆ ಬಾನುಲಿಯ ಭವಿಷ್ಯದ ಸಾಮರ್ಥ್ಯವನ್ನು ಆಚರಿಸಲು ಈ ದಿನಾಚರಣೆಯು ಒಂದು ಅನನ್ಯ ವೇದಿಕೆಯನ್ನು ಒದಗಿಸುತ್ತದೆ. ಸಮಾಜದಲ್ಲಿ ಏಕತೆಯ ಮಹತ್ವ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯಗಳಿಗಾಗಿ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ಶೋತೃಗಳಿಗೆ ಮರುನೆನಪಿಸಲಾಗುವುದು.

ಈ ವರ್ಷದ ಮುಖ್ಯ ಚರ್ಚೆಯ ವಿಷಯವಾದ 'ರೇಡಿಯೋ ಮತ್ತು ಕೃತಕ ಬುದ್ಧಿಮತ್ತೆ'ಯನ್ನು ಕುರಿತಂತೆ ಪ್ರಮುಖ ವಿಷಯಗಳನ್ನು ಚರ್ಚಿಸಲಾಗುವುದು. ಬಹುತೇಕ ಎಲ್ಲ ಸಮೂಹ ಮಾಧ್ಯಮಗಳಲ್ಲಿ ಕೃತಕ ಬುದ್ಧಿಮತ್ತೆ ಹಾಸುಹೊಕ್ಕಾಗಿ ಮಿಳಿತವಾಗುತ್ತಿದೆ. ಸುದ್ದಿಯನ್ನು ಅತಿವೇಗವಾಗಿ ಸಂಗ್ರಹಿಸಿ ಓದುಗರಿಗೆ ತಲುಪಿಸುವ ಕ್ಷಮತೆಯನ್ನು ಕೃ.ಬು. (ಕೃತಕ ಬುದ್ಧಿಮತ್ತೆ) ಹೊಂದಿದೆ. ಸಾವಿರ ಪದಗಳ ಲೇಖನವನ್ನು ನೂರು ಪದಗಳಿಗೆ ಇಳಿಸಬಲ್ಲದು. ತಲೆಬರಹ ನೀಡಬಲ್ಲದು. ನೀವು ಸೂಚಿಸಿದ ವಿಷಯಗಳ ಬಗ್ಗೆ ಸರಳ ಲೇಖನ ಬರೆಯಬಲ್ಲದು. ಸಿನಿಮಾಗಳಲ್ಲಿ ಕೃತಕವಾಗಿ ಪಾತ್ರಗಳನ್ನು ಸೃಷ್ಟಿಸಬಲ್ಲದು. ನೀವು ಸೂಚಿಸಿದಂತೆ ಅದಕ್ಕೆ ವೇಷಭೂಷಣಗಳನ್ನು ಬದಲಿಸಬಲ್ಲದು. ಸಂಭಾಷಣೆಗಳನ್ನು ಬರೆಯಬಲ್ಲದು. ಇದೇ ರೀತಿ ಕೃತಕವಾಗಿ ಧ್ವನಿಗಳನ್ನು ಸೃಷ್ಟಿಸಿ ಸುದ್ದಿಯನ್ನು ಓದಬಲ್ಲದು. ನೀವು ಬರೆದುಕೊಟ್ಟಂತೆ ಚರ್ಚೆಗಳನ್ನು ನಡೆಸಲು ಇಂದು ಸಾಧ್ಯ. ಕೇಳುಗರ ಆಸೆಗಳನ್ನು ಅನುಸರಿಸಿ ಹಾಡುಗಳನ್ನು ಪ್ರಸಾರ ಮಾಡಲು ಸಾಧ್ಯ. ಇತರೆ ಮಾಧ್ಯಮಗಳಲ್ಲಿ ಆಗುತ್ತಿರುವ ಬದಲಾವಣೆಗಳಂತೆ, ಬಾನುಲಿ ಕಾರ್ಯಕ್ರಮಗಳನ್ನು ಸಹ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳನ್ನು ಆಧರಿಸಿ ಪ್ರಸಾರಿಸಲು ಸಾಧ್ಯತೆಗಳಿವೆ. ವಿದೇಶಗಳಲ್ಲಿ ಅನೇಕ ರೇಡಿಯೋ ಕೇಂದ್ರಗಳು ಈ ಕೃ.ಬು.(AI) ತಂತ್ರಜ್ಞಾನಗಳನ್ನು ಬಳಸುತ್ತಿವೆ.

