ಹಾರ್ಕಿವ್: ಉಕ್ರೇನ್ ಮೇಲೆ ರಷ್ಯಾ ಸೇನೆಯು ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಬೃಹತ್ ದಾಳಿ ಮಾಡಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಹಲವಾರು ಕಟ್ಟಡಗಳಿಗೆ ಹಾನಿಯಾಗಿವೆ.
ಉಕ್ರೇನ್‌ನಲ್ಲಿನ ಇಂಧನ ವ್ಯವಸ್ಥೆ ಮತ್ತು ರೈಲ್ವೆ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ರಷ್ಯಾವು 480 ಡ್ರೋನ್ ಹಾಗೂ 29 ಕ್ಷಿಪಣಿಗಳ ಮೂಲಕ ಶುಕ್ರವಾರ ರಾತ್ರಿ ದಾಳಿ ಮಾಡಿದೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದರು.
'ಉಕ್ರೇನ್‌ನ ಕಟ್ಟಡಗಳು ಮತ್ತು ಮೂಲಸೌಕರ್ಯಗಳನ್ನು ನಾಶಪಡಿಸುವ ಯತ್ನವನ್ನು ರಷ್ಯಾ ಕೈಬಿಟ್ಟಿಲ್ಲ. ಹಾಗಾಗಿ ಮಿತ್ರರಾಷ್ಟ್ರಗಳು ನಮಗೆ ಬೆಂಬಲ ನೀಡಬೇಕು' ಎಂದು ಒತ್ತಾಯಿಸಿದರು.
ಉಕ್ರೇನ್‌ನಲ್ಲಿನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಿಖರ ದಾಳಿ ನಡೆಸಲಾಗಿದೆ. ಅದಕ್ಕೂ ಮೊದಲು ಉಕ್ರೇನ್ 120 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಹೇಳಿದೆ.
'ರಷ್ಯಾದ 453 ಡ್ರೋನ್‌ಗಳು ಮತ್ತು 19 ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ. ಆದರೆ ವಾಯು ರಕ್ಷಣಾ ವ್ಯವಸ್ಥೆಯನ್ನು ದಾಟಿ ಬಂದ 9 ಕ್ಷಿಪಣಿಗಳು ಮತ್ತು 26 ಡ್ರೋನ್‌ಗಳು ಕಟ್ಟಡಗಳ ಮೇಲೆ ಅಪ್ಪಳಿಸಿವೆ' ಎಂದು ಉಕ್ರೇನ್‌ನ ವಾಯಪಡೆ ತಿಳಿಸಿದೆ.
ಹಾರ್ಕಿವ್‌ನಲ್ಲಿನ ಐದು ಮಹಡಿಯ ವಸತಿ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿ 9 ಮಂದಿ ಮೃತಪಟ್ಟಿದ್ದಾರೆ. 15 ಮಂದಿ ಗಾಯಗೊಂಡಿದ್ದಾರೆ. 19 ವಸತಿ ಕಟ್ಟಡಗಳಿಗೆ ಹಾನಿಯಾಗಿವೆ. ವಾಣಿಜ್ಯ ಕಟ್ಟಡಗಳು, ವಿದ್ಯುತ್ ಸಂಪರ್ಕ ವ್ಯವಸ್ಥೆ ಮತ್ತು ವಾಹನಗಳು ಹಾನಿಗೊಂಡಿವೆ. ಇತರ ಪ್ರದೇಶಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

