ನವದೆಹಲಿ: ಭಾರತೀಯ ರೈಲ್ವೆಗೆ ಸೇರಿದ 1068 ಹೆಕ್ಟೇರ್ ಭೂಮಿಯು ಒತ್ತುವರಿಯಾಗಿದೆ. ಇದು ಒಟ್ಟು 4.99 ಲಕ್ಷ ಹೆಕ್ಟೇರ್ ಭೂಮಿಯ ಶೇ 0.21ರಷ್ಟಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ಶುಕ್ರವಾರ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದ ಅವರು, 'ಶೇ 80ರಷ್ಟು ಭೂಮಿ ರೈಲು ಹಳಿಗಳ ಬಳಿ ಇದೆ.
ಶೇ 5ರಷ್ಟು ಅದರ ಸುತ್ತ-ಮುತ್ತ ಇದೆ. ಉಳಿದ ಶೇ 15ರಷ್ಟು ಭೂಮಿ ನಿಲ್ದಾಣ, ಕಾಲೋನಿ, ಆಸ್ಪತ್ರೆ ಮತ್ತು ಇತರ ಉದ್ದೇಶಗಳಿಗಾಗಿ ಬಳಕೆಯಾಗಿದೆ' ಎಂದು ಹೇಳಿದ್ದಾರೆ.
'ಭೂ ಒತ್ತುವರಿ ಗಂಭೀರ ಸಮಸ್ಯೆ ಎನ್ನುವುದು ಸರಿ. ಆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಕೆಲವೊಂದು ವಿಚಾರಗಳನ್ನು ಮಾನವೀಯ ನೆಲೆಗಟ್ಟಿನಲ್ಲಿಯೂ ಪರಿಗಣಿಸಬೇಕಾಗುತ್ತದೆ. ಬಡ ಜನರು ರೈಲ್ವೆ ಭೂಮಿಯಲ್ಲಿ ವಾಸವಾಗಿದ್ದಾರೆ. ಎಲ್ಲೆಲ್ಲಿ ಸಾಧ್ಯವೊ ಅಲ್ಲಿ ರಾಜ್ಯ ಸರ್ಕಾರದೊಂದಿಗೆ ಸೇರಿ ಪರಿಹಾರ ಒದಗಿಸಿದ್ದೇವೆ' ಎಂದು ಹೇಳಿದ್ದಾರೆ.
'ರೈಲ್ವೆ ಭೂಮಿಯ ಸಂಪೂರ್ಣ ಡಿಜಿಟಲೀಕರಣವಾಗಿದೆ. ಭೂಮಿಯ ಇ-ದಾಖಲೆಗಳು ಪೋರ್ಟ್‌ಲ್‌ನಲ್ಲಿವೆ. ಕ್ರಮಬದ್ಧವಾಗಿ ನಕ್ಷೆ ಮಾಡಲಾಗಿದೆ, ಡ್ರೋನ್ ಮತ್ತು ಉಪಗ್ರಹ ಚಿತ್ರಗಳ ಮೂಲಕ ಸರ್ವೆ ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