ಡಿಜಿಟಲ್ ತಂತ್ರಜ್ಞಾನ, ಅಂತರ್ಜಾಲ ಮತ್ತು ಸಂವಹನ ಉಪಗ್ರಹಗಳ ನೆರವಿನಿಂದಾಗಿ ಎಲ್ಲ ಸಮೂಹ ಮಾಧ್ಯಮಗಳು ರೂಪಾಂತರಗೊಳ್ಳುತ್ತಿವೆ. ಈ ಬೆಳವಣಿಗೆಗಳು ಬಾನುಲಿ ಮಾಧ್ಯಮದ ಮೇಲೆ ಮಹತ್ತರ ಪರಿಣಾಮಗಳನ್ನು ಬೀರಿವೆ. ಧ್ವನಿಗ್ರಹಣ ಹಾಗು ಧ್ವನಿ ಸಂಕಲನಕ್ಕಾಗಿ ಡಿಜಿಟಲ್ ತಂತ್ರಜ್ಞಾನ ಆಧಾರಿತ ಆಯಪ್‌ಗಳನ್ನು ಬಳಸಲಾಗುತ್ತಿದೆ. ಅಂತರ್ಜಾಲದ ಬೆಳವಣಿಗೆಯಿಂದಾಗಿ ವಿಶ್ವದ ಯಾವುದೇ ಭಾಗದಲ್ಲಿರುವ ಬಾನುಲಿ ಕೇಂದ್ರಗಳ ಕಾರ್ಯಕ್ರಮಗಳನ್ನು ಕುಳಿತಲ್ಲಿಯೇ ಆಲಿಸಬಹುದಾಗಿದೆ. ಅಂತರ್ಜಾಲದ ಅನುಕೂಲತೆ ಇದ್ದರೆ ಭಾರತ ದೇಶದ ಯಾವುದೇ ಭಾಗದಲ್ಲಿದ್ದರೂ ಕನ್ನಡ ರೇಡಿಯೋ ಕಾರ್ಯಕ್ರಮಗಳನ್ನು ಇಂದು ಆಲಿಸಬಹುದು. ಅಂತರ್ಜಾಲದ ಮೂಲಕ ವಿಶ್ವದ ಯಾವುದೇ ಭಾಗದಲ್ಲಿದ್ದರೂ ಸಹ ಯಾವುದೇ ಬಾನುಲಿ ಕೇಂದ್ರದ ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ. ಕೃ.ಬು. ನಿಮ್ಮ ರೇಡಿಯೋ ಸೆಟ್‌ಗಳನ್ನು ಸ್ಮಾರ್ಟ್ ರೇಡಿಯೊಗಳನ್ನಾಗಿ ಬದಲಾಯಿಸಿವೆ. ಸ್ಮಾರ್ಟ್ ಫೋನ್, ಟ್ಯಾಬ್, ಕಂಪ್ಯೂಟರ್ ಇಲ್ಲವೇ ನಿಮ್ಮ ಟಿವಿ ಮೂಲಕ ಬಾನುಲಿ ಕಾರ್ಯಕ್ರಮಗಳನ್ನು ಸಹ ಅತ್ಯುತ್ತಮ ಧ್ವನಿಯಲ್ಲಿ ಆಲಿಸಬಹುದಾಗಿದೆ. ಕೇಳುಗರಿಗೆ ಹೆಚ್ಚು ವೈಯಕ್ತಿಕ ಮತ್ತು ಆಕರ್ಷಕ ಅನುಭವಗಳನ್ನು ಇವು ನೀಡುತ್ತಿವೆ.

ಕೃ.ಬು. ತಾಂತ್ರಿಕ ಸಹಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಬಾನುಲಿ ನಿರೂಪಕರಾಗಿಯೂ ಹೊರಹೊಮ್ಮುತ್ತಿದೆ. ಸಂಶ್ಲೇಷಿತ ಧ್ವನಿಗಳು (Synthetic Voices) ಮತ್ತು ಕೃ.ಬು ಡಿಜೆಗಳು ದಿನದ ೨೪ ಗಂಟೆಯೂ ಸತತವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ಶಕ್ತಿಯನ್ನು ಹೊಂದಿವೆ. ಮನುಷ್ಯರಂತೆಯೇ ಕೇಳಿಸುವ ಧ್ವನಿಗಳನ್ನು ಸೃಷ್ಟಿಸಿ, ನಿರೂಪಕರು ಇಲ್ಲದ ಸಮಯದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಇವು ನೆರವಾಗುತ್ತವೆ. ಪ್ರತಿಯೊಬ್ಬ ಕೇಳುಗನ ಇಚ್ಛೆಗಳು ವಿಭಿನ್ನವಾಗಿರುತ್ತವೆ. ಕೃ.ಬು. ಅಲ್ಗಾರಿದಮ್‌ಗಳು ಕೇಳುಗರ ಅಭ್ಯಾಸಗಳನ್ನು ವಿಶ್ಲೇಷಿಸಿ, ಅವರಿಗೆ ಇಷ್ಟವಾಗುವ ಹಾಡುಗಳು ಮತ್ತು ಸುದ್ದಿಗಳನ್ನೇ ಪ್ರಸಾರ ಮಾಡುವ ಸಾಮರ್ಥ್ಯ ಹೊಂದಿವೆ. ಬಾನುಲಿ ಕಾರ್ಯಕ್ರಮಗಳ ನಿರ್ಮಾಣ ಈಗ ಬಹು ಸುಲಭವಾಗುತ್ತಿದೆ. ರೇಡಿಯೋ ಯಂತ್ರಾಂಶಗಳ ಮೂಲಕ ಹಿನ್ನೆಲೆ ಗದ್ದಲವನ್ನು ತೆಗೆಯಬಹುದು. ಕಾರ್ಯಕ್ರಮ ವಿವರಣೆಗಳನ್ನು ಮತ್ತು ಸುದ್ದಿಗಳ ಸಾರಾಂಶವನ್ನು ಕ್ಷಣಮಾತ್ರದಲ್ಲಿ ಸಿದ್ಧಪಡಿಸಬಹುದು. ಇದರಿಂದಾಗಿ ಮಾನವ ಸಂಪನ್ಮೂಲದ ಕಡಿಮೆ ಬಳಕೆ ಸಾಧ್ಯ. ಕೃ.ಬು. ನೆರವಿನಿಂದ ಶೋತೃಗಳ ಬೇಕುಬೇಡಗಳನ್ನು ನಿರ್ಧರಿಸುವುದು ಸುಲಭವಾಗುತ್ತದೆ. ಇದು ಜಾಹೀರಾತುದಾರರಿಗೆ ಸಹಾಯವಾಗುತ್ತದೆ. ಕೇಳುಗರು ಎಲ್ಲಿದ್ದಾರೆ ಮತ್ತು ಅವರು ಏನನ್ನು ಇಷ್ಟಪಡುತ್ತಾರೆ ಎಂಬ ಮಾಹಿತಿಯ ಆಧಾರದ ಮೇಲೆ ಅವರಿಗೆ ನೇರವಾಗಿ ಸಂಬಂಧಿಸಿದ ಜಾಹೀರಾತುಗಳನ್ನು ಪ್ರಸಾರ ಮಾಡಬಹುದು. ಇದರಿಂದ ರೇಡಿಯೋ ಕೇಂದ್ರಗಳಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಕ್ಷಣ ಮಾತ್ರದಲ್ಲಿ ಈಗಿನ ಯಂತ್ರಾಂಶಗಳು. ಭಾಷಾಂತರ ಮಾಡಬಲ್ಲವು. ಇದರಿಂದ ರೇಡಿಯೋ ಕಾರ್ಯಕ್ರಮಗಳು ಹೆಚ್ಚಿನ ಕೇಳುಗರನ್ನು ತಲುಪಬಹುದು.

ಕೃ.ಬು. ನೈಜ ಸಮಯದಲ್ಲಿ ಭಾಷಾಂತರ ಮತ್ತು ಡಬ್ಬಿಂಗ್ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ, ಒಂದು ಪ್ರದೇಶದ ರೇಡಿಯೋ ಕಾರ್ಯಕ್ರಮವನ್ನು ಪ್ರಪಂಚದ ಯಾವುದೇ ಭಾಷೆಯ ಕೇಳುಗರು ಆನಂದಿಸಲು ಸಾಧ್ಯವಾಗುತ್ತದೆ. ಕನ್ನಡದ ಒಂದು ರೇಡಿಯೋ ಕಾರ್ಯಕ್ರಮವನ್ನು ಯಾವುದೇ ಭಾಷೆಗೆ ಡಬ್ ಮಾಡಿ ಕೇಳುಗರಿಗೆ ನೀಡಬಹುದಾಗಿದೆ. ತಂತ್ರಜ್ಞಾನದ ಈ ಬೆಳವಣಿಗೆಯು ಅನೇಕ ಅನುಕೂಲಗಳನ್ನು ತಂದರೂ, ಮನುಷ್ಯರ ಉದ್ಯೋಗಾವಕಾಶಗಳ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಅನೇಕ ಆತಂಕಗಳಿವೆ. ರೇಡಿಯೋ ಸೇರಿದಂತೆ, ಯಾವುದೇ ಮಾಧ್ಯಮದ ನೇರ ಪ್ರಸಾರದಲ್ಲಿ ಮಾನವೀಯ ಸ್ಪರ್ಶ ಮತ್ತು ಭಾವನಾತ್ಮಕ ಸಂಬಂಧಗಳನ್ನು ಬೆಸೆಯಲು ಯಂತ್ರಗಳು ಖಂಡಿತ ನೆರವಾಗಲಾರವು. ಭವಿಷ್ಯದ ರೇಡಿಯೋ ಕೇವಲ ಧ್ವನಿ ಪ್ರಸಾರ ಮಾಡುವ ಪೆಟ್ಟಿಗೆಯಾಗಿ ಉಳಿಯದೆ, ಕೃ.ಬು ಮತ್ತು ಮನುಷ್ಯರ ಸೃಜನಶೀಲತೆಯ ಸಂಗಮವಾಗಿ ಖಂಡಿತ ಮುಂದುವರಿಯಲಿವೆ. ಕೇವಲ ಯಂತ್ರಗಳ ನೆರವಿನಿಂದ ಪ್ರಸಾರವಾಗುವ ಕಾರ್ಯಕ್ರಮಗಳು ಕೇಳುಗರೊಡನೆ ಭಾವನಾತ್ಮಕ ಸಂಬಂಧಗಳನ್ನು ಬೆಸೆಯಲಾರವು.

ರೋಬೋಟ್‌ಗಳು ತಾಂತ್ರಿಕವಾಗಿ ಅನೇಕ ಕೆಲಸಗಳನ್ನು ನಿರ್ವಹಿಸಬಲ್ಲವು. ಆದರೆ ಜವಾಬ್ದಾರಿಯುತ ಬಳಕೆಯು ಮಾನವ ಸೃಜನಶೀಲತೆಯನ್ನು ಹೇಗೆ ಬೆಂಬಲಿಸುತ್ತದೆ ಎನ್ನುವುದು ಬಹು ಮುಖ್ಯವಾಗುತ್ತದೆ. ತಂತ್ರಜ್ಞಾನವು ಹೊಸತನವನ್ನು ನೀಡಬಹುದಾದರೂ, ಅದು ತನ್ನದೇ ಆದ ವಿಶ್ವಾಸರ್ಹತೆಯನ್ನು ಬೆಳೆಸಲು ಸಾಧ್ಯವಿಲ್ಲ. ಆದರೆ ತಪ್ಪು ಮಾಹಿತಿಯು ತ್ವರಿತವಾಗಿ ಹರಡುವ ಇಂದಿನ ದಿನಗಳಲ್ಲಿ ಸುದ್ದಿ ಪ್ರಸಾರವಾಗುವ ಮೊದಲು ಸತ್ಯಗಳನ್ನು ಪರಿಶೀಲಿಸಲು ಕೃ.ಬು. ನೆರವಾಗಬಲ್ಲದು. ಸುಳ್ಳು ಮಾಹಿತಿಯನ್ನು ಪತ್ತೆಹಚ್ಚುವ ಮೂಲಕ ಇದು ಪತ್ರಕರ್ತರಿಗೆ ಸಹಾಯ ಮಾಡಬಲ್ಲದು.

ಇತಿಹಾಸದಲ್ಲಿ ಘಟಿಸಿದ ಅತ್ಯುತ್ತಮ ಮಾಹಿತಿಗಳನ್ನು ರೇಡಿಯೋ ಕೇಂದ್ರಗಳು ಹೊಂದಿವೆ. ಸಾವಿರಾರು ಗಂಟೆಗಳ ಸಂದರ್ಶನಗಳು, ಸಂಗೀತ ಮತ್ತು ಸುದ್ದಿ ವರದಿಗಳ ಹಳೆಯ ಟೇಪುಗಳನ್ನು ಡಿಜಿಟಲ್ ಮಾದ್ಯಮದಲ್ಲಿ ಪರಿವರ್ತಿಸಿ ಕೇಳುಗರಿಗೆ ಒದಗಿಸಬಲ್ಲವು. ಇವು ಸುಪ್ತ ನೆನಪುಗಳಿಗೆ ಹೊಸ ಜೀವ ತುಂಬಬಲ್ಲವು. ಈ ನಿಟ್ಟಿನಲ್ಲಿ ಧಾರವಾಡದ ಆಕಾಶವಾಣಿ ಕೇಂದ್ರವು ತನ್ನ ಸಂಗ್ರಹದಲ್ಲಿರುವ ಬಹುಪಾಲು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಡಿಜಲೀಕರಣ ಮಾಡಿರುವುದು ಅಭಿನಂದನೀಯ.

ರೇಡಿಯೋ ಉಚಿತವಾಗಿ ದೊರೆಯುವ ಮಾಧ್ಯಮ. ವಾರ್ಷಿಕ ಇಲ್ಲವೇ ಮಾಸಿಕ ಚಂದಾದಾರಿಕೆಯಿಲ್ಲ. ಹೈ-ಸ್ಪೀಡ್ ಡೇಟಾ ಪ್ಲಾನ್ ಬೇಕಿಲ್ಲ. ಅಭಿವೃದ್ಧಿಶೀಲ ಪ್ರದೇಶಗಳಲ್ಲಿನ ಜನರಿಗೆ ಅಥವಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವವರಿಗೆ ಶಿಕ್ಷಣ ಮತ್ತು ಮನರಂಜನೆಯ ಪ್ರಮುಖ ಮೂಲವಾಗಿದೆ. ಇದು ಬಹುತೇಕ ಎಲ್ಲರಿಗೂ ಲಭ್ಯವಿರುವುದರಿಂದ ಅತ್ಯಂತ ಪ್ರಜಾಪ್ರಭುತ್ವ ಮಾದರಿಯ ಮಾಧ್ಯಮವಾಗಿದೆ. ಇಂದು ದೇಶದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ರೇಡಿಯೋ ಆಲಿಸಬಹುದು. ೧೫೧೦ ಬಾನುಲಿ ಕೇಂದ್ರಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸಾರಿಸುತ್ತಿವೆ. ಪ್ರಸಾರ ಭಾರತಿ ಉಸ್ತುವಾರಿಯ ೫೯೧ ಸರ್ಕಾರಿ ಬಾನುಲಿ ಕೇಂದ್ರಗಳು ತಮ್ಮ ಕಾರ್ಯಕ್ರಮಗಳನ್ನು ಪ್ರಸಾರಿಸಿದರೆ, ಖಾಸಗಿ ಮಾಲೀಕತ್ವದಲ್ಲಿ ೩೮೮ ಎಫ್.ಎಂ. ಬಾನುಲಿ ಕೇಂದ್ರಗಳು ಭರಪೂರ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರಿಸುತ್ತಿವೆ. ಸಮುದಾಯ ಮತ್ತು ಶೈಕ್ಷಣಿಕ ಪ್ರಸಾರಕ್ಕಾಗಿ ೫೩೧ ಕೇಂದ್ರಗಳು ಮೀಸಲಾಗಿದ್ದು, ಇವುಗಳನ್ನು ಪ್ರಮುಖ ವಿದ್ಯಾಸಂಸ್ಥೆಗಳು ಮತ್ತು ಸಮುದಾಯ ಕೇಂದ್ರಿತ ಸಂಸ್ಥೆಗಳು ನಡೆಸುತ್ತಿವೆ. ಇಂತಹ ಬೃಹತ್ ಪ್ರಸಾರಜಾಲದ ಜತೆಗೆ ಅನೇಕರು ಪಾಡ್ ಕಾಸ್ಟ್ ಪ್ರಸಾರದ ಮೂಲಕ ಕೇಳುಗರಿಗೆ ವಿಶೇಷ ಕಾರ್ಯಕ್ರಮಗಳನ್ನು ತಲುಪಿಸುತ್ತಿದ್ದಾರೆ. ಶತಮಾನಕ್ಕೂ ಮಿಕ್ಕ ಇತಿಹಾಸ ಹೊಂದಿರುವ ಬಾನುಲಿ ಪ್ರಸಾರ, ಇತ್ತೀಚಿನ ತಂತ್ರಜ್ಞಾನ ಬೆಳವಣಿಗೆಯ ಹಿನ್ನೆಲೆಯಲ್ಲಿ ನಿರ್ಣಾಯಕ ಘಟ್ಟದಲ್ಲಿದೆ. ಮಾನವ ಧ್ವನಿಗೆ ರೋಬೋಟ್ ಧ್ವನಿ ಸರಿಸಾಟಿಯಾಗಬಲ್ಲದೇ ಎಂಬುದು ಕುತೂಹಲಕರ! ಬಾನುಲಿಯ ಶ್ರವಣೇಂದ್ರಿಯ ಅನುಭವ ಅನನ್ಯ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries